ಬೆಳಗಾವಿ: ಶ್ರೀಮಂತರ ಮನೆಗಳ ಮುಂದೆ ನಿಲ್ಲಿಸಿರುವ ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡಿ ಕರ್ಪೂರದಿಂದ ಬೆಂಕಿ ಹಚ್ಚುವ ಚಾಳಿ ನಡೆಸಿದ್ದ ವಿಕೃತ ಮನಸ್ಸಿನ ವೈದ್ಯ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮೂಲತಃ ಕಲಬುರ್ಗಿಯ ಪ್ರಗತಿ ನಗರದ ಎಂಬಿಬಿಎಸ್, ಎಂಡಿ ಪದವೀಧರ ಡಾ.ಅಮಿತ ವಿಜಯಕುಮಾರ ಗಾಯಕವಾಡ (37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ವೈದ್ಯಕೀಯ ಸಂಶೋಧನಾ ಕೇಂದ್ರ(ಬಿಮ್ಸ್)ದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಈತ ರಕ್ತ ಭಂಡಾರದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ನಾಲ್ಕು ದಿನಗಳ ಅವಧಿಯಲ್ಲಿ ಒಟ್ಟು 20 ಐಷಾರಾಮಿ ಕಾರುಗಳು ಡಾಕ್ಟರ್‌ನ ಕರ್ಪೂರದ ಬೆಂಕಿಗೆ ಆಹುತಿಯಾಗಿವೆ. ಶ್ರೀಮಂತರ ಕಾರುಗಳ ಮೇಲೆಯೇ ಈತ ವಕ್ರದೃಷ್ಟಿ ಬೀರಿದ್ದು ಏಕೆ ಎಂಬ ಬಗ್ಗೆ ಇನ್ನೂ ಬಾಯಿ ಬಿಟ್ಟಿಲ್ಲ. ಜತೆಗೆ ತಾನೇ ಬೆಂಕಿ ಹಚ್ಚಿರುವುದನ್ನೂ ಒಪ್ಪಿಕೊಳ್ಳಲು ಸಿದ್ಧನಿಲ್ಲ.
ಸಿಕ್ಕಿ ಬಿದ್ದಿದ್ದು ಹೇಗೆ?: ಐಷಾರಾಮಿ ಕಾರುಗಳಾದ ಬಿಎಂಡಬ್ಲ್ಯು, ಇನ್ನೋವಾ, ಐ-20, ಐ-10, ವೆರ್ನಾ, ಎರ್ಟಿಗಾ ಮುಂತಾದ ಕಾರುಗಳಿಗೆ ಬೆಂಕಿ ಹಚ್ಚುವ ಚಾಳಿಯನ್ನು ಈತ ಪ್ರಾರಂಭಿಸಿದ್ದ. ಬುಧವಾರ ಒಂದೇ ದಿನ ನಗರದಲ್ಲಿ ಒಟ್ಟು 10 ಕಾರುಗಳಿಗೆ ಬೆಂಕಿ ಹಚ್ಚಿದ್ದ ಈ ವೈದ್ಯ ರಾತ್ರಿ 9 ಗಂಟೆ ಸುಮಾರಿಗೆ ಮತ್ತೂಂದು ಕಾರಿಗೆ ಕರ್ಪೂರ ಇಟ್ಟು ಬೆಂಕಿ ಹಚ್ಚುವ ವೇಳೆ ವಾಚ್‌ಮನ್ ಗಂಗನಗೌಡ ಪಾಟೀಲಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಾಗ ಪ್ರಕರಣ ಬೆಳಕಿಗೆ ಬೆಂದಿದೆ.
ಬೆಳಗಾವಿಯಲ್ಲಿ ಅಷ್ಟೇ ಅಲ್ಲದೆ ಕಲಬುರ್ಗಿಯಲ್ಲೂ ಸಂಕ್ರಾಂತಿ ಹಬ್ಬಕ್ಕೆಂದು ಹೋದಾಗ ಎರಡು ದಿನಗಳ ಅವಧಿಯಲ್ಲಿ 10 ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ. ಎಲ್ಲ ಕಾರುಗಳ ಬೊನೆಟ್ ಹಾಗೂ ವೈಪರ್‌ನ ಮಧ್ಯ ಭಾಗದಲ್ಲಿ ಕರ್ಪೂರ ಇಟ್ಟು ಲೈಟರ್ ಮೂಲಕ ಬೆಂಕಿ ಹಚ್ಚಿರುವುದರಿಂದ ಬೆಳಗಾವಿ ಹಾಗೂ ಕಲಬುರ್ಗಿಯ ಪ್ರಕರಣಗಳಿಗೆ ಸಾಮ್ಯತೆ ಕಂಡು ಬಂದು ತನಿಖೆ ವೇಳೆ ಬಯಲಾಗಿದೆ.
ವಾಚ್‌ಮನ್ ಕೈಗೆ ಸಿಕ್ಕಿಬಿದ್ದ: ಜ.17ರಂದು ಬೆಳಗಿನ ಜಾವ 3:50ರಿಂದ 5 ಗಂಟೆ ಒಳಗಾಗಿ ಜಾಧವ ನಗರದಲ್ಲಿ 7 ಕಾರುಗಳು ಬೆಂಕಿಗಾಹುತಿಯಾಗಿವೆ. ನಂತರ ಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ಕ್ಯಾಂಪ್ ಪ್ರದೇಶದ ಎರಡು ಹಾಗೂ ವಿಶ್ವೇಶ್ವರಯ್ಯ ನಗರದಲ್ಲಿ ಒಂದು ಕಾರಿಗೆ ಬೆಂಕಿ ಹಚ್ಚಿದ್ದಾನೆ. ಇದೇ ಪ್ರದೇಶದ ಯುವೆಂತಾ ಅಪಾರ್ಟ್‌ಮೆಂಟ್ ಬಳಿ ನಿಲ್ಲಿಸಿದ್ದ ಕಾರಿನ ಬಳಿ ಕರ್ಪೂರ ಇಟ್ಟಾಗ ಸಂಶಯಗೊಂಡು ವಾಚ್‌ಮನ್ ವಿಚಾರಿಸಿದ. ಆಗ ಡಾ.ಅಮಿತ ಉತ್ತರಿಸಲು ತಡವರಿಸಿದಾಗ ಜನರನ್ನು ಕೂಡಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಹೆಲ್ಮೆಟ್ ಧರಿಸಿಯೇ ಕೃತ್ಯ ಎಸಗಿರುವುದನ್ನು ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ.
29 ರವರೆಗೆ ನ್ಯಾಯಾಂಗ ಬಂಧನ: ಬಂಧಿತ ಡಾಕ್ಟರ್ ಅಮಿತ ಗಾಯಕವಾಡನನ್ನು ಗುರುವಾರ ಸಂಜೆಯೇ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜ.29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ವೈದ್ಯರ ಕಾರುಗಳೇ ಟಾರ್ಗೆಟ್
ಮೂಲತಃ ವೈದ್ಯ ಕುಟುಂಬದಿಂದ ಬಂದ ಡಾ.ಅಮಿತನ ತಂದೆ ಆರ್‌ಎಂಒ ವೈದ್ಯ. ಈತನ ಸಹೋದರ ಹಾಗೂ ಚಿಕ್ಕಪ್ಪ ಕೂಡ ವೈದ್ಯರೇ. ಎಂಡಿ ಪದವಿ ಮುಗಿಸಿ ಬಿಮ್ಸ್‌ಗೆ ನೌಕರಿಗೆ ಸೇರಿದ ಡಾ.ಅಮಿತ ಕೆಲವು ದಿನಗಳಿಂದ ಖನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಕಲಬುರಗಿಯಲ್ಲಿ ಬೆಂಕಿಗೆ ಆಹುತಿಯಾದ 10 ಕಾರುಗಳ ಪೈಕಿ 7 ಕಾರುಗಳು ವೈದ್ಯರಿಗೇ ಸೇರಿದ್ದಾಗಿವೆ. ಜತೆಗೆ ಬೆಳಗಾವಿಯಲ್ಲಿ ಶಾಸಕ ಫಿರೋಜ್ ಸೇs… ಸಹೋದರ ಸೇರಿದಂತೆ ಎಲ್ಲ ಶ್ರೀಮಂತರ ದುಬಾರಿ ಕಾರುಗಳು ಭಸ್ಮವಾಗಿವೆ.