ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್(ಪಿಎಸ್‌ಐ) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಗೃಹ ಸಚಿವರು ಮತ್ತು ನೊಂದ ಪಿಎಸ್‌ಐ ಪರೀಕ್ಷಾ ಅಭ್ಯರ್ಥಿಯೊಬ್ಬರು ಮಾತನಾಡಿದ್ದಾರೆ ಎನ್ನಲಾದ ಮತ್ತೂಂದು ಆಡಿಯೋ ತುಣುಕನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಈ ಸಂಭಾಷಣೆಯಲ್ಲಿ ಇತ್ತೀಚೆಗೆ ನಡೆದಿರುವ 545 ಪಿಎಸ್‌ಐ ನೇಮಕಾತಿ ಅಲ್ಲದೆ ಎರಡನೇ ಬ್ಯಾಚ್‌ನಲ್ಲಿ 402 ಪಿಎಸ್‌ಐ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಗೃಹ ಸಚಿವರಿಗೆ ಸಾಕ್ಷಿ ನೀಡಲಾಗಿದೆ ಎಂದಿರುವುದು, ಮೂವರು ಶಾಸಕರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿ), ಐಜಿ ಹಾಗೂ ಕಲಬುರಗಿ ಆಯುಕ್ತರ ಬಗ್ಗೆಯೂ ಸಾಕ್ಷಿ ನೀಡಿದ್ದೇವೆ. ಆದರೆ ತನಿಖೆಯನ್ನು ಅಮೃತ್ ಪೌಲ್ ಅವರಿಗೆ ಮಾತ್ರ ಸೀಮಿತಗೊಳಿಸಿರುವ ಕುರಿತಂತೆ ಮಾತನಾಡಿರುವುದು ಕಂಡು ಬಂದಿದೆ.
ಜತೆಗೆ ಶಾಸಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಯಾಕಿಲ್ಲ ಎಂದು ಗೃಹ ಸಚಿವರನ್ನು ಪ್ರಶ್ನಿಸಿರುವುದು, ಹಗರಣದ ಆರೋಪಿಗಳಿಗೆ ಹೇಗೆ ಜಾಮೀನು ಸಿಕ್ಕಿತು ಎಂದು ಗೃಹ ಸಚಿವರನ್ನು ಪ್ರಶ್ನಿಸಿರುವುದು ಕೂಡ ಆಡಿಯೋದಲ್ಲಿದೆ.
ಕೆಪಿಸಿಸಿ ಕಚೇರಿಯಲ್ಲಿ ಆಡಿಯೋ ಸಂಭಾಷಣೆ ಬಿಡುಗಡೆಗೊಳಿಸಿ ಮಾತನಾಡಿದ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮೂರು ಶಾಸಕರು ಕೂಡ ಭಾಗಿಯಾಗಿದ್ದಾರೆ ಎಂದು ಗೃಹ ಸಚಿವರೊಂದಿಗೆ ಮಾತನಾಡಿದ ಅಭ್ಯರ್ಥಿಯೊಬ್ಬರು ಹೇಳಿದ್ದು, ಆ ಶಾಸಕರು ಯಾರು ಎಂದು ಗೃಹ ಸಚಿವರು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು. ಇಡೀ ಪ್ರಕರಣದ ಹೊಣೆ ಹೊತ್ತು ಗೃಹ ಸಚಿವರು ತತ್‌ಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಆರೋಪಿಗಳಿಗೆ ಜಾಮೀನು ಹೇಗೆ ಸಿಗುತ್ತದೆ ಎಂದು ಅಭ್ಯರ್ಥಿ ಪ್ರಶ್ನಿಸಿದಾಗ, ಅದು ತಾಂತ್ರಿಕ ಸಮಸ್ಯೆಯಿಂದ ಆಗಿದ್ದು. ನಾವು ಮೇಲ್ಮನವಿ ಮಾಡಬೇಕೆ? ಬೇಡವೆ ಎಂದು ನೋಡುತ್ತಿದ್ದೇವೆ ಎಂದು ಗೃಹ ಸಚಿವರು ಹೇಳುತ್ತಾರೆ. ತಾಂತ್ರಿಕ ಸಮಸ್ಯೆ ಎಂದರೆ ಅರ್ಥವೇನು? ಗೃಹ ಸಚಿವರ ಪ್ರಕಾರ ಸರಕಾರದ ಪರವಾಗಿ ವಾದಿಸುವವರು ಅಸಮರ್ಥರೇ ಎಂದು ಪ್ರಶ್ನಿಸಿದರು.
ಪ್ರಭಾವಿಗಳನ್ನು ರಕ್ಷಿಸುವ ಪ್ರಯತ್ನ ಸರಕಾರದಿಂದ ನಡೆಯುತ್ತಿದೆ. ಇದರ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ವಿಚಾರಣೆಗೆ ಬರಲಿದೆ ಎಂದರು.