ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಹಗರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ಜಾಗೃತ್ ಮತ್ತು ರಚನಾ ಹನುಮಂತ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣದಲ್ಲಿ ಮೊದಲ ಆರೋಪಿ ಎಸ್. ಜಾಗೃತ್ ಮತ್ತು 17ನೇ ಆರೋಪಿ ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಗುರುವಾರ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ರಜಾಕಾಲದ ಏಕ ಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಅರ್ಜಿಯನ್ನು ಮೇ 19ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ತಿಳಿಸಿದೆ.
545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಹಗರಣದಲ್ಲಿ ಪಾಲ್ಗೊಂಡ ಆರೋಪ ಸಂಬಂಧ ಸಿಐಡಿ ಪೊಲೀಸ್ ಅಧಿಕಾರಿ ಪಿ.ನರಸಿಂಹಮೂರ್ತಿ ಎಂಬುವರು ನೀಡಿದ ದೂರು ಆಧರಿಸಿ ಹೈಗ್ರೌಂಡ್ಸ್ ಠಾಣಾ ಪೊಲೀಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಾಲ್ಕನೇ ರ್‍ಯಾಂಕ್ ಪಡೆದಿರುವ ಜಾಗೃತ್ ವಿರುದ್ಧ 2022ರ ಏ.9ರಂದು ಎಫ್ಐಆರ್ ದಾಖಲಿಸಿದ್ದರು. ಅದೇ ರೀತಿಯಲ್ಲಿ ಮಹಿಳಾ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಪಡೆದಿರುವ ರಚನಾ ಹನುಮಂತ ವಿರುದ್ಧ ಏ.30ರಂದು ಎಫ್ಐಆರ್ ದಾಖಲಿಸಿದ್ದರು.
ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಮೇಲ್ವಿಚಾರಕರು ಮತ್ತು ವಿಚಕ್ಷಣಾ ಸ್ಕ್ವಾಡ್ ಪರೀಕ್ಷಾ ಕೇಂದ್ರದ ಮೇಲೆ ನಿಗಾಯಿಟ್ಟಿದ್ದರು. ಇಂತಹ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿ ನಕಲು ಹಾಗೂ ಅಕ್ರಮ ನಡೆಯಲು ಸಾಧ್ಯವಿಲ್ಲ. ಪರೀಕ್ಷೆ ನಡೆದು ಬಹುತೇಕ ಒಂದು ವರ್ಷ ಕಳೆದಿದೆ. ಫಲಿತಾಂಶ ಪ್ರಕಟಗೊಂಡ ನಂತರ ಎಫ್ಐಆರ್ ದಾಖಲಿಸಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಅಲ್ಲದೇ, ಸಿಐಡಿ ಪೊಲೀಸ್ ಅಧಿಕಾರಿಯಾದ ನರಸಿಂಹ ಮೂರ್ತಿ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ. ಅವರೇ ತನಿಖಾ ತಂಡದಲ್ಲಿ ಸಹಾಯಕ ತನಿಖಾಧಿಕಾರಿಯಾಗಿದ್ದಾರೆ. ಈವರೆಗೂ ನಡೆದಿರುವ ಸಿಐಡಿ ತನಿಖೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ತಮ್ಮ ವಿರುದ್ಧ ಯಾವುದೇ ಆರೋಪ ಕೇಳಿಬಂದಿಲ್ಲ ಮತ್ತು ಸಾಕ್ಷ್ಯಾಧಾರಗಳು ಕಂಡುಬಂದಿಲ್ಲ. ಹೀಗಿದ್ದರೂ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸುವ ಉದ್ದೇಶದಿಂದ ಎಫ್ಐಆರ್ ದಾಖಲಿಸಲಾಗಿದೆ. ಆದ್ದರಿಂದ ತಮ್ಮ ವಿರುದ್ಧದ ಎಫ್ಐಆರ್‌ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅಲ್ಲದೆ, ಈ ಅರ್ಜಿ ನ್ಯಾಯಾಲಯದಿಂದ ಇತ್ಯರ್ಥಪಡಿಸುವರೆಗೂ ಪ್ರಕರಣ ಕುರಿತ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.