Advertisement
ಇಲಾಖೆಯ ಕರ್ತವ್ಯದ ಒತ್ತಡದ ನಡುವೆಯೂ ತಮ್ಮ ಸಹಪಾಠಿಗಳನ್ನು ಸೇರಿಸಿ, ಧರ್ಮಸ್ಥಳ ಠಾಣೆ ವ್ಯಾಪ್ತಿಯ ಹಲವು ಶಾಲೆಗಳಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ನೆರವಾಗಿದ್ದಾರೆ. ಐವತ್ತಕ್ಕೂ ಹೆಚ್ಚಿನ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಚೀಲ ಇತ್ಯಾದಿ ಗಳನ್ನು ನೀಡಿದ್ದಾರೆ. ತಮ್ಮ ಹುಟ್ಟೂರು ಸಕಲೇಶಪುರ ತಾಲೂಕಿನ ವಳಲಹಳ್ಳಿ ಪ್ರಾಥಮಿಕ ಶಾಲೆಯ 80 ಮಕ್ಕಳಿಗೂ ಒಂದು ಜತೆ ಸಮವಸ್ತ್ರ ನೀಡಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ಎರಡು ವರ್ಷಗಳಿಂದ ಪಿಎಸ್‌ಐ ಆಗಿರುವ ಅವಿನಾಶ್, ಸರಕಾರಿ ಕನ್ನಡ ಶಾಲೆಗಳನ್ನು ಉಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಕಾರ್ಯ ಕೈಗೊಂಡಿದ್ದಾರೆ. ಸ್ವತಃ ಸರಕಾರಿ ಶಾಲೆ ಹಾಗೂ ಕನ್ನಡ ಮಾಧ್ಯಮದಲ್ಲಿ ಕಲಿತು ಉದ್ಯೋಗ ಗಳಿಸಿರುವ ಅವರು, ಕನ್ನಡ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಷ್ಟವಾಗಬಾರದೆಂದು ಸ್ನೇಹಿತರ ನೆರವಿನೊಂದಿಗೆ ಈ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. “ಸಿರಿಗನ್ನಡಂ ಗೆಲ್ಗೆ ವಿದ್ಯಾರ್ಥಿ ಸಂಘ’ ಕಟ್ಟಿಕೊಂಡಿರುವ ಅವರು ಧರ್ಮಸ್ಥಳ ಠಾಣೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಾದ ಮುಂಡಾಜೆ, ಮೀಯಾರು, ಪುದುವೆಟ್ಟು, ಕಳೆಂಜ – ಕಾಯರ್ತಡ್ಕ, ಪಟ್ರಮೆ, ಕೊಕ್ಕಡ, ಹಳ್ಳಿಂಗೇರಿ, ಭಂಡಿಹೊಳೆ ಸಹಿತ ಎಂಟು ಶಾಲೆಗಳ 50ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಆವಶ್ಯಕ ವಸ್ತುಗಳನ್ನು ನೀಡಿದ್ದಾರೆ. ಮುಂದಿನ ವರ್ಷ ಗ್ರಾಮೀಣ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ದೊಡ್ಡ ಯೋಜನೆಯನ್ನೂ ರೂಪಿಸಿದ್ದಾರೆ.
Related Articles
ಶನಿವಾರ ಪಟ್ರಮೆಯ ಅನಾರು ಶಾಲಾ ಬಡ ಪ್ರತಿಭಾವಂತ ಮಕ್ಕಳಿಗೆ ಪಠ್ಯ ಪರಿಕರ ವಿತರಿಸಿ ಮಾತನಾಡಿದ ಅವಿನಾಶ್, ತಾವು ಸ್ವತಃ ಸರಕಾರಿ ಶಾಲೆಯಲ್ಲೇ ಕಲಿತು ಉನ್ನತ ಸ್ಥಾನ ಅಲಂಕರಿಸಿದ್ದೇವೆ. ಸರಕಾರಿ ಶಾಲಾ ಮಕ್ಕಳ ಪರಿಸ್ಥಿತಿಯ ಸಂಪೂರ್ಣ ಅರಿವು ತಮಗಿರುವ ಕಾರಣ ಸರಕಾರಿ ಶಾಲಾ ಮಕ್ಕಳನ್ನು ಆಯ್ಕೆ ಮಾಡಿ, ಮುಂದಿನ ಉತ್ತಮ ಭವಿಷ್ಯಕ್ಕೆ ತಮ್ಮ ಈ ಅಳಿಲ ಸೇವೆ ಸಲ್ಲಿಸುತ್ತಿದ್ದೇವೆ ಎಂದರು. ಪಟ್ರಮೆ ಗ್ರಾಮದ ಬೀಟ್ ಪೊಲೀಸ್ ಧರೇಶ್, ಶಾಲಾ ಮುಖ್ಯ ಶಿಕ್ಷಕರಾದ ಕೃಷ್ಣಮೂರ್ತಿ, ಶಾಲಾ ಅಧ್ಯಕ್ಷರಾದ ಶ್ಯಾಮರಾಜ್, ಉಪಾಧ್ಯಕ್ಷರಾದ ಸುನೀತಾ ಹಾಗೂ ಇತರೇ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.
Advertisement
ಮಿತ್ರರ ಸಹಕಾರವಿದೆಕನ್ನಡ ಮಾಧ್ಯಮದತ್ತ ವಿದ್ಯಾರ್ಥಿಗಳು ಮನ ಮಾಡ ಬೇಕೆನ್ನುವ ಕಾಳಜಿಯ ಜತೆಗೆ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳನ್ನು ಪ್ರೋತ್ಸಾಹಿಸಲು ನನ್ನ ಸಹಪಾಠಿಗಳು ಮತ್ತು ಮಿತ್ರರನ್ನು ಒಟ್ಟುಗೂಡಿಸಿ ತಂಡ ಆರಂಭಿಸಿದ್ದೇವೆ. ನನ್ನ ಒಂದು ತಿಂಗಳ ಸಂಬಳವನ್ನು ಈ ಉದ್ದೇಶಕ್ಕೆ ವಿನಿಯೋಗಿಸುತ್ತಿದ್ದೇನೆ. ಕಲಿಕೆಗೆ ಉತ್ತೇಜನ ನೀಡಲು, ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಯೋಜನೆ ನಮ್ಮ ಮುಂದಿದೆ.
– ಅವಿನಾಶ್ ಎಚ್. ಗೌಡ, ಧರ್ಮಸ್ಥಳ ಠಾಣೆ ಪಿಎಸ್‌ಐ ಶ್ಲಾಘನೀಯ
ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯದ ನಡುವೆಯೂ ಭಾಷೆ, ಕನ್ನಡ ಸರಕಾರಿ ಶಾಲೆಗಳ ಕುರಿತು ಕಾಳಜಿಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಮ್ಮ ಶಾಲೆಯ ಎಲ್ಲ 80 ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಕೊಡಿಸಿದ್ದಾರೆ.
- ದಿವಾಕರ ಎಚ್,
ವಳಲಹಳ್ಳಿ ಸ.ಹಿ.ಪ್ರಾ. ಶಾಲೆಯ ಶಿಕ್ಷಕ