ಬೇರೆ ಮನೆಯ ನಿರ್ಧಾರ ಮಾಡುವಷ್ಟರಲ್ಲಿ ಬ್ಯಾಂಕಿನಿಂದ ವರ್ಗವಾಗಿದೆ ಸ್ವರೂಪಾಗೆ. ಸೊಸೆಯ ನೋವಾಗಲೀ- ಮಗನ ಕೊರತೆಯಾಗಲೀ ಅವರಿಗೆ ಗೊತ್ತಿಲ್ಲ. ನನ್ನ ಬಾಯಿ ಕಟ್ಟಿಹೋಯಿತು. ಸತ್ಯ ನುಂಗಿ, ನೋವು ಸಹಿಸಿಕೊಂಡ ಈ ರೀತಿಯ ಗೃಹಿಣಿಯರಿಗೆ ನನ್ನ ಸಲಾಮು!!
ಮೂವತ್ಮೂರು ವರ್ಷದ ಸ್ವರೂಪಾ ವಿಧವೆ. ಎರಡೂವರೆ ವರ್ಷದ ಮುದ್ದಾದ ಮಗು ಇದೆ. ಬ್ಯಾಂಕ್ ನೌಕರಿ ಇದೆ. ಅತ್ತೆ- ಮಾವನನ್ನು ಬಿಟ್ಟು ಬೇರೆ ಮನೆ ಮಾಡಿಕೊಳ್ಳುವ ಉದ್ದೇಶವನ್ನು ಚರ್ಚಿಸಲು ನನ್ನ ಬಳಿ ಬಂದಿದ್ದಳು. ಅವಳ ತಂದೆ- ತಾಯಿ ಈ ಯೋಜನೆಗೆ ಅನುಮತಿ ನೀಡಿಲ್ಲ. ಮೊಮ್ಮಗನನ್ನು ಅತ್ತೆ- ಮಾವನಿಂದ ದೂರ ಮಾಡುವ ಉದ್ದೇಶವಿಲ್ಲದಿದ್ದರೂ ಅವರು ಕೊಡುವ ಮಾನಸಿಕ ಕಿರುಕುಳ ಸಹಿಸಿಕೊಳ್ಳಲೂ ಸಿದ್ಧವಿರಲಿಲ್ಲ. ಮದುವೆಯಾದ ದಿನದಿಂದಲೂ ಸ್ವರೂಪಾಗೆ ನೆಮ್ಮದಿಯಿಲ್ಲ.
ಇತ್ತೀಚೆಗೆ ಕಾಮನ ಹುಣ್ಣಿಮೆಯ ದಿನ ಈಕೆ ಮಗುವಿನ ಖುಷಿಗಾಗಿ ಬಣ್ಣ ಎರಚಾಡಿ ಸ್ನೇಹಿತರ ಜೊತೆ ಖುಷಿಪಟ್ಟಿದ್ದು, ಅತ್ತೆ- ಮಾವನಿಗೆ ಇಷ್ಟವಾಗಿಲ್ಲ. “ನಮಗೆ ಮಗನ್ನ ಕಳ್ಕೊಂಡು ಎಷ್ಟು ಬೇಸ್ರ ಐತ್ರೀ, ಇವಳು ನೋಡಿದ್ರೆ ಹೀಂಗ್ ಖುಷಿ ಪಡ್ತಾಳೆ, ಹೆಂಡ್ತೀರು ಬೇಗ ನೋವು ಕಳ್ಕೊಂಡ್ ಬಿಡ್ತಾರೆ; ಅಪ್ಪ- ಅಮ್ಮನಿಗೆ ಹಾಗಲ್ಲ, ಪುತ್ರ ಶೋಕಂ ನಿರಂತರಂ’ ಅಂತ ಮಾತನಾಡಿದ್ದಾರೆ. ಹಿಂದೆಯೂ, ಮದುವೆಯಾದ ಕೆಲವು ತಿಂಗಳಿನಲ್ಲೇ ಬ್ಯಾಂಕಿನಲ್ಲಿ ವಿಧವಾ ಪಿಂಚಣಿ ಯೋಜನೆಗೆ ಇವಳು ಅರ್ಜಿ ನೀಡಿದಾಗ, ಅಪಶಕುನವೆಂದು ಕೂಗಾಡಿದ್ದರಂತೆ.
ಸುರೇಶ್ ಗೆ ವೀರ್ಯಾಣುವಿನ ಕೊರತೆ ಇತ್ತು. ಮಕ್ಕಳಾಗುವುದು ಸಾಧ್ಯವಿರಲಿಲ್ಲ. ವಿಷಯ ಗೊತ್ತಿದ್ದೂ ಮದುವೆಯಾದ ಮೇಲೆ ತಿಳಿಸಿದರಲ್ಲ ಎಂದು ಸ್ವರೂಪಾಗೆ ಬೇಸರವಿತ್ತು. ಇದರಿಂದಾಗಿ ಅವರ ನಡುವೆ ಸ್ನೇಹ- ದಾಂಪತ್ಯ ಅಷ್ಟಕಷ್ಟೇ ಇತ್ತು. ಹನಿಮೂನ್‌ಗೂ ಹೋಗಲಿಲ್ಲ. ನಂತರ sperm bankನಿಂದ ದತ್ತು ಪಡೆದ ವೀರ್ಯಕ್ಕೆ ಇವಳು ಬಸುರಾದದ್ದು.
ಡೆಲಿವರಿಗೆ ತವರಿಗೆ ಹೋಗಿದ್ದಾಗ, ಸುರೇಶ್ ಸಹೋದ್ಯೋಗಿಯೊಡನೆ ಅಫೇರ್ ಶುರು ಹಚ್ಚಿಕೊಂಡಿದ್ದು, ಸ್ವರೂಪಾ ಗಮನಕ್ಕೆ ಬಂದು, ಜಗಳವಾಗುತ್ತಿತ್ತು. ಕೊನೆಗೂ ಅಫೇರ್ ಮರೆತು, ಸ್ವರೂಪಾಳನ್ನು ರಮಿಸಲು ಊಟಿಗೆ ಕರಕೊಂಡು ಹೋಗಲು ಸಿದ್ಧತೆ ಮಾಡಿಕೊಂಡಿದ್ದರು. ಅತ್ತೆ- ಮಾವ ಇವರ ಜೊತೆ ತಾವೂ ಊಟಿಗೆ ಹೊರಟಾಗ ಸ್ವರೂಪಾಗೆ ಬೇಸರ. ಅವನಿಗೆ ತಂದೆ- ತಾಯಿಯನ್ನು ಬರಬೇಡಿ ಅನ್ನಲು ಮನಸ್ಸಿಲ್ಲ. ಸ್ವರೂಪಾಳನ್ನು ಎದುರು ಹಾಕಿಕೊಳ್ಳುವುದೂ ಬೇಕಿರಲಿಲ್ಲ. ಕಡೆಗೆ ತಂದೆ- ತಾಯಿಯರನ್ನು ಒಲ್ಲದ ಮನಸ್ಸಿನಿಂದ ಬರಬೇಡಿ ಎಂದು ತಿಳಿಸಿ, ಊಟಿಗೆ ಹೊರಡುವ ಎಲ್ಲಾ ತಯಾರಿ ಮಾಡಿಕೊಂಡರು.
ಹೊರಡುವ ಹಿಂದಿನ ರಾತ್ರಿ ಸುರೇಶ್ ನಿದ್ರೆಗೆ ಜಾರಿದವರು ಮತ್ತೆ ಏಳಲೇ ಇಲ್ಲ. ಬೆಳಗ್ಗೆ ಕಾರಿನಲ್ಲಿ ಹೊರಡಬೇಕು. ಖುಷಿಯಾಗಿ ಗಂಡನನ್ನು ಎಬ್ಬಿಸ ಹೊರಟವಳಿಗೆ ಆಘಾತ ಕಾದಿತ್ತು. ಸ್ವರೂಪಾಳ ಜಗಳದಿಂದಲೇ ಮಗನಿಗೆ ಒತ್ತಡವಾಯಿತು ಎಂಬ ತರ್ಕ. ಮಗನನ್ನು ಬಲಿ ತೆಗೆದುಕೊಂಡಳು ಎಂದು ಚುಚ್ಚಿ ಮಾತಾಡಿದಾಗ, ಮೊಮ್ಮಗ ಅವರ ಮಗನದ್ದಲ್ಲ ಎಂದು ಕಿರುಚಿ ಹೇಳಬೇಕು ಎನಿಸಿದೆ ಸ್ವರೂಪಾಗೆ. ಬೇರೆ ಮನೆಯ ನಿರ್ಧಾರ ಮಾಡುವಷ್ಟರಲ್ಲಿ ಬ್ಯಾಂಕಿನಿಂದ ವರ್ಗವಾಗಿದೆ ಸ್ವರೂಪಾಗೆ. ಸೊಸೆಯ ನೋವಾಗಲೀ- ಮಗನ ಕೊರತೆಯಾಗಲೀ ಅವರಿಗೆ ಗೊತ್ತಿಲ್ಲ. ನನ್ನ ಬಾಯಿ ಕಟ್ಟಿಹೋಯಿತು. ಸತ್ಯ ನುಂಗಿ, ನೋವು ಸಹಿಸಿಕೊಂಡ ಈ ರೀತಿಯ ಗೃಹಿಣಿಯರಿಗೆ ನನ್ನ ಸಲಾಮು!!
— ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ