Advertisement

ಸೈಕೋಲಜಿ: ಶಂಕ್ರನ ಕೃತ್ಯಕ್ಕೆ ಸಮಾಜದ ಪ್ರತಿಕ್ರಿಯೆ

12:54 PM Oct 27, 2017 | Team Udayavani |

ಅವನ ಹೆಸರು ಜೈ ಶಂಕರ್‌ ಅಲಿಯಾಸ್‌ ಸೈಕೋ ಶಂಕ್ರ! 
– ವಯಸ್ಸು 36, ಈವರೆಗೆ ಮಾಡಿರುವ ಅತ್ಯಾಚಾರ ಹಾಗೂ ಕೊಲೆಗಳ ಸಂಖ್ಯೆ 19 ಕ್ಕೂ ಹೆಚ್ಚು. ಅವನದು ನಾಲ್ಕು ಬಾರಿ ಜೈಲಿನಿಂದ ಪರಾರಿಯಾಗಿರುವ ಕುಖ್ಯಾತಿ. ಊರು ತಮಿಳುನಾಡಿನ ಸೇಲಂ. ಇದಿಷ್ಟು ಹೇಳಿದ ಮೇಲೆ “ಸೈಕೋ ಶಂಕ್ರ’ ಅನ್ನೋದು ಪಕ್ಕಾ ಕ್ರಿಮಿನಲ್‌ ಕುರಿತಾದ ಸಿನಿಮಾ ಅಂತ ಮುಲಾಜಿಲ್ಲದೆ ಹೇಳಬಹುದು.

Advertisement

ಇದು ಕ್ರೈಮ್‌ ಕುರಿತ ಚಿತ್ರವಾದರೂ, ಇಲ್ಲಿ ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರ ಎಂಬುದು ಚಿತ್ರತಂಡದ ಮಾತು. ಈಗಾಗಲೇ ಚಿತ್ರ ಮುಗಿಸಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ ಚಿತ್ರತಂಡ. ಏಕಲವ್ಯ ಪ್ರಶಸ್ತಿ ವಿಜೇತ ಬಾಡಿಬಿಲ್ಡರ್‌ ಪ್ರಸಾದ್‌ ಅವರು “ಸೈಕೋ ಶಂಕ್ರ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, “ಇದು ನನ್ನ ಗೆಳೆಯನ ಸಿನಿಮಾ. ಅವರಿಗೆ ಒಳ್ಳೆಯದಾಗಲಿ. ಈ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಗೆಲುವು ಸಿಗಲಿ’ ಎಂದು ಶುಭ ಕೋರಿದರು ಪ್ರಸಾದ್‌.

ನಿರ್ದೇಶಕ ಪುನೀತ್‌ ಆರ್ಯ ಅವರಿಗೆ ಈಗಷ್ಟೇ ಪರೀಕ್ಷೆ ಬರೆದು ಫ‌ಲಿತಾಂಶಕ್ಕೆ ಕಾಯುತ್ತಿರುವ ಭಯವಂತೆ. “ಇದು ಜೈಲಿನಲ್ಲಿರುವ ಕ್ರಿಮಿನಲ್‌ ಸೈಕೋ ಶಂಕ್ರನ ಜೀವನ ಚಿತ್ರಣವಲ್ಲ. ಅಂಥದ್ದೊಂದು ಪಾತ್ರ ಇದ್ದಾಗ, ಸಮಾಜ ಹೇಗೆ ಪ್ರತಿಕ್ರಿಯಿಸುತ್ತೆ ಮತ್ತು ಅಂತಹ ವ್ಯಕ್ತಿಯನ್ನು ಏನು ಮಾಡುತ್ತೆ ಎಂಬುದರ ಸುತ್ತ ನಡೆಯೋ ಕಥೆ ಇಲ್ಲಿದೆ. ಸಿಕ್ಕ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವ
ಮನಸ್ಥಿತಿಯುಳ್ಳ ವ್ಯಕ್ತಿ ಕುರಿತಾದ ಚಿತ್ರಣವಿದ್ದರೂ, ಯಾವುದೇ ಅಶ್ಲೀಲತೆಯೂ ಇಲ್ಲ. ಒಂದು ಅತ್ಯಾಚಾರದ ಘಟನೆ
ಇಟ್ಟುಕೊಂಡು ಹೆಣೆದಿರುವ ಕಥೆ ಇಲ್ಲಿದೆ. ಸೈಕೋ ಶಂಕ್ರನ ಪಾತ್ರಕ್ಕೆ ಯಾರು ಸೂಕ್ತ ಅಂತ ಯೋಚಿಸಿದಾಗ, ಕಂಡಿದ್ದು ನವರಸನ್‌. ಅವರನ್ನು ಒಪ್ಪಿಸಿ, ಕೆಲಸ ತೆಗೆದುಕೊಂಡಿದ್ದೇನೆ. 

ನಾನು ಖುದ್ದು ಸೈಕೋ ಶಂಕ್ರನನ್ನು ಭೇಟಿ ಮಾಡಿ, ಅವನ ಚಲನವಲನ, ಮಾತು, ನೋಟ ಎಲ್ಲವನ್ನೂ ಹತ್ತಿರದಿಂದ ನೋಡಿ, ಅವನಂತೆಯೇ ನವರಸನ್‌ ಅವರಿಂದ ನಟನೆ ಮಾಡಿಸಿದ್ದೇನೆ. ಶರತ್‌ಲೋಹಿತಾಶ್ವ ಚಿತ್ರದ ಇನ್ನೊಂದು ಹೈಲೈಟ್‌. ಅವರಿಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಯಶಸ್‌ ಸೂರ್ಯ ಕೂಡ ಇಲ್ಲಿ ಲವರ್‌ಬಾಯ್‌ ಪಾತ್ರ ನಿರ್ವಹಿಸಿದ್ದಾರೆ. ಇಲ್ಲಿ ಪ್ರಣವ್‌ ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಕೊಳ್ಳೆಗಾಲ ಮೂಲದ ವ್ಯಕ್ತಿಯಾಗಿ, ಅದೇ ಸೊಗಡಿನ ಭಾಷೆಯಲ್ಲೇ ಮಾತನಾಡಿದ್ದಾರೆ. ಇಲ್ಲಿ ವೀರಪ್ಪನ್‌ ಓಡಾಡಿದ ಸ್ಥಳ ನಾಗಮಲೈನಲ್ಲಿ ಚಿತ್ರೀಕರಿಸಿದ್ದೇವೆ. ಸುಮಾರು 12 ದಿನಗಳ
ಕಾಲ ಇಡೀ ತಂಡ ಅಲ್ಲಿಗೆ ಹೋಗಿ ಕಷ್ಟಪಟ್ಟು ಚಿತ್ರೀಕರಣದಲ್ಲಿ ಪಾಲ್ಗೊಂಡು ಬಂದಿದೆ.

ಅದೊಂದು ಇಲ್ಲಿ ಮುಖ್ಯವಾದ ಅಂಶ’ ಎನ್ನುತ್ತಾರೆ ನಿರ್ದೇಶಕರು. ಇನ್ನು, ನವರಸನ್‌ಗೆ ಇಲ್ಲಿ ಹೊಸ ರೀತಿಯ ಅನುಭವ ಆಗಿದೆಯಂತೆ. ಅವರಿಗಿದು ಮೂರನೇ ಚಿತ್ರವಾಗಿರುವುದರಿಂದ ಎಲ್ಲೋ ಒಂದು ಕಡೆ ಒಳ್ಳೆಯ ಚಿತ್ರದಲ್ಲಿ ನೆಗೆಟಿವ್‌ ಪಾತ್ರವಾದರೂ, ಆ ಪಾತ್ರದ ಮೂಲಕ ಒಂದು ಸಂದೇಶ ಕೊಡುವಂತಹ ಚಿತ್ರ ಮಾಡಿದ ಖುಷಿ ಇದೆ. “ಇಲ್ಲಿ ಎಲ್ಲರ ಶ್ರಮ ಇರುವುದಕ್ಕೆ ಚಿತ್ರ ನಿರೀಕ್ಷೆ
ಮೀರಿ ಮೂಡಿಬಂದಿದೆ. ಆರಂಭದಲ್ಲಿ ನೆಗೆಟಿವ್‌ ಪಾತ್ರ ಬೇಡ ಅಂದಿದ್ದೆ. ಆಮೇಲೆ ಅಂತಹ ಪಾತ್ರ ಸಿಗೋದೇ ಅಪರೂಪ ಬಿಡಬಾರದು, ಅಂತ ಚಾಲೆಂಜಿಂಗ್‌ ಅಂದುಕೊಂಡು 15 ಕೆಜಿ ತೂಕ ಇಳಿಸಿಕೊಂಡು ಮಾಡಿದ್ದಾಗಿ’ ಹೇಳಿಕೊಂಡರು ನವರಸನ್‌. 

Advertisement

ಪ್ರಣವ್‌ ಇಲ್ಲಿ ನರಸಿಂಹ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಋಷಿಕಾ ಶರ್ಮ ನಾಯಕಿಯಾಗಿ ನಟಿಸಿದರೆ, ಗಾಯಕಿ ವೇದಶ್ರೀ ಇಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರಂತೆ. ತಮಿಳು ನಟ ವಿಶಾಲ್‌ ಅವರ ತಂದೆ ಜಿ.ಕೆ.ರೆಡ್ಡಿ ಅವರಿಗೂ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ. ರವಿ ಬಸ್ರೂರ್‌ ಇಲ್ಲಿ ಹಿನ್ನೆಲೆ ಸಂಗೀತ ನೀಡಿದ್ದಕ್ಕೆ ಖುಷಿಗೊಂಡಿದ್ದಾರೆ. ಕಥೆ ಚೆನ್ನಾಗಿ ಮಾಡಿಕೊಂಡಿದ್ದರಿಂದ, ಸಿನಿಮಾ ಚೆನ್ನಾಗಿ ಬಂದಿದೆ. ಅದಕ್ಕೆ ತಕ್ಕ ಕೆಲಸ ಮಾಡಿದ್ದೇನಷ್ಟೇ. ಒಳ್ಳೆಯ ತಂಡ ಎಲ್ಲರೂ ನೋಡುವ ಚಿತ್ರ ಮಾಡಿದೆ ಎಂದರು ರವಿ ಬಸ್ರೂರ್‌. ನಿರ್ಮಾಪಕ ಪ್ರಭಾಕರ್‌ಗೆ ಒಳ್ಳೆಯ ಚಿತ್ರ ಮಾಡಿರುವ ಖುಷಿ ಇದೆಯಂತೆ. ಚಿತ್ರಕ್ಕೆ “ಯು/ಎ’ ಪ್ರಮಾಣ ಪತ್ರದ
ನಿರೀಕ್ಷೆಯಲ್ಲಿರುವುದಾಗಿ ಹೇಳಿದರು ಪ್ರಭಾಕರ್‌. ನಿತಿನ್‌ ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಧರ್‌ ಸಂಗೀತವಿದೆ. ವಿಶ್ವ ಸಂಕಲನ ಮಾಡಿದ್ದಾರೆ.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next