ಬೆಂಗಳೂರು: ಪಿಎಸ್‌ಐ ಅಕ್ರಮ ಪರೀಕ್ಷೆ ಪ್ರಕರಣ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಪಿಎಸ್‌ಐ ಮರು ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸುತ್ತೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 545 ಪಿಎಸ್‌ಐ ಅಕ್ರಮ ಪರೀಕ್ಷೆ ಸಂಬಂಧ ಮರು ಪರೀಕ್ಷೆ ನಡೆಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಬದ್ಧವಾಗಿದೆ.
ಕೆಲವರು ಮರು ಪರೀಕ್ಷೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಕೂಡ ಸರ್ಕಾರದ ಪರವಾಗಿ ಹೇಳಿದೆ. ಸಿಐಡಿ ತನಿಖೆ ಮುಕ್ತಾಯಗೊಂಡು ಆರೋಪಪಟ್ಟಿ ಸಲ್ಲಿಕೆಯಾದ ಬಳಿಕ ಮರು ಪರೀಕ್ಷೆ ದಿನಾಂಕ ಪ್ರಕಟಿಸಲಾಗುತ್ತದೆ.
ಯಾಕೆಂದರೆ, ಈ ಬಾರಿಯ ಪಿಎಸ್‌ಐ ಪ್ರಕರಣದಲ್ಲಿ ಭಾಗಿಯಾಗುವ ಆರೋಪಿಗೆ ಮುಂದೆ ಯಾವುದೇ ಪರೀಕ್ಷೆಯಲ್ಲಿ ಅವಕಾಶ ದೊರೆಯಂತೆ ಮಾಡಬೇಕಿದೆ. ಒಂದೆರಡು ತಿಂಗಳಲ್ಲಿ ಸಿಐಡಿ ಆರೋಪಪಟ್ಟಿ ಸಲ್ಲಿಸಿದ ಬಳಿಕ ದಿನಾಂಕ ತಿಳಿಸುತ್ತೇವೆ ಎಂದರು.
ಇನ್ನು ಸಹ ಶಿಕ್ಷಕರ ತನಿಖೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿಐಡಿ ಸ್ವತಂತ್ರ ಸಂಸ್ಥೆ. ತನಿಖೆ ಮುಗಿಯುವರೆಗೂ ಯಾರಿಗೂ ಮಾಹಿತಿ ನೀಡುವುದಿಲ್ಲ. ಆರೋಪಪಟ್ಟಿ ಸಲ್ಲಿಸಿದ ಬಳಿಕ ಪ್ರಕರಣದ ಎಲ್ಲ ಆರೋಪಿಗಳು ಹಾಗೂ ಕೃತ್ಯದ ಮಾದರಿ ಬೆಳಕಿಗೆ ಬರಲಿದೆ ಎಂದು ಹೇಳಿದರು.