Advertisement

ಸೈಕೋ ಶಂಕ್ರ ಹಾಡಿದಾಗ…!

11:19 AM Nov 05, 2017 | Team Udayavani |

ಸೈಕೋ ಶಂಕ್ರ ಮತ್ತೆ ಸುದ್ದಿಯಲ್ಲಿದ್ದಾನೆ..! ಹೀಗೆಂದಾಕ್ಷಣ, ಕೊಂಚ ಗಾಬರಿಯಾಗಬಹುದೇನೋ? ಆದರೆ, ಇಲ್ಲಿ ಹೇಳ ಹೊರಟಿರುವ ವಿಷಯ ಜೈಲು ಸೇರಿರೋ ಕ್ರಿಮಿನಲ್‌ ಸೈಕೋ ಶಂಕ್ರನದ್ದಲ್ಲ. ರೀಲ್‌ ಮೇಲಿನ ಶಂಕ್ರನ ವಿಷಯ. ಹೌದು, ನವರಸನ್‌ ಅಭಿನಯದ “ಸೈಕೋ ಶಂಕ್ರ’ ಶುರುವಾಗಿದ್ದು ಗೊತ್ತೇ ಇದೆ. ಇತ್ತೀಚೆಗಷ್ಟೇ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ ಪ್ರಸಾದ್‌ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ದರು.

Advertisement

ಇದಾದ ಬಳಿಕ ಚಿತ್ರದ ಆಡಿಯೋ ಸಿಡಿ ಬಿಡುಗಡೆಯನ್ನು ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್‌ ಅವರಿಂದಲೇ ಮಾಡಿಸುವ ಮೂಲಕ ಚಿತ್ರದ ಬಿಡುಗಡೆಯಗೆ ಮುನ್ನುಡಿ ಬರೆದಿದೆ ಚಿತ್ರತಂಡ. ಅಂದಹಾಗೆ, ಇದೊಂದು ಕ್ರಿಮಿನಲ್‌ ಕುರಿತ ಸಿನಿಮಾ. ಸುಮಾರು 19 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿಯಾಗಿರುವ ಸೈಕೋ ಶಂಕ್ರ ಜೈಲಿನಲ್ಲಿದ್ದಾನೆ. ಅವನಂತೆಯೇ ಒಂದಷ್ಟು ವ್ಯಕ್ತಿಗಳೂ ಇದ್ದಾರೆ.

ಅಂತಹ ಕ್ರಿಮಿನಲ್‌ಗ‌ಳ ಕುರಿತ ಕಥೆ ಹೊತ್ತು “ಸೈಕೋ ಶಂಕ್ರ’ ಬರುತ್ತಿದೆ. ಅಂತಹ ವ್ಯಕ್ತಿಗಳನ್ನು ಸಮಾಜ ಏನು ಮಾಡುತ್ತೆ ಅನ್ನುವ ವಿಷಯ ಇಟ್ಟುಕೊಂಡು ಮಾಡಿರುವ ಈ ಚಿತ್ರಕ್ಕೆ ಪುನೀತ್‌ ಆರ್ಯ ನಿರ್ದೇಶಕರು. ಈ ಚಿತ್ರದಲ್ಲಿ “ಸೈಕೋ ಶಂಕ್ರ’ ಏನೆಲ್ಲಾ ಮಾಡ್ತಾನೆ, ಜನರು ಅವನಿಗೆ ಏನು ಮಾಡುತ್ತಾರೆ ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ ನವೆಂಬರ್‌ 10 ರಂದು ಸಿಗಲಿದೆ. ಅಂದು ಚಿತ್ರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿದೆ. ಈ ರೀತಿಯ ಚಿತ್ರ ಮಾಡುವಾಗ, ಸಹಜವಾಗಿಯೇ ಸಾಕಷ್ಟು ರಿಸ್ಕ್ ಎದುರಾಗುತ್ತದೆ. ಅವೆಲ್ಲವನ್ನೂ ಬದಿಗೊತ್ತಿ ಚಿತ್ರೀಕರಿಸಲಾಗಿದೆ. ಅದರಲ್ಲೂ ಚಿತ್ರದಲ್ಲಿ ಶಂಕ್ರನ ಎಸ್ಕೇಪ್‌ ಆಗುವಂತಹ ಸನ್ನಿವೇಶಗಳನ್ನು ಚಿತ್ರೀಕರಿಸುವ ವೇಳೆ ಸಾಕಷ್ಟು ಸಮಸ್ಯೆ ಎದುರಾದರೂ, ಅದನ್ನು ಯಶಸ್ವಿಯಾಗಿ ಪೂರೈಸಿದ್ದಾಗಿ ಹೇಳುತ್ತಾರೆ ನಿರ್ದೇಶಕರು.

ಇದು ಕ್ರಿಮಿನಲ್‌ ಸುತ್ತ ಸಾಗುವ ಸಿನಿಮಾ ಆಗಿದ್ದರೂ, ಇಲ್ಲಿ ಕುಟುಂಬ ಸಮೇತ ಕುಳಿತು ನೋಡಬಹುದಾದ ಅಂಶಗಳಿವೆ. ಎಲ್ಲೂ ಅಶ್ಲೀಲತೆ ಇಲ್ಲ. ಇನ್ನು, ಈ ಚಿತ್ರದ ಮುಖ್ಯ ಆಕರ್ಷಣೆ ಅನ್ನುವುದಾದರೆ, ಅದು ನವರಸನ್‌ ಮತ್ತು ಪ್ರಣವ್‌. ಇಲ್ಲಿ ಸೈಕೋ ಶಂಕ್ರನ ಪಾತ್ರ ನಿರ್ವಹಿಸಿರುವ ನವರಸನ್‌, ಬರೋಬ್ಬರಿ ಒಂದು ವರ್ಷಗಳ ಕಾಲ ತಯಾರಿ ಮಾಡಿಕೊಂಡಿದ್ದರಂತೆ.

Advertisement

ಉದ್ದ ಕೂದಲು ಬಿಟ್ಟು, ದಾಡಿ ತೆಗೆಯದಂತೆ ಸುಮಾರು  17ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡು ವಕೌìಟ್‌ ಮಾಡಿದ್ದಾರಂತೆ. ಪ್ರಣವ್‌ಗೆ ಇಲ್ಲಿ ಹೊಸ ರೀತಿಯ ಇಮೇಜ್‌ ಸಿಗುವ ನಂಬಿಕೆ. ಕಾರಣ, ರಗಡ್‌ ಲುಕ್‌ನಲ್ಲಿರುವ ಅವರ ಪಾತ್ರ, ಸಿನಿಮಾದುದ್ದಕ್ಕೂ ರಫ್ ಅಂಡ್‌ ಟಫ್ ಆಗಿಯೇ ಕಾಣಲಿದೆಯಂತೆ. ಒಂದು ಹಳ್ಳಿಯ ಪಾತ್ರವಾದ್ದರಿಂದ ಭಾಷೆ ಕೂಡ ಅದೇ ಧಾಟಿಯಲ್ಲಿರುತ್ತಂತೆ.

ಉಳಿದಂತೆ ಶರತ್‌ ಲೋಹಿತಾಶ್ವ ಅವರ ಪಾತ್ರ ಸಿನಿಮಾದ ಹೈಲೈಟ್‌ಗಳಲ್ಲೊಂದು ಎಂಬುದು ಚಿತ್ರತಂಡದ ಮಾತು. ಅವರಿಲ್ಲಿ ಅಯ್ಯಪ್ಪ ಮಾಲೆ ಧರಿಸಿರುವ ಇನ್ಸ್‌ಪೆಕ್ಟರ್‌ ಪಾತ್ರ ನಿರ್ವಹಿಸಿದ್ದಾರೆ. ರಾಜ್ಯಾದ್ಯಂತ ಕೆಲ ಜಿಲ್ಲೆಗಳ ಭಾಷೆಯನ್ನು ಸುಲಲಿತವಾಗಿ ಹೇಳುವ ಮೂಲಕ ವಿಶಿಷ್ಟ ಪಾತ್ರಧಾರಿಯಾಗಿ ಮಿಂಚಿದ್ದಾರೆ ಎನ್ನುತ್ತಾರೆ ನಿರ್ದೇಶಕರು. “ಸಿನಿಮಾದಲ್ಲಿ ಯಶಸ್‌ ಸೂರ್ಯ ಅವರಿಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ.

ರಿಷಿಕಾ ಶರ್ಮ, ಅಮೃತಾರಾವ್‌, ವೇದಶ್ರೀ ಇತರರು ನಟಿಸಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಸೈಕೋ ಶಂಕ್ರನ ಮನಸ್ಥಿತಿ, ಅವನ ಮ್ಯಾನರಿಸಂ ಗಮನದಲ್ಲಿಟ್ಟುಕೊಂಡೇ ಚಿತ್ರ ಮಾಡಲಾಗಿದೆಯಾದರೂ, ಇದೊಂದು ಹೊಸ ವಿಷಯ ಹೇಳುವ ಚಿತ್ರ’ ಎಂಬುದು ನಿರ್ಮಾಪಕ ಪ್ರಭು ಅವರ ಮಾತು. ಚಿತ್ರಕ್ಕೆ ರವಿಬಸ್ರೂರ್‌ ಸಂಗೀತವಿದೆ. ನಿತಿನ್‌ ಕ್ಯಾಮೆರಾ ಹಿಡಿದರೆ, ವಿಶ್ವ ಕತ್ತರಿ ಪ್ರಯೋಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next