Advertisement

ಮತ್ತೆ ಬಂದ ಸೈಕೋ ಹೀರೋ

12:07 PM Oct 19, 2019 | mahesh |

ಈ ಹೆಸರು ಕೇಳಿದೊಡನೆ ಹಾಗೊಮ್ಮೆ ಡಾ.ರಾಜಕುಮಾರ್‌ ಅವರ ನೆನಪಾಗದೇ ಇರದು. ಹೌದು, ಮುತ್ತುರಾಜ್‌ ಅವರ ಮೊದಲ ಹೆಸರು. ಈಗೇಕೆ ಆ ವಿಷಯ ಎಂಬ ಪ್ರಶ್ನೆಗೆ ಉತ್ತರ, “ಮುತ್ತು ಕುಮಾರ’ ಹೆಸರಿನ ಚಿತ್ರ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ರವಿಸಾಗರ್‌ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಶ್ರೀನಿವಾಸ್‌ ನಿರ್ಮಾಣವಿದೆ. “ಸೈಕೋ’ ಹಾಗೂ “ಖೈದಿ’ ನಂತರ ನಾಯಕ ಧನುಷ್‌ ಅವರ ಮೂರನೇ ಸಿನಿಮಾ ಇದು. ಅಂದಹಾಗೆ, ಚಿತ್ರದ ಟ್ರೇಲರ್‌ ಬಿಡುಗಡೆಗೆ ರಾಘವೇಂದ್ರರಾಜಕುಮಾರ್‌ ಬಂದಿದ್ದರು. ನಿರ್ದೇಶಕ ನಂದಕಿಶೋರ್‌ ಸೇರಿದಂತೆ ಲಹರಿ ವೇಲು ಇತರರು ವೇದಿಕೆಯಲ್ಲಿದ್ದರು.

Advertisement

ಅಂದು ನಿರ್ದೇಶಕ ರವಿಸಾಗರ್‌ ತಮ್ಮ ಚಿತ್ರದ ಬಗ್ಗೆ ಹೇಳುತ್ತಾ ಹೋದರು. “ಇದೊಂದು ಹಳ್ಳಿಯ ಪ್ರೇಮ ಕಥೆ. ಅದೇ ಊರಿನ ಶಾಲೆಯಲ್ಲಿ ಓದುವ ನಾಯಕ, ನಾಯಕಿಗೆ ಆ ದಿನಗಳಲ್ಲೇ ಪ್ರೇಮ ಚಿಗುರಿರುತ್ತೆ. ಆ ಬಳಿಕ ಆಕೆ ಹಳ್ಳಿಯಲ್ಲಿ ಸಾವಯವ ಕೃಷಿ ಮಾಡಬೇಕು ಎಂಬ ಉದ್ದೇಶದಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನಗರಕ್ಕೆ ಹೊರಡುತ್ತಾಳೆ. ಅತ್ತ, ನಾಯಕ ತಾನು ಪ್ರೀತಿಸೋ ಹುಡುಗಿಯ ಆಸೆಯಂತೆ ಹಳ್ಳಿಯಲ್ಲಿ ಸಾವಯವ ಕೃಷಿ ಮಾಡುತ್ತಾನೆ. ಹಳ್ಳಿಯಲ್ಲೂ ದ್ವೇಷಿಸುವವರ ಸಂಖ್ಯೆ ದೊಡ್ಡದ್ದಾಗಿರುತ್ತೆ. ಅಲ್ಲೊಂದಷ್ಟು ಘಟನೆಗಳು ನಡೆಯುತ್ತವೆ. ಕೊನೆಗೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆ’ ಎಂಬ ವಿವರ ಕೊಟ್ಟರು ನಿರ್ದೇಶಕ ರವಿಸಾಗರ್‌.

ನಾಯಕ ಧನುಷ್‌ ಅವರಿಗೆ ಈ ಚಿತ್ರ ಮಾಡೋಕೆ ಪ್ರೇರಣೆ, ಕಥೆ ಮತ್ತು ಪಾತ್ರದಲ್ಲಿರುವ ಗಟ್ಟಿತನವಂತೆ. ಪಕ್ಕಾ ಹಳ್ಳಿ ಸೊಗಡು ತುಂಬಿರುವ ಚಿತ್ರದಲ್ಲಿ,

ನಾಯಕ ಓದಿದ್ದರೂ, ಹಳ್ಳಿಯಲ್ಲೇ ಬದುಕು ಸವೆಸೋ ಆಸೆ ಹೊಂದಿರುತ್ತಾನೆ. ಪ್ರೀತಿ, ದ್ವೇಷ, ಅಸೂಯೆ ನಡುವೆ ಒಂದಷ್ಟು ಸೆಂಟಿಮೆಂಟ್‌ ಕೂಡ ಚಿತ್ರದಲ್ಲಿದೆ. ಭರ್ಜರಿ ಫೈಟ್ಸ್‌ಗೆ ಕೊರತೆ ಇಲ್ಲ. ಹೊಸತನದ ಹಾಡುಗಳಿಗೂ ಬರವಿಲ್ಲ. ಹೊಸ ವಿಷಯ ಕಟ್ಟಿಕೊಡುವ ಮೂಲಕ ಹಳ್ಳಿಯ ಸೊಬಗನ್ನು ಎತ್ತಿಹಿಡಿಯಲಾಗಿದೆ’ ಎಂದರು ಧನುಷ್‌.

ನಾಯಕಿ ಸಂಚಿತಾ ಪಡುಕೋಣೆಗೆ ಗುರುತಿಸಿಕೊಳ್ಳುವಂತಹ ಪಾತ್ರ ಸಿಕ್ಕಿದೆಯಂತೆ. ಪ್ರತಿಯೊಬ್ಬರಿಗೂ ಚಿತ್ರ ಇಷ್ಟವಾಗುವ ಗ್ಯಾರಂಟಿ ಕೊಡ್ತೀನಿ ಎಂಬುದು ಸಂಚಿತಾ ಮಾತು. ಇನ್ನು, ಸಂಜನಾ ಅವರಿಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈವರೆಗೆ ಗ್ಲಾಮರಸ್‌ ಆಗಿದ್ದ ಅವರಿಲ್ಲಿ,

Advertisement

ಗ್ಲಾಮರ್‌ಗೆ ಹೆಚ್ಚು ಫೋಕಸ್‌ ಮಾಡಿಲ್ಲವಂತೆ. ಅದೊಂದು ಅರ್ಥಪೂರ್ಣ ಪಾತ್ರ ಎನ್ನುತ್ತಾರೆ.

ಹಾಸ್ಯ ನಟ ಮಿತ್ರ ಅವರಿಗೆ ಇದೊಂದು ವಿಶೇಷ ಚಿತ್ರವಂತೆ. ಸಂಪೂರ್ಣ ಹಳ್ಳಿ ಸೊಗಡು ತುಂಬಿರುವ ಚಿತ್ರದಲ್ಲಿ, ಹಳ್ಳಿ ಜೀವನ ಎಷ್ಟೊಂದು ಸುಂದರವಾಗಿರುತ್ತೆ ಎಂಬುದನ್ನು ತೋರಿಸಲಾಗಿದೆಯಂತೆ. ಈಗಿನ ಟ್ರೆಂಡ್‌ನ‌ಲ್ಲಿ ಬೇರೆ ರೀತಿಯ ಚಿತ್ರಗಳಿಗೆ ಹೊರತಾಗಿ, ಹಳ್ಳಿಗರ ಜೀವನ ಶೈಲಿ ಕುರಿತು ಸಿನಿಮಾ ಮಾಡಿರುವುದು ದೊಡ್ಡತನ. ನಿರ್ಮಾಪಕರಿಗೆ ಹಾಕಿದ ಬಂಡವಾಳ ಹಿಂದಿರುಗಲಿ ಎಂದರು ಮಿತ್ರ.

ಅಂದು ರಾಘವೇಂದ್ರ ರಾಜಕುಮಾರ್‌, ಲಹರಿ ವೇಲು, ನಂದಕಿಶೋರ್‌ ಚಿತ್ರತಂಡಕ್ಕೆ ಶುಭಕೋರಿದರು. ಉಗ್ರಂ ಮಂಜು, ಕರಿಸುಬ್ಬು, ಕುರಿರಂಗ, ಛಾಯಗ್ರಾಹಕ ಮಹೇಶ್‌ ತಲಕಾಡು, ಸಂಗೀತ ನಿರ್ದೇಶಕ ಕಿರಣ್‌ ಶಂಕರ್‌ ಸಿನಿಮಾ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next