Advertisement

PSI ನೇಮಕ ಅಕ್ರಮ: ಇಂದು ತೀರ್ಪು

12:44 AM Nov 10, 2023 | Team Udayavani |

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖೀತ ಪರೀಕ್ಷೆ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಲು ಹಿಂದಿನ ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಹಲವು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳ ಕುರಿತ ತೀರ್ಪನ್ನು ಹೈಕೋರ್ಟ್‌ ಇಂದು (ಶುಕ್ರವಾರ) ಪ್ರಕಟಿಸಲಿದೆ.

Advertisement

ಸರಕಾರದ ಆದೇಶ ರದ್ದು ಕೋರಿ ಎನ್‌.ವಿ. ಚಂದನ್‌ ಸಹಿತ ಆಯ್ಕೆಪಟ್ಟಿಯಲ್ಲಿ ಹೆಸರಿದ್ದ 100 ಅಧಿಕ ಮಂದಿ ಅಭ್ಯರ್ಥಿಗಳು ಸಲ್ಲಿಸಿರುವ ತಕರಾರು ಅರ್ಜಿಗಳ ವಿಚಾರಣೆಯನ್ನು 2023ರ ಅ.26ರಂದು ಪೂರ್ಣಗೊಳಿಸಿ ಕಾದಿರಿಸಿರುವ ತೀರ್ಪುನ್ನು ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಶುಕ್ರವಾರ ಮಧ್ಯಾಹ್ನ 1.25ಕ್ಕೆ ಪ್ರಕಟಿಸಲಿದೆ.

ಪಿಎಸ್‌ಐ ನೇಮಕ ಹಗರಣದ ತನಿಖಾ ವರದಿ ಶೀಘ್ರ ಸಲ್ಲಿಕೆ: ನ್ಯಾ| ಬಿ.ವೀರಪ್ಪ

ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಸರಕಾರ ನೇಮಿಸಿರುವ ಹೈಕೋರ್ಟ್‌ ನಿವೃತ್ತ ನ್ಯಾ| ಬಿ.ವೀರಪ್ಪ ನೇತೃತ್ವದ ಏಕಸದಸ್ಯ ಆಯೋಗ ಇದೇ ತಿಂಗಳ ಕೊನೇ ವಾರದಲ್ಲಿ ಪ್ರಕರಣ ಕುರಿತ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ.

ಆಯೋಗವು ಗುರುವಾರ ಸಿಐಡಿ ಕಚೇರಿ ಆವರಣದಲ್ಲಿರುವ ಪೊಲೀಸ್‌ ನೇಮಕಾತಿ ವಿಭಾಗದ ಸ್ಟ್ರಾಂಗ್‌ ರೂಮ್‌ಗೆ ಭೇಟಿ ನೀಡಿ ಪರಿಶೀಲಿಸಿತು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾ| ಬಿ.ವೀರಪ್ಪ ಅವರು, ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಸರಕಾರ ತನ್ನ ನೇತೃತ್ವದಲ್ಲಿ ಆಯೋಗ ರಚಿಸಿದೆ. ಹೀಗಾಗಿ ನೇಮಕಾತಿ ವಿಭಾಗದ ಸ್ಟ್ರಾಂಗ್‌ ರೂಮ್‌ಗೆ ಭೇಟಿ ನೀಡಲಾಗಿದೆ. ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿದೆ. ಇದೇ ತಿಂಗಳ ಕೊನೆ ವಾರದಲ್ಲಿ ಸರಕಾರಕ್ಕೆ ತನಿಖಾ ವರದಿ ಸಲ್ಲಿಸುತ್ತೇವೆ ಎಂದರು.

ಪೊಲೀಸ್‌ ನೇಮಕಾತಿಯಲ್ಲೇ ಈ ರೀತಿ ಅಕ್ರಮವಾದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಇಂತಹ ಅಕ್ರಮಗಳು ಮುಂದೆ ನಡೆಯದಂತೆ ಸರಿಯಾದ ಮಾರ್ಗ ಕಂಡು ಹಿಡಿಯಲು ವಿಚಾರಣೆ ನಡೆಯುತ್ತಿದೆ. 27 ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಪತ್ರ ನೀಡಿದ್ದಾರೆ. ಪ್ರಕರಣದ 120 ಆರೋಪಿಗಳು ಸಹಿತ ತನಿಖಾಧಿಕಾರಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗಿದೆ. ಅನಂತರ ಅಫಿದವಿತ್‌ ಸಲ್ಲಿಸಿರುವ ಆರೋಪಿಗಳ ಪಾಟೀ ಸವಾಲು ನಡೆಸಿ ಎಲ್ಲ ಆಯಾಮಗಳಿಂದ ವಿಚಾರಣೆ ನಡೆಸಲು ಸಿದ್ಧತೆ ನಡೆಸಿ, ಎಲ್ಲವನ್ನು ಪರಿಶೀಲಿಸಲಾಗುತ್ತಿದೆ. ಮತ್ತೂಮ್ಮೆ ಇಂತಹ ಅಕ್ರಮ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ವರದಿಯಲ್ಲಿ ಶಿಫಾರಸುಗಳನ್ನು ಉಲ್ಲೇಖೀಸಲಾಗುತ್ತದೆ. ಜತೆಗೆ ಸ್ಟ್ರಾಂಗ್‌ ರೂಮ್‌ನ ಬಗ್ಗೆಯೂ ಕೆಲ ಸಲಹೆಗಳನ್ನು ನೀಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next