ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಕೋರ್ಸ್‌ಗೆ ಈಗ ಹೊಸ ಲುಕ್ ಸಿಕ್ಕಿದೆ. ಈ ಕೋರ್ಸ್‌ನ ಪಠ್ಯಕ್ರಮಕ್ಕೆ ಬಹುಶಿಸ್ತೀಯ ಆಯಾಮವನ್ನು ನೀಡಲಾಗಿದ್ದು, ಇನ್ನು ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ ಮಾಡುವವರು ಮನಃಶಾಸ್ತ್ರದಿಂದ ಕೃತಕ ಬುದ್ಧಿಮತ್ತೆವರೆಗೆ, ಬ್ಲಾಕ್‌ಚೈನ್ ತಂತ್ರಜ್ಞಾನದಿಂದ ದತ್ತಾಂಶ ವಿಜ್ಞಾನದವರೆಗೆ, ಭಾರತೀಯ ಸಂವಿಧಾನದಿಂದ ಸಾಂಪ್ರದಾಯಿಕ ಜ್ಞಾನದವರೆಗೆ ವೈವಿಧ್ಯಮಯ ವಿಷಯಗಳನ್ನು ಕಲಿಯಲಿದ್ದಾರೆ.
ವಾಣಿಜ್ಯಕ್ಕೆ ಸಂಬಂಧಿಸಿದ 2 ದಿನಗಳ ರಾಷ್ಟ್ರೀಯ ಶಿಕ್ಷಣ ಶೃಂಗದಲ್ಲಿ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆ (ಐಸಿಎಐ) ಈ ಹೊಸ ಪಠ್ಯಕ್ರಮವನ್ನು ಘೋಷಣೆ ಮಾಡಿದೆ. ಇದಕ್ಕೆ ಕೇಂದ್ರ ಸರಕಾರದ ಒಪ್ಪಿಗೆ ಸಿಗಲು ಬಾಕಿಯಿದೆ.
ಇದೇ ವೇಳೆ ಕಂಪ್ಯೂಟರ್ ಆಧರಿತ ವ್ಯವಸ್ಥೆಯಲ್ಲಿ ಮತ್ತು ಭಾರತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸುವ ಕುರಿತೂ ಚಿಂತನೆ ನಡೆಸಲಾಗಿದೆ ಎಂದು ಐಸಿಎಐ ಹೇಳಿದೆ. ಪ್ರಸ್ತುತ ದೇಶದಲ್ಲಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಸಿಎ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಒಂದು ಶೈಕ್ಷಣಿಕ ಸಂಸ್ಥೆಯಾಗಿ ಜಾಗತಿಕ ವೃತ್ತಿಪರರನ್ನು ರೂಪಿಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಇದೇ ಕಾರಣಕ್ಕಾಗಿ ನಾವು ಆಳವಾಗಿ ಚಿಂತನೆ ನಡೆಸಿ, ತಂತ್ರಜ್ಞಾನ, ನೈತಿಕತೆ, ಹೊಸ ಎನ್‌ಇಪಿಗಳ ಆಧಾರದಲ್ಲಿ ಹೊಸ ಪಠ್ಯಕ್ರಮವನ್ನು ರೂಪಿಸಿದ್ದೇವೆ.
ತಂತ್ರಜ್ಞಾನವನ್ನು ನೀವು ಕಲಿಯದೇ ಇದ್ದರೆ ಯಾವುದೇ ಕ್ಷೇತ್ರದಲ್ಲಿ ನೀವು ದೂರ ಸಾಗಲು ಸಾಧ್ಯವಿಲ್ಲ. ಅಕೌಂಟಿಂಗ್ ಕೂಡ ಹಾಗೆಯೇ. ನಾವು ಅದನ್ನು ಐಸಿಎಐ ಪರಿಧಿಯೊಳಗೇ ಇಟ್ಟರೆ ಈ ಕ್ಷೇತ್ರಕ್ಕೆ ನ್ಯಾಯ ಕೊಟ್ಟಂತಾಗುವುದಿಲ್ಲ. ಅದು ಕೇವಲ ಭಾರತ ಮಾತ್ರವಲ್ಲ, ಜಗತ್ತಿಗೇ ತೆರೆದುಕೊಳ್ಳಬೇಕು ಎಂದು ಐಸಿಎಐ ಅಧ್ಯಕ್ಷ ದೇಬಶಿಶ್ ಮಿತ್ರಾ ಅಭಿಪ್ರಾಯಪಟ್ಟಿದ್ದಾರೆ.