Advertisement

ಜಮೀನು ಸಂರಕ್ಷಣೆಗೆ ಪಿಟಿಸಿಎಲ್‌ ಹಾದಿ

10:53 PM Feb 17, 2023 | Team Udayavani |

ಪರಿಶಿಷ್ಟ ಜಾತಿ ಮತ್ತು ಪಂಗಡದವರು ನೆಮ್ಮದಿಯ ನಿಟ್ಟುಸಿರು ಬಿಡುವಂಥ ಸುದ್ದಿಯನ್ನು ಸರಕಾರ‌ ನೀಡಿದೆ. ಈ ಸಮುದಾಯಗಳ ಜಮೀನು ಸಂರಕ್ಷಿಸಲು ಈಗಿರುವ ಕಾನೂನು ತೊಡಕುಗಳ ನಿವಾರಣೆಗೆ ಬಹು ನಿರೀಕ್ಷಿತ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್‌)ಗೆ ಸೂಕ್ತ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

Advertisement

ವಿಧಾನ ಮಂಡಲ ಎಸ್ಸಿ-ಎಸ್‌ಟಿ ಕಲ್ಯಾಣ ಸಮಿತಿಯು ಪಿಟಿಸಿಎಲ್‌ ಕಾಯ್ದೆಯಡಿ ಭೂಮಿ ಮರುಮಂಜೂರಾತಿ ಕೋರಿ ಅರ್ಜಿ ಸಲ್ಲಿಸಲು ಕಾಲಮಿತಿ ಅನ್ವಯಿಸದಂತೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಈ ಹಿಂದೆ ಶಿಫಾರಸು ಮಾಡಿತ್ತು. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸಮುದಾಯದ ಬಹುದಿನಗಳ ಬೇಡಿಕೆಯೂ ಇದಾಗಿತ್ತು. ಈಗಲೂ ಈ ಸಂಬಂಧ ಧರಣಿ ಮುಂದುವರಿದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಕಾಯ್ದೆ ತಿದ್ದುಪಡಿಯ ಭರವಸೆ ನೀಡಿದ್ದಾರೆ.

1 ಕೋಟಿ ರೂ.ಗೆ ಹೆಚ್ಚಳ: ರಾಜ್ಯದಲ್ಲಿನ ಕಾಯಕ ಸಮಾಜಗಳಿಂದ ವೃತ್ತಿ ಆಧಾರಿತ ನಿಗಮಗಳ ಸ್ಥಾಪನೆಗಾಗಿ ಸಾಕಷ್ಟು ಬೇಡಿಕೆಗಳು ಬಂದಿದ್ದು, ಈ ಸಾಲಿನಲ್ಲಿ ಇದನ್ನು ಪರಿಶೀಲಿಸಲಾಗುವುದು. ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ 50 ಲಕ್ಷ ರೂ.ವರೆಗಿನ ಸಣ್ಣ ಕಾಮಗಾರಿಗಳಲ್ಲಿ ಶೇ.24ರವರೆಗೆ ಮೀಸಲಾತಿ ನಿಗದಿಪಡಿಸ ಲಾಗಿದೆ. ಈ ಮೊತ್ತವನ್ನು ಒಂದು ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಬಡ್ಡಿ ಸಹಾಯಧನ: ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿಗಳಿಗೆ ವಿವಿಧ ಆದಾಯ ಬರುವ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆಯುವ ಗರಿಷ್ಠ 10 ಲಕ್ಷದವರೆಗಿನ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಒದಗಿಸಲು ಸರಕಾರದಿಂದ ಬಡ್ಡಿ ಸಹಾಯಧನ ಒದಗಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವಿವಿಧ ಆರು ಅಭಿವೃದ್ಧಿ ನಿಗಮಗಳಿಗೆ ನೀಡುತ್ತಿರುವ ಅನುದಾನವನ್ನು ಕಳೆದ ವರ್ಷಕ್ಕಿಂತ ಗಣನೀಯವಾಗಿ ಹೆಚ್ಚಿಸಿ, ಪ್ರಸಕ್ತ ಸಾಲಿನಲ್ಲಿ 795 ಕೋಟಿ ರೂ. ಒದಗಿಸಲಾಗುವುದು.

ಪ್ರತಿ ಕ್ಷೇತ್ರದ 100 ಜನರಿಗೆ ಸಹಾಯಧನ
ಬಾಬು ಜಗಜೀವನ್‌ರಾಮ್‌ ಸ್ವಯಂ ಉದ್ಯೋಗ ಯೋಜನೆ ಅಡಿ ಸರಕು ವಾಹನ ಖರೀದಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೂರು ಫ‌ಲಾನುಭವಿಗಳನ್ನು ಆಯ್ಕೆ ಮಾಡುವುದಾಗಿ ಸರಕಾರ ಘೋಷಿಸಿದೆ. ಈಗಾಗಲೇ ಸ್ವಯಂ ಉದ್ಯೋಗ ಕೈಗೊಳ್ಳಲು ವಿದ್ಯುತ್‌ಚಾಲಿತ ತ್ರಿಚಕ್ರ ಸರಕು ವಾಹನ ಖರೀದಿಗೆ 50 ಸಾವಿರ ರೂ. ಧನಸಹಾಯ ನೀಡುವ ಕಾರ್ಯಕ್ರಮ ಇದೆ. ಇದನ್ನು ಮುಂದುವರಿಸಿ, ಬಾಬು ಜಗಜೀವನ್‌ರಾಮ್‌ ಸ್ವಯಂ ಉದ್ಯೋಗ ಯೋಜನೆ ಅಡಿ ಎಲೆಕ್ಟ್ರಿಕ್‌ ತ್ರಿಚಕ್ರ ಅಥವಾ ನಾಲ್ಕು ಚಕ್ರದ ಸರಕು ವಾಹನಗಳ ಖರೀದಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೂರು ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅವರಿಗೆ ಶೇ.50ರಷ್ಟು ಎರಡು ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು. ಇದಕ್ಕಾಗಿ 400 ಕೋಟಿ ರೂ. ಮೀಸಲಿಡಲಾಗಿದೆ. ಭೂ ಒಡೆತನ ಯೋಜನೆ ಅಡಿ ಘಟಕ ವೆಚ್ಚದ ಮೊತ್ತವನ್ನು 15ರಿಂದ 20 ಲಕ್ಷಗಳಿಗೆ ಹೆಚ್ಚಳ ಮಾಡಿದ್ದು, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ 25 ಲಕ್ಷ ರೂ.ಗಳಿಗೆ ವೃದ್ಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next