ವಿಧಾನಸಭೆ :ಪಿಎಸ್ ಐ ನೇಮಕಾತಿ ಹಗರಣ ಇದೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದ್ದು, ನಿಯಮ 69 ರ ಅನ್ವಯ ಚರ್ಚೆ ನಡೆಸುವುದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಮಾಡಿಕೊಟ್ಟಿದ್ದಾರೆ.
ಪ್ರಶ್ನೋತ್ತರ ಕಲಾಪ ಮುಕ್ತಾಯವಾಗುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ವಿಚಾರದ ಬಗ್ಗೆ ನಿಲುವಳಿ ಸೂಚನೆ ಮಂಡಿಸುವುದಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ಭಾರಿ ವಿರೋಧ ವ್ಯಕ್ತವಾಯಿತು. ಪ್ರಕರಣದ ತನಿಖೆ ನಡೆಯುವಾಗ ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವುದು ಎಷ್ಟು ಸೂಕ್ತ ? ಎಂದು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.
ಎಡಿಜಿಪಿ ದರ್ಜೆಯ ಅಧಿಕಾರಿಗಳನ್ನು ನಾವು ಬಂಧಿಸಿದ್ದೇವೆ. ಇತಿಹಾದಲ್ಲೇ ಇಷ್ಟು ಪಾರದರ್ಶಕ ತನಿಖೆ ನಡೆದಿಲ್ಲ ಎಂದು ವಾದಿಸುತ್ತಾ, ” ದೇಶಪಾಂಡೆಯವರೇ ನಿಮಗೆ” ನಾಚಿಕೆಯಾಗಬೇಕು ಎಂದು ಪದ ಬಳಸಿದರು. ಇದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಉಭಯ ಪಕ್ಷದ ಸದಸ್ಯರು ತಾಳ್ಮೆಕಳೆದುಕೊಳ್ಳುವಂತಾಯಿತು.
ವಿಪಕ್ಷ ನಾಯಕ ಸಿದ್ದರಾಮಯ್ಯನವರಂತೂ 2006 ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಪೊಲೀಸ್ ನೇಮಕಗಳ ಬಗ್ಗೆ ತನಿಖೆ ನಡೆಸಿ. ನನ್ನ ಕಾಲದಲ್ಲಿ ಆಗಿದ್ದು ಎಂದು ಯಾರೂ ಬೆರಳು ಮಾಡುವುದು ಬೇಡ ಎಂದು ಸವಾಲು ಹಾಕಿದರು.
ಕೊನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಾನು ಈ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತೇನೆ. ಆದರೆ ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸುತ್ತೇನೆ. ನಾಳೆ ಈ ಬಗ್ಗೆ ಚರ್ಚೆ ನಡೆಸೋಣ ಎಂದು ವಿವಾದಕ್ಕೆ ತೆರೆ ಎಳೆದರು.