ಧಾರವಾಡ: ಸ್ವರ ಸಾಮ್ರಾಟ್ ಪಂ| ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಬಸವರಾಜ ರಾಜಗುರು ಅವರ 25ನೇ ಪುಣ್ಯಸ್ಮರಣೆ ಪ್ರಯುಕ್ತ ನಗರದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಸಂಗೀತ ಸಮಾರೋಹ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಜಿಲ್ಲಾಧಿಕಾರಿ ಡಾ| ಬಿ.ಎಸ್.ಬೊಮ್ಮನಹಳ್ಳಿ ಚಾಲನೆ ನೀಡಿದರು.
ಈ ವೇಳೆ ಟ್ರಸ್ಟ್ ಸದಸ್ಯ ನಿಜಗುಣ ರಾಜಗುರು ಮಾತನಾಡಿ, ಇಂದು ಗುರು-ಶಿಷ್ಯರ ಸಂಬಂಧ ಸಂಗೀತ ಕ್ಷೇತ್ರದಲ್ಲಿ ಮಾತ್ರ ಉಳಿದುಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರವಾಡವನ್ನು ಗುರುತಿಸಿದ ಡಾ| ಬಸವರಾಜ ರಾಜಗುರು ಅವರ ಹೆಸರನ್ನು ಉಳಿಸುವ ಮತ್ತು ಯುವ ಜನತೆಯಲ್ಲಿ ಅವರ ಕಾರ್ಯ ಸಾಧನೆ ಬಿತ್ತುವ ದೃಷ್ಟಿಯಿಂದ ಡಾ| ಬಸವರಾಜ ರಾಜಗುರು ಟ್ರಸ್ಟ್ ನಿರಂತರ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ.
ಅಲ್ಲದೇ ಶೀಘ್ರದಲ್ಲಿಯೇ ಡಾ| ಬಸವರಾಜ ರಾಜಗುರು ಅವರ ಕುರಿತಾದ ಸಾಕ್ಷéಚಿತ್ರ ಹೊರ ತರಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಗುರು-ಶಿಷ್ಯ ಪರಂಪರೆಯಲ್ಲಿ ಅಪಾರ ನಂಬಿಕೆಯಿದ್ದ ಡಾ| ಬಸವರಾಜ ರಾಜಗುರು ಅವರ ನೆನಪಿಗಾಗಿ ಟ್ರಸ್ಟ್ ವತಿಯಿಂದ ಅವರ ಮೊದಲ ಶಿಷ್ಯರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಡಾ| ಬಸವರಾಜ ರಾಜಗುರು ಅವರ ಮೊದಲ ಶಿಷ್ಯರಾದ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪಂ| ಸೋಮನಾಥ ಮರಡೂರ ಹಾಗೂ ಪಂ| ಗಣಪತಿ ಭಟ್ ಸೇರಿದಂತೆ ಸಂತೂರ ವಾದಕ ಮುಂಬೈನ ಪಂ| ಸತೀಶ ವ್ಯಾಸ ಅವರನ್ನು ಸನ್ಮಾನಿಸಲಾಯಿತು. ವಿಶ್ವರಾಜ ರಾಜಗುರು ಹಾಗೂ ಪಂ| ಗಣಪತಿ ಭಟ್ ಅವರಿಂದ ಗಾಯನ ಹಾಗೂ ಮುಂಬಯಿಯ ಪಂ| ಸತೀಶ ವ್ಯಾಸ ಅವರಿಂದ ಸಂತೂರ್ ವಾದನ ಜರುಗಿತು.
ಟ್ರಸ್ಟ್‌ನ ಸದಸ್ಯರಾದ ಭಾರತಿದೇವಿ ರಾಜಗುರು, ಡಾ| ಮುದ್ದು ಮೋಹನ, ಡಾ| ಉದಯಕುಮಾರ ದೇಸಾಯಿ, ಸಿದ್ಧಲಿಂಗೇಶ ರಂಗಣ್ಣವರ ಇದ್ದರು. ಫೆ.16ರಂದು ಸಂಗೀತಾ ಕಟ್ಟಿ (ಗಾಯನ), ಪಂ| ಶ್ರೀಪಾದ ಹೆಗಡೆ (ಗಾಯನ), ಪಂ| ರೋಣು ಮುಜುಮದಾರ (ಕೊಳಲು ವಾದನ) ನಡೆಯಲಿದೆ. ಫೆ.17ರಂದು ಡಾ| ಮುದ್ದುಮೋಹನ್ (ಗಾಯನ), ಪಂ| ಪರಮೇಶ್ವರ ಹೆಗಡೆ (ಗಾಯನ), ಡಾ| ಹನುಮಣ್ಣ ನಾಯಕ ದೊರೆ (ಗಾಯನ), ಪಂ| ಸೋಮನಾಥ ಮರಡೂರ (ಗಾಯನ) ಭಾಗಹಿಸಲಿದ್ದಾರೆ.