ಕಲಬುರಗಿ/ಬೆಂಗಳೂರು: ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಗುರುವಾರ ಸಂಜೆ ಶಹಾಬಾದ್ ನಗರಸಭೆಯ ಎಫ್ ಡಿಐ ಅಧಿಕಾರಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 17ಕ್ಕೇರಿದೆ. ಈ ಮಧ್ಯೆ ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿಯ ಆಸ್ತಿಯನ್ನು ಶೀಘ್ರವೇ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಹಾಬಾದ್ ನಗರಸಭೆಯಲ್ಲಿ ಎಫ್ಡಿಎ ಆಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿ ಪಾಟೀಲ್ ಮೂಲತಃ ಬೆಂಗಳೂರಿನ ಸಚಿವಾಲಯದ ಡಿಪಿಆರ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ ಶಹಾಬಾದ್ ನಗರಸಭೆಗೆ ಎರವಲು ಸೇವೆ ಮೇಲೆ ನಿಯೋಜನೆಯಾಗಿದ್ದಾರೆ. ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಸೇಡಂ ತಾಲೂಕಿನ ಶಾಂತಾಬಾಯಿ ಎನ್ನುವವರು ತಲೆಮರೆಸಿಕೊಂಡಿರುವ ನೀರಾವರಿ ಇಲಾಖೆ ಎಂಜಿನಿಯರ್ ಮಂಜುನಾಥ ಮೇಳಕುಂದಿ ಜತೆಗೆ ವ್ಯವಹಾರ ಕುದುರಿಸಲು ಜ್ಯೋತಿ ಪಾಟೀಲ್ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಈ ಮಧ್ಯೆ ಸಿಐಡಿ ಪೊಲೀಸರು ತಮ್ಮ ಕಸ್ಟಡಿಯಲ್ಲಿರುವ ಎಲ್ಲ ಅಭ್ಯರ್ಥಿಗಳು, ಬ್ಲೂ ಟೂತ್ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಮತ್ತು ಇತರರ ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. ವಿಚಾರಣೆ ವೇಳೆ ಆರ್.ಡಿ. ಪಾಟೀಲ್‌ಗೆ ವಾಂತಿಯುಂಟಾಗಿ ಅಸ್ವಸ್ಥನಾದದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತ್ರಕರ್ತನ ಕುರಿತು ಮಾಹಿತಿ ಸಂಗ್ರಹ :
ಆರ್‌ಟಿಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠನ ವಿಚಾರಣೆಯ ಅನಂತರ ಪತ್ರಕರ್ತನೊಬ್ಬನ ಹೆಸರು ಪ್ರಕರಣದಲ್ಲಿ ಕೇಳಿ ಬಂದಿರುವುದರಿಂದ ಸಿಐಡಿ ಅಧಿಕಾರಿಗಳು ಆತನಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕುತ್ತಿದ್ದಾರೆ.