Advertisement
ಅಕ್ರಮ ಪ್ರಕರಣ ಬೆಳಕಿಗೆ ಬಂದ ಅನಂತರ ರಾಜ್ಯ ಸರಕಾರ ತನಿಖೆಗೆ ವಹಿಸಿ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳ ಪೂರ್ವಾಪರ ಪರಿಶೀಲಿಸಲು ಆದೇಶಿಸಿರುವುದು ಒಂದು ಕಡೆ. ಇದರ ನಡುವೆ, 402 ಪಿಎಸ್‌ಐ ನೇಮಕಾತಿ ಸಂಬಂಧ ಅರ್ಜಿ ಸಲ್ಲಿಸಿರುವವರು ಲಿಖೀತ ಪರೀಕ್ಷೆಗಾಗಿ ಕಾಯುತ್ತಿದ್ದಾರೆ. 545 ಪಿಎಸ್‌ಐ ನೇಮಕಾತಿ ಪ್ರಕರಣದ ಅಕ್ರಮ ಆರೋಪದ ತನಿಖೆ ಮುಗಿಯುವವರೆಗೂ ಲಿಖೀತ ಪರೀಕ್ಷೆಯೂ ಸಾಧ್ಯವಿಲ್ಲದಂತಾಗಿರುವುದು ಮತ್ತೂಂದು ಕಡೆ.
Related Articles
Advertisement
ಪ್ರಸ್ತುತ 545 ಪಿಎಸ್‌ಐ ನೇಮಕಾತಿ ಅಕ್ರಮಗಳ ಆರೋಪಗಳ ಕುರಿತು ನಡೆಸುತ್ತಿರುವ ತನಿಖೆ ನಿಷ್ಪಕ್ಷಪಾತವಾಗಿ ಮಾಡಬೇಕು. ಯಾವ ಹಂತದಲ್ಲಿ ತಪ್ಪು ನಡೆದಿದ್ದರೂ ಪತ್ತೆ ಹಚ್ಚಿ ಅರ್ಹರಿಗೆ ಉದ್ಯೋಗ ಸಿಗುವಂತೆ ಮಾಡಬೇಕು. ಆಗ ಮಾತ್ರ ನಂಬಿಕೆ ಬರಲು ಸಾಧ್ಯ. ನೇಮಕಾತಿಗಳ ಮೇಲೆಯೇ ಅಪನಂಬಿಕೆ, ಅನುಮಾನ ಪ್ರಾರಂಭವಾದರೆ ಇಡೀ ವ್ಯವಸ್ಥೆ ವಿರುದ್ಧ ಅಸಮಾಧಾನ ಸ್ಫೋಟಗೊಳ್ಳುತ್ತದೆ. ಅದು ಇತರೆ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೀಗಾಗಿ, ಸರಕಾರ ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಸಮಗ್ರ ತನಿಖೆ ನಡೆಸಿ ತಪ್ಪು ಆಗಿದ್ದರೆ ಯಾರೇ ಅದರ ಹಿಂದಿದ್ದರೂ ಕಠಿನ ಶಿಕ್ಷೆಯಾಗುವಂತೆ ಮಾಡಬೇಕಾಗಿದೆ.
40 ಪರ್ಸೆಂಟ್ ಭ್ರಷ್ಟಾಚಾರ ಆರೋಪವನ್ನೇ ಅಸ್ತ್ರ ಮಾಡಿಕೊಂಡಿರುವ ವಿಪಕ್ಷಗಳು ಸರಕಾರದ ಮೇಲೆ ಪಿಎಸ್‌ಐ ನೇಮಕಾತಿ ಅಕ್ರಮ ಕುರಿತು ಮುಗಿಬೀಳುತ್ತಿವೆ. ಇಂತಹ ಸಂದರ್ಭದಲ್ಲಿ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಅರ್ಹರಿಗೆ ಅನ್ಯಾಯವಾಗದಂತೆ ನ್ಯಾಯ ಕಲ್ಪಿಸಬೇಕಾಗಿದೆ.