ಗದಗ: ಮನಸ್ಸಿಗೆ ಮುದ ನೀಡುವ ಸಂಗೀತ ಆಲಿಕೆಯಿಂದ ಮನುಷ್ಯನ ಮಾನಸಿಕ ಒತ್ತಡ ನಿಗ್ರಹಗೊಂಡು ಮನಸ್ಸು ಪ್ರಸನ್ನಗೊಳ್ಳುತ್ತದೆ ಎಂದು ಎನ್.ಬಿ.ಪಾಟೀಲ ಅಭಿಪ್ರಾಯಪಟ್ಟರು. ಶ್ರೀಗುರು ಸಾಂಸ್ಕೃತಿಕ ಶಿವಾನುಭವ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಇಲ್ಲಿನ ಎಸ್.ಎಂ.ಕೃಷ್ಣಾ ನಗರದ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ನಡೆದ “ಸುಗಮ ಸಂಗೀತೋತ್ಸವ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಗೀತ ಯೋಗವಿದ್ದಂತೆ. ಅದನ್ನು ನಿರಂತರ ಪ್ರಯತ್ನದಿಂದ ಸಿದ್ಧಿಸಿಕೊಳ್ಳಬೇಕು. ರೋಗಗಳನ್ನು ನಿಯಂತ್ರಿಸುವ ಶಕ್ತಿ ಸಂಗೀತಕ್ಕೆ ಇದೆ ಎಂದು ತಜ್ಞರ ಅಭಿಪ್ರಾಯವಿದೆ. ಆದ್ದರಿಂದ ನಾವಿಂದು ಅವಸರ ಮತ್ತು ಒತ್ತಡದ ಬದುಕನ್ನು ಸಾಗಿಸುತ್ತಿದ್ದೇವೆ. ದಣಿದ ದೇಹಕ್ಕೆ ವಿಶ್ರಾಂತಿ ಬೇಕು. ಸಂಗೀತ ಆಲಿಕೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಪ್ರಭು ಗೋಕಾವಿ, ಯಚ್ಚರಪ್ಪ ಹೊಳೆಯಪ್ಪನವರ ಸುಗಮ ಸಂಗೀತೋತ್ಸವ ಕುರಿತು ಮಾತನಾಡಿದರು. ಸಮಿತಿ ಸದಸ್ಯರಾದ ಶರಣಪ್ಪ ಇಟಗಿ, ಅಂದಪ್ಪ ನೆರ್ತಿ, ಎಚ್.ವೈ. ಗುರಿಕಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಹಿರಿಯ ಸಂಗೀತ ಕಲಾವಿದ ಸಿದ್ಧೇಶ್ವರ ಶಾಸ್ತ್ರಿ ತೆಲ್ಲೂರ ಹಾಗೂ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಕಲಾವಿದರಾದ ರಮೇಶ ಕೊರವರ, ಪ್ರಕಾಶ ಹೂಗಾರ, ಸದಾಶಿವ ಕೆರಕನಹಳ್ಳಿ ಅವರಿಂದ ಸುಗಮ ಸಂಗೀತೋತ್ಸವ
ಕಾರ್ಯಕ್ರಮ ಜರುಗಿತು.