Advertisement

ಅರ್ಥಮಾಡುವವರಿಗಾಗಿ ಮನಃಶಾಸ್ತ್ರ

12:52 PM Dec 05, 2018 | |

ನಾವು ನಮ್ಮನ್ನು ಅರ್ಥೈಸುವುದು, ಇನ್ನೊಬ್ಬರನ್ನು ಅರ್ಥಮಾಡುವುದು ವಿಶೇಷವೇ. ಹಾವ-ಭಾವ, ವರ್ತನೆ ಯೋಚನಾ ಕ್ರಮಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಲಿಕಾ ಹಂತದಲ್ಲಿಯೇ ಇನ್ನೊಬ್ಬರ ಮನಸ್ಸಿನಲ್ಲಿರುವ ಭಾವನೆ, ತೊಳಲಾಟ, ಆತಂಕ ಮುಂತಾದವುಗಳನ್ನು ಕಂಡು ಹಿಡಿದು ಅದನ್ನು ಎದುರಿಸಲು ಕಲಿಸಿಕೊಡುವುದನ್ನು ಈ ವಿದ್ಯೆ ತಿಳಿಸುತ್ತದೆ. ಈ ಶಿಕ್ಷಣ ಕಲಿಕೆಗೆ ವಿದ್ಯಾರ್ಥಿಗಳು ಆಸಕ್ತರಾಗುತ್ತಿರುವುದು ಗಮನಾರ್ಹ ಸಂಗತಿ.

Advertisement

ಗುರುಕುಲ ಶಿಕ್ಷಣ ಪದ್ಧತಿಯಿಂದ ಹಿಡಿದು ಮೆಕಾಲೆ ಶಿಕ್ಷಣ ಪದ್ಧತಿಯವರೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗಿವೆ. ಎಷ್ಟೆಂದರೆ ಕೇವಲ ಕೆಲವೇ ಕೆಲವು ಕೋರ್ಸ್‌ಗಳನ್ನು ಮಾತ್ರ ಪಡೆದುಕೊಳ್ಳಲು ಅವಕಾಶವಿದ್ದ ಜಾಗದಲ್ಲಿ ಹಲವಾರು ಹೊಸ ಹೊಸ ರೀತಿಯ ಕೋರ್ಸ್‌ಗಳು ಹುಟ್ಟಿಕೊಂಡು ಶೈಕ್ಷಣಿಕ ಕ್ರಾಂತಿಯೇ ಕಳೆದ ಕೆಲ ದಶಕಗಳಿಂದ ನಡೆದು ಹೋಗಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ರಂಗದ ಕಲಿಕೆಯಲ್ಲಿ ವಿಪುಲ ಅವಕಾಶವನ್ನೂ ಶಿಕ್ಷಣ ರಂಗ ದೊರಕಿಸಿಕೊಟ್ಟಿದೆ.

ಮಾನವನ ಮನಸ್ಸನ್ನು ಅರ್ಥ ಮಾಡಿಕೊಂಡು ಅವನನ್ನು ಸದೃಢನಾಗಿ ರೂಪಿಸುವಲ್ಲಿ ಮನಃ ಶಾಸ್ತ್ರ ಶಿಕ್ಷಣ ಕಲಿಕೆ ಪ್ರಾಮುಖ್ಯತೆಗೆ ಬರುತ್ತದೆ. ಇತ್ತೀಚೆಗಂತೂ ಮನಃಶಾಸ್ತ್ರಜ್ಞರ ಸಂಖ್ಯೆ ಬಹಳ ಅಗತ್ಯವಿದ್ದು, ಆ ಕೋರ್ಸ್‌ ಕಲಿಕೆಗೆ ಬೇಡಿಕೆಯೂ ಅಧಿಕಗೊಳ್ಳುತ್ತಿದೆ. ಒಂದು ಕಾಲದಲ್ಲಿ ಬೇಡಿಕೆ ಕಡಿಮೆ ಎಂಬ ಮಾತ್ರಕ್ಕೆ ಮನಃಶಾಸ್ತ್ರ ಕಲಿಕೆಯಿಂದ ಹಿಂದಡಿ ಇಡುತ್ತಿದ್ದವರು, ಪ್ರಸ್ತುತ ಅದರ ಮಹತ್ವವನ್ನು ಅರಿತು ಮನಃಶಾಸ್ತ್ರ ಕಲಿಕೆಗೆಂದೇ ಬೇಡಿಕೆ ಇಡುತ್ತಿದ್ದಾರೆ.

ಹೆಚ್ಚಿದ ಬೇಡಿಕೆ
ಒತ್ತಡದ ಬದುಕು, ಮನುಷ್ಯನನ್ನು ಜೀವಂತ ಕೊಲ್ಲುತ್ತಿರುವ ಸಿಟ್ಟು, ಕೀಳರಿಮೆ, ಭಯ ಮುಂತಾದವುಗಳಿಂದ ಮುಕ್ತಿ ಹೊಂದಿ ಸಶಕ್ತ ಜೀವನ ನಿರೂಪಿಸಿಕೊಳ್ಳುವುದಕ್ಕೆ ಮನಃಶಾಸ್ತ್ರಜ್ಞರ ಸಲಹೆ- ಮಾರ್ಗದರ್ಶನ ಅಗತ್ಯ. ಈಗಿನ ಆಧುನಿಕ ಜೀವನ ಶೈಲಿಯ ಒತ್ತಡದಿಂದ ಬಿಡುಗಡೆ ಪಡೆಯುವುದೇ ಒಂದು ಸವಾಲು. ಒತ್ತಡದಿಂದಾಗಿಯೇ ಮಾನಸಿಕ ದೃಢತೆ ಕಳೆದುಕೊಂಡು ಸಿಟ್ಟು, ಭಯ ಮುಂತಾದವುಗಳಿಗೆ ಒಳಗಾಗಿ ಶಾಶ್ವತ ಮನೋವೈಕಲ್ಯಕ್ಕೊಳಗಾದ ಮಂದಿಯೂ ಹೆಚ್ಚುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮನಃಶಾಸ್ತ್ರಜ್ಞರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯವೂ ಆಗಿದೆ. ಹೆಚ್ಚಿದ ಬೇಡಿಕೆ ಮತ್ತು ಕಲಿಕಾಸಕ್ತಿಯ ಕಾರಣಕ್ಕಾಗಿ ಮನಃಶಾಸ್ತ್ರ ಶಿಕ್ಷಣ ಅಗತ್ಯವಾಗುತ್ತಿದೆ.

ಯಾರೂ ಕಲಿಯಬಹುದು
ಮನಃಶಾಸ್ತ್ರ ಕಲಿಕೆ ಕೇವಲ ವಿಜ್ಞಾನ ವಿದ್ಯಾರ್ಥಿಗಳಿಗೆ ಮೀಸಲಾಗಿಲ್ಲ. ವಾಣಿಜ್ಯ ಅಥವಾ ಕಲಾ ವಿದ್ಯಾರ್ಥಿಗಳೂ ಸುಲಭವಾಗಿ ಕಲಿಯುವ ವಿದ್ಯೆ ಮನಃಶಾಸ್ತ್ರ. ಕಲಿಕೆ ವೈಜ್ಞಾನಿಕ ತಳಹದಿಯಲ್ಲಿದ್ದರೂ, ಆಸಕ್ತಿ ಹೊಂದಿರುವ ಯಾವುದೇ ವಿದ್ಯಾರ್ಥಿಗೂ ಈ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗುತ್ತದೆ. ಕಲಿಕಾ ಹಂತದಲ್ಲಿಯೇ ಇನ್ನೊಬ್ಬರ ಮನಸ್ಸಿನಲ್ಲಿರುವ ಭಾವನೆ, ತೊಳಲಾಟ, ಆತಂಕ ಮುಂತಾದವುಗಳನ್ನು ಕಂಡು ಹಿಡಿದು ಅದನ್ನು ಎದುರಿಸಲು ಕಲಿಸಿಕೊಡುವುದನ್ನು ಈ ವಿದ್ಯೆ ತಿಳಿಸುತ್ತದೆ. ಜೀವನದ ಹಂತಗಳಲ್ಲಿ ವ್ಯಕ್ತಿಯಲ್ಲಾಗುವ ಬದಲಾವಣೆಗಳು ಮತ್ತು ಅವನ್ನು ಹೀಗೆ ನಿಭಾಯಿಸಬೇಕು ಎಂಬುದು ಪ್ರಾಥಮಿಕ ಹಂತದಲ್ಲಿಯೇ ತಿಳಿಯುತ್ತದೆ.

Advertisement

ಅಗಾಧ ಅವಕಾಶ
ಒಂದು ಮಾಹಿತಿ ಪ್ರಕಾರ ದೇಶದ ಸುಮಾರು 300 ವಿಶ್ವ ವಿದ್ಯಾನಿಲಯಗಳಲ್ಲಿ ಮನಃಶಾಸ್ತ್ರ ಕೋರ್ಸ್‌ ಕಲಿಸಲಾಗುತ್ತಿದೆ. ಕೆಲ ಕಾಲೇಜುಗಳಲ್ಲಿ ಪಿಯುಸಿಯಲ್ಲೇ ಮನಃಶಾಸ್ತ್ರ ಕಲಿಕೆಗೆ ಅವಕಾಶವಿದೆ. ಇನ್ನು ಕೆಲವೆಡೆ ಪದವಿ ಹಂತದಿಂದ ಈ ಕೋರ್ಸ್‌ ಲಭ್ಯವಿದೆ. ಮನಃ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡ ಬಳಿಕ ಪಿಎಚ್‌ಡಿ, ಉಪನ್ಯಾಸ ವೃತ್ತಿಗೆ ಸಾಕಷ್ಟು ಅವಕಾಶಗಳಿವೆ. ಅಲ್ಲದೆ ಸ್ವಂತ ಕ್ಲಿನಿಕ್‌ ಆರಂಭಿಸಿ ವೈದ್ಯರಾಗಿಯೂ ಸೇವೆ ಸಲ್ಲಿಸಬಹುದು. ಆದರೆ ಹೀಗೆ ಸ್ವಂತ ಕ್ಲಿನಿಕ್‌ ತೆರೆಯುವ ಮುನ್ನ ಒಂದಷ್ಟು ವರ್ಷ ಕಾಲ ನುರಿತ ವೈದ್ಯರೊಂದಿಗೆ ಸಹಾಯಕರಾಗಿ ಅಥವಾ ಇಂಟರ್ನ್ಶಿಪ್‌ ಮಾದರಿಯಲ್ಲಿ ಸೇವೆ ಸಲ್ಲಿಸುವುದು ಅವಶ್ಯ. ಏಕೆಂದರೆ ಮಾನಸಿಕ ರೋಗಿಯೊಬ್ಬನಿಗೆ ಯಾವ ರೀತಿಯ ಚಿಕಿತ್ಸೆಗಳನ್ನು ಹೇಗೆ ನೀಡಬೇಕು, ಅವನನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ಒಬ್ಬ ವೈದ್ಯನಾಗಿ ಒಬ್ಬ ರೋಗಿಯೊಂದಿಗಿನ ವ್ಯವಹಾರ ಹೇಗಿರಬೇಕು ಮುಂತಾದವುಗಳನ್ನು ಕಲಿತುಕೊಳ್ಳಲು ಇದು ಸಹಕಾರಿಯಾಗುತ್ತದೆ. ವ್ಯಕ್ತಿಯ ಇಡೀ ಜೀವನವನ್ನೇ ಬದಲಾಯಿಸುವ ಶಕ್ತಿ ಮನಃಶಾಸ್ತ್ರಕ್ಕಿರುವುದರಿಂದ ಈ ವೈದ್ಯರ ಸೇವೆ ಇತರೆಲ್ಲ ಸೇವೆಗಳಿಗಿಂತ ತುಸು ಅಧಿಕವೇ. ಬೇಡಿಕೆ ಹೆಚ್ಚುತ್ತಿರುವುದರಿಂದ ವಿವಿಧ ಆಸ್ಪತ್ರೆಗಳಲ್ಲಿಯೂ ವೈದ್ಯರ ನೇಮಕಾತಿಗಳು ನಡೆಯುವುದರಿಂದ ಅಲ್ಲೂ ಚಾನ್ಸ್‌ ಗಿಟ್ಟಿಸಿಕೊಳ್ಳಬಹುದು. 

ಅವಿಭಾಜ್ಯ ಅಂಗ
ಒಂದು ಕಾಲದಲ್ಲಿ ಮನಃಶಾಸ್ತ್ರ ಮತ್ತು ಅದರ ಉಪಯೋಗ ಬಲ್ಲದವರೇ ಹೆಚ್ಚಿದ್ದರು. ಆದರೆ ಪ್ರಸ್ತುತ ವೇಗದ ಬದುಕಿನಲ್ಲಿ ಮನಃಶಾಸ್ತ್ರ ಎಂಬುದು ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಮಕ್ಕಳಲ್ಲಿ ಆದ ಬದಲಾವಣೆಗಳನ್ನು ಕಂಡು ಚಿಂತಿತರಾಗುವ ಪೋಷಕರು, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಆತಂಕಗೊಳ್ಳುವ ಶಿಕ್ಷಕರು, ವಿಪರೀತ ಕೆಲಸಗಳಿಂದಾಗಿ ಮಾನಸಿಕ ಸಮಸ್ಯೆಗೆ ಒಳಗಾಗುವ ಉದ್ಯೋಗಿಗಳು..ಹೀಗೆ ಜೀವನದ ಹಲವಾರು ಹಂತಗಳಲ್ಲಿ ಈ ಮಾನಸಿಕ ಸಮಸ್ಯೆ ಕಾಡುತ್ತಲೇ ಇರುತ್ತದೆ. ಇವುಗಳನ್ನು ಹತೋಟಿಗೆ ತರಲು ಮನಃಶಾಸ್ತ್ರದ ಆವಶ್ಯಕತೆ ಬಹಳವಾಗಿದೆ.

ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next