ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ತನಿಖೆ ಮುಂದುವರೆದಿದ್ದು, ಹಗರಣದ ಕಿಂಗ್ ಪಿನ್ ಆರ್ ಡಿ.ಪಾಟೀಲ್ ನ ಅಳಿಯ ಸೇರಿ ಮೂವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಳಿಯನಾದ ಪ್ರಕಾಶ ಬಸವರಾಜ, ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ನಿವಾಸಿ ಅಸ್ಲಂ ಹಾಗೂ ಕರಜಗಿ ಗ್ರಾಮದ ಮುನಾಫ್ ಜಮಾದಾರ್ ಎಂಬುವರೇ ಬಂಧಿತರು. ಒಟ್ಟಾರೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 38 ಕ್ಕೇರಿದೆ.
ಪ್ರಕಾಶ ಬಸವರಾಜ ಎಂಎಸ್ಐ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಪ್ರಭುಗೆ ಬ್ಲೂಟೂತ್ ನೀಡಿದ್ದ.ಅದಲ್ಲದೇ ಪಿಎಸ್ಐ ಪರೀಕ್ಷೆ ಮುಂಚೆ ನಡೆದ ಪೊಲೀಸ್ ಪೇದೆ ಪರೀಕ್ಷೆ ಯಲ್ಲೂ ಬ್ಲೂಟೂತ್ ಬಳಸಿ ಹೊರ ಬಿದ್ದ ಪ್ರಕರಣದಲ್ಲಿ ಪ್ರಕಾಶ ಬಸವರಾಜ ಮೊದಲನೇ ಆರೋಪಿಯಾಗಿದ್ದಾನೆ.
ಇನ್ನಿಬ್ಬರು ಆರ್ ಡಿ ಪಾಟೀಲ್ ಗೆ ಕ್ಯಾಂಡಿಡೇಟ್ ಗಳನ್ನು ಪೂರೈಸುತ್ತಿದ್ದ ಹಾಗೂ ಬ್ಲೂಟೂತ್ ಗಳನ್ನು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಇದಲ್ಲದೇ ಪಿಎಸ್ಐ ಅಕ್ರಮದ ಹೋರಾಟಗಾರ ಧಾರವಾಡದ ಆರ್ ಎಸ್ ಪಾಟೀಲ್ ಗೆ ಅಸ್ಲಂ ಜೀವ ಬೆದರಿಕೆ ಹಾಕಿದ್ದಾನೆ.
ಅಸ್ಲಾಂ ಹಾಗೂ ಮುನಾಫ್ ಜಮಾದಾರ್ ಬಂಧನದ ಮೂಲಕ ಅಕ್ರಮದಲ್ಲಿ ಪಾಲುದಾರರಾದ ಇನ್ನಷ್ಟು ಅಭ್ಯರ್ಥಿಗಳು ಸಿಕ್ಕಿಕೊಳ್ಳುವ ಸಾಧ್ಯತೆಗಳಿವೆ.
ಇದನ್ನೂ ಓದಿ : ಸೌರ ವಿದ್ಯುತ್ ಘಟಕಗಳ ಸಂಖ್ಯೆ ಹೆಚ್ಚಾಗಲಿ: ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್