ಕಲಬುರಗಿ: 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ಪ್ರಮುಖ ಆರೋಪಿಗಳಾದ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಆರ್.ಡಿ. ಪಾಟೀಲ ಹಾಗೂ ಅವರ ಸಹೋದರ ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ ಅವರಿಗೆ ಜಾಮೀನು ಸಿಕ್ಕಿದೆ.
ಇಲ್ಲಿನ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ಗುರುವಾರ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಕಿಂಗ್ ಪಿನ್ ಗಳಿಗೆ ಜಾಮೀನು ಸಿಕ್ಕಂತಾಗಿದೆ.
ಕೆಲ ದಿನಗಳ ಹಿಂದೆ ವಾದ ವಿವಾದವನ್ನು ಆಲಿಸಿದ್ದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ನ್ಯಾಯಪೀಠವು ಡಿ. 15ರ ಗುರುವಾರದಂದು ಆದೇಶ ನೀಡಿದೆ.
ನಗರದ ಜಿಡಿಎ ಬಡಾವಣೆಯ ಗೋಕುಲ ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಕಳೆದ 2021 ರ ಅಕ್ಟೋಬರ್ 3ರಂದು ನಡೆದಿದ್ದ ಪಿಎಸ್‌ಐ ಪರೀಕ್ಷಾ ನೇಮಕಾತಿ ಹಗರಣದಲ್ಲಿ ಆರ್.ಡಿ. ಪಾಟೀಲ ಮತ್ತು ಮಹಾಂತೇಶ ಪಾಟೀಲ ತಮಗೆ ಹಣ ನೀಡಿದ ಅಭ್ಯರ್ಥಿಗಳಿಗೆ ಬ್ಲೂಟೂತ್ ಉಪಕರಣದ ಮೂಲಕ ಉತ್ತರ ಹೇಳಿಸಿ ಪಾಸ್ ಆಗುವಂತೆ ನೋಡಿಕೊಂಡಿದ್ದರು. ತದನಂತರ ಕಳೆದ ಏಪ್ರೀಲ್ ತಿಂಗಳಿನಲ್ಲಿ ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರ್ ಡಿ. ಪಾಟೀಲ್ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರು. ಈತ್ತ ಮಹಾಂತೇಶ ಪಾಟೀಲ್ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಸಿದ್ದತೆ ಯಲ್ಲಿ ತೊಡಗಿದ್ದರು.
ಪ್ರಕರಣದ ತನಿಖೆಗಾಗಿ ರಚನೆಯಾದ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದ ತನಿಖಾ ತಂಡ ಏಪ್ರಿಲ್ 22ರಂದು ಮಹಾಂತೇಶ ಪಾಟೀಲ ಅವರನ್ನು ಬಂಧಿಸಿತ್ತು. ಮರು ದಿನ ಏ. 23 ರಂದು ಮಹಾರಾಷ್ಟ್ರ ದಲ್ಲಿ ಸಿಐಡಿ ಆರ್.ಡಿ. ಪಾಟೀಲ ಸಿಐಡಿ ಅವರನ್ನು ಬಂಧಿಸಲಾಗಿ ಕಲಬುರಗಿಗೆ ಕರೆ ತರಲಾಗಿತ್ತು.
ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ ಜೆಎಂಎಫ್‌ಸಿ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಸುಮಾರು ಎಂಟು ತಿಂಗಳ ಬಳಿಕ ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಂತಾಗಿದೆ.
ಆರ್.ಡಿ. ಪಾಟೀಲ ಹಾಗೂ ಮಹಾಂತೇಶ ಪಾಟೀಲ ಪರವಾಗಿ ಹಿರಿಯ ವಕೀಲ ಅಶೋಕ ಬಿ. ಮೂಲಗೆ ವಾದ ಮಂಡಿಸಿದ್ದರು. 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಹಗರಣ ನಡೆದು ಭಾರಿ ಸದ್ದು ಮಾಡಿ ರಾಜ್ಯದಾದ್ಯಂತ ಒಟ್ಟಾರೆ ನೂರಕ್ಕೂ ಹೆಚ್ಚು ಅಭ್ಯರ್ಥಿಗಳು, ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಬಂಧನವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.