ಬೆಂಗಳೂರು: ಅಕ್ರಮ ನಡೆದ ಆರೋಪಗಳ ಹಿನ್ನೆಲೆಯಲ್ಲಿ 545 ಪಿಎಸ್‌ಐ ಹುದ್ದೆಗಳ ಪರೀಕ್ಷೆಯನ್ನು ರದ್ದುಪಡಿಸಿ ರಾಜ್ಯ ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಜೂ. 9ರಂದು ಮುಂದುವರಿಸುವುದಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಹೇಳಿದೆ.
ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರಕಾರ ಎ. 29ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ 28ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ಕೆಎಟಿ ನ್ಯಾಯಾಂಗ ಸದಸ್ಯ ಟಿ. ನಾರಾಯಣಸ್ವಾಮಿ ಹಾಗೂ ಆಡಳಿತಾತ್ಮಕ ಸದಸ್ಯೆ ಲತಾ ಕೃಷ್ಣ ರಾವ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕಳಂಕರಹಿತರನ್ನು ಪ್ರತ್ಯೇಕಿಸಿ :
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ವಾದ ಮಂಡಿಸಿ, ಪರೀಕ್ಷೆ ರದ್ದುಪಡಿಸಿ ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಹಾಗೂ ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ಈ ಹಿಂದಿನ ಅಧಿಸೂಚನೆ ಅನ್ವಯ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರಕಾರಕ್ಕೆ ಆದೇಶಿಸಬೇಕು ಎಂದು ಮನವಿ ಮಾಡಿದರು. ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖೀಸಿ ನೇಮಕ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡು ಅಂತಿಮ ಹಂತದಲ್ಲಿರುವಾಗ ಸರಕಾರ ಏಕಪಕ್ಷೀಯವಾಗಿ ಮರುಪರೀಕ್ಷೆಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಅದು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾದ ಮತ್ತು ಕಾನೂನು ಬಾಹಿರ ನಿರ್ಧಾರವಾಗಿದೆ ಎಂದರು.
ಸರಕಾರದ ಆಕ್ಷೇಪಣೆ :
ರಾಜ್ಯ ಸರಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್. ಸುಬ್ರಮಣ್ಯ ಹಾಜರಾಗಿ, ಸರಕಾರ ಈಗಾಗಲೇ ಆಕ್ಷೇಪಣೆಯನ್ನು ಸಲ್ಲಿಸಿ ಪ್ರಕರಣದಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಮರುಪರೀಕ್ಷೆಯ ತೀರ್ಮಾನ ಕೈಗೊಂಡಿದೆ. ಆ ಬಗ್ಗೆ ವಿವರವಾದ ವಾದ ಮಂಡನೆಗೆ ಸಮಯ ನೀಡಬೇಕೆಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಕೆಎಟಿ ಪೀಠ ವಿಚಾರಣೆಯನ್ನು ಜೂ. 9ಕ್ಕೆ ಮುಂದೂಡಿತು.