ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದ ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡ ಮತ್ತೆ ಎಂಟು ಅಭ್ಯರ್ಥಿಗಳನ್ನು ಬಂ ಧಿಸಿದೆ.
ಹೈದರಾಬಾದ್-ಕರ್ನಾಟಕ ಕೋಟಾದಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದ ಜೇವರ್ಗಿಯ ಭಗವಂತರಾಯ ಜೋಗೂರ, ನಾಲ್ಕನೇ ರ್‍ಯಾಂಕ್ ಪಡೆದಿದ್ದ, ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಪೊಲೀಸ್ ಕಾನ್‌ಸ್ಟೆàಬಲ್ ಆಗಿರುವ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ರವಿರಾಜ್, ಪೀರಪ್ಪ ಸಿದ್ನಾಳ, ಶ್ರೀಶೈಲ ಹಚ್ಚಡ, ಹೈ-ಕ ಕೋಟಾದಲ್ಲಿ 22ನೇ ರ್‍ಯಾಂಕ್ ಪಡೆದಿದ್ದ ಅಫಜಲಪುರ ತಾಲೂಕಿನ ಗೌರ (ಬಿ) ಗ್ರಾಮದ ಸಿದ್ದುಗೌಡ ಶರಣಪ್ಪ ಪಾಟೀಲ, ಸೋಮನಾಥ, ವಿಜಯಕುಮಾರ್ ಗುಡೂರ ಬಂಧಿತರು.
ಆರ್‌ಡಿ ಅಳಿಯ ಬಂಧನ: ಪ್ರಕರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲನ ಹೆಂಡತಿಯ ಸಹೋದರ ಬಂಧಿತ ಸಿದ್ದುಗೌಡ ಯಾದಗಿರಿ ಜಿಲ್ಲೆ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಅದರೂ, ಪಿಎಸ್‌ಐ ಆಗಬೇಕು ಎನ್ನುವ ಆಕಾಂಕ್ಷೆಯಿಂದ ಬ್ಲೂಟೂತ್ ಬಳಕೆ ಮಾಡಿ ಅಕ್ರಮವಾಗಿ ಪರೀಕ್ಷೆ ಬರೆದು ರ್‍ಯಾಂಕ್‌ನಲ್ಲಿ ಪಾಸಾಗಿದ್ದ ಎಂದು ಗೊತ್ತಾಗಿದೆ.
ಬಂಧಿತ ಎಲ್ಲ ಎಂಟು ಜನ ಅಭ್ಯರ್ಥಿಗಳು ಕಳೆದ ಅಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಪಾಸಾಗಿದ್ದಾರೆಂದು ಈಗಾಗಲೇ ಬಂಧಿತರು ನೀಡಿದ ಸುಳಿವಿನ ಮೇರೆಗೆ ಅವರನ್ನು ಬಂಧಿಸಲಾಗಿದೆ. ಇದಕ್ಕಾಗಿ ಹಲವಾರು ದಿನಗಳ ಕಾಲ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
3 ಪರೀಕ್ಷಾ ಕೇಂದ್ರಗಳು: ಈಗಾಗಲೇ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದವರು ನೀಡಿದ ಮಾಹಿತಿಯಂತೆ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕಾಲೇಜಾಗಿರುವ ಶರಣಬಸವೇಶ್ವರ ವಿಜ್ಞಾನ ಕಾಲೇಜು, ಗೋದುತಾಯಿ ಎಂಜಿನಿಯರಿಂಗ್ ಕಾಲೇಜು, ಹೊಸ ಆರ್‌ಟಿಒ ಕಚೇರಿ ಬಳಿಯ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಅಕ್ರಮ ನಡೆದಿತ್ತು. ಇದರಿಂದಾಗಿ ರವಿರಾಜ್, ಪೀರಪ್ಪ ಸಿದ್ನಾಳ ಹಾಗೂ ಶ್ರೀಶೈಲ ಹಚ್ಚಡ ಮೂವರೂ ಶರಣಬಸವೇಶ್ವರ ಕಲಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲೂ, ಸಿದ್ದುಗೌಡ ಪಾಟೀಲ ಶರಣಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಮತ್ತು ಸೋಮನಾಥ ಗೋದುತಾಯಿ ಎಂಜಿನಿಯರಿಂಗ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು. ಅದೇ ರೀತಿ ಭಗವಂತರಾಯ ಜೋಗೂರ ಹೊಸ ಆರ್‌ಟಿಒ ಕಚೇರಿ ಬಳಿಯ ಸರ್ಕಾರಿ ಪ್ರಥಮ ದರ್ಜೆ(ಸ್ವಾಯತ್ತ) ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ. ಮತ್ತೂಬ್ಬ ಆರೋಪಿ ವಿಜಯಕುಮಾರ್ ಗುಡೂರ ನಗರದ ಎಂ.ಎಸ್.ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಸಿಐಡಿ ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೊಡ, ವೀರೇಂದ್ರಕುಮಾರ್ ಹಾಗೂ ಡಿಟೆಕ್ಟಿವ್ ವಿಭಾಗದ ಪಿಎಸ್‌ಐಗಳಾದ ಆನಂದ, ಯಶವಂತ ಹಾಗೂ ಶಿವಪ್ರಸಾದ್ ನೆಲ್ಲೂರ ಅವರನ್ನೊಳಗೊಂಡ ತಂಡವು ಅಭ್ಯರ್ಥಿಗಳನ್ನು ಬಂಧಿಸಿ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕ್ಯಾಂಪ್ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ.