ಕಲಬುರಗಿ: ಪಿಎಸ್‌ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದ ಡಾ| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಂಕ್ರಪ್ಪ ಬಸಪ್ಪ ಹನಮಗೊಂಡ (32) ಎಂಬಾತನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈತ ಪ್ರಮುಖ ಆರೋಪಿ ಆರ್.ಡಿ. ಪಾಟೀಲನ ನಿಕಟವರ್ತಿ.
ಅಭ್ಯರ್ಥಿಗಳನ್ನು ಹುಡುಕುವುದಲ್ಲದೆ, ಹಣಕಾಸಿನ ವ್ಯವಹಾರವೂ ಮಾಡುತ್ತಿದ್ದ. ಬದಲಿಗೆ ಪ್ರಶ್ನೆಪತ್ರಿಕೆ ಕೈಗೆ ಸಿಗುತ್ತಿದ್ದಂತೆ ಅಭ್ಯರ್ಥಿಗಳಿಗೆ ಬ್ಲೂಟೂತ್ ಬಳಕೆ ಮಾಡಿ ಉತ್ತರಗಳನ್ನು ಹೇಳುತ್ತಿದ್ದ ಎಂದು ಆರೋಪಿಸಲಾಗಿದೆ.
ತುಮಕೂರಿನ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಪರೀಕ್ಷೆ ಬರೆದ ಶ್ರೀಶೈಲ ಬಿರಾದಾರ ಎಂಬಾತನಿಗೆ ಉತ್ತರಗಳನ್ನು ಬ್ಲೂಟೂತ್ ಮೂಲಕ ಒದಗಿಸಿದ್ದ ಆರೋಪದಡಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಐಡಿ ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್ ಆನಂದ, ಸಿಬಂದಿ ಕುಮಾರವ್ಯಾಸ ಹಾಗೂ ಚಿತ್ತಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂ ಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
30 ಲಕ್ಷಕ್ಕೆ ಡೀಲ್ ಕುದುರಿಸಿದ್ದ: ಜೇವರ್ಗಿ ತಾಲೂಕಿನ ಕರುನಳ್ಳಿಯ ಶಂಕ್ರಪ್ಪ 2017ರಲ್ಲಿ ದೈಹಿಕ ಶಿಕ್ಷಕನಾಗಿ ನೇಮಕವಾಗಿದ್ದ. ಈತ ಹಲವು ಅವ್ಯವಹಾರಗಳನ್ನು ಆರ್.ಡಿ.ಪಾಟೀಲ್ ಜತೆ ಸೇರಿಕೊಂಡು ನಿಭಾಯಿಸಿದ್ದ. ಮುಂದೆ ತಾನೇ ಸ್ವತಃ 30 ಲಕ್ಷಕ್ಕೆ ಅಭ್ಯರ್ಥಿಗಳನ್ನು ಗುರುತಿಸಿಕೊಂಡು ಉತ್ತರಗಳನ್ನು ಹೇಳುವ ಮೂಲಕ ನೆರವಾಗುತ್ತಿದ್ದ. ಸಿಐಡಿ ಅಧಿಕಾರಿಗಳು ಹುಡುಕುತ್ತಿರುವ ಕುರಿತು ಸುಳಿವು ಅರಿತ್ತಿದ್ದ ಶಂಕ್ರಪ್ಪ ಹಲವು ತಿಂಗಳಿಂದ ಶಾಲೆಗೆ ಗೈರಾಗಿದ್ದ. ಆದರೆ, ಈಚೆಗೆ ಕರದಾಳ ಗ್ರಾಮದಲ್ಲಿ ಇರುವ ಕುರಿತು ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.