Advertisement

ಪಿಎಸ್‌ಐ ನೇಮಕ ಪ್ರಕರಣ: ಸ್ಟ್ರಾಂಗ್‌ರೂಮ್‌ ಉಸ್ತುವಾರಿಯಲ್ಲೇ ಅಕ್ರಮ

01:53 AM May 09, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಕಚೇರಿಯಲ್ಲಿ ಒಎಂಆರ್‌ ಶೀಟ್‌ ಸಂಗ್ರಹಿಸಿದ್ದ ಸ್ಟ್ರಾಂಗ್‌ ಕೊಠಡಿಯ ಉಸ್ತುವಾರಿ ಹೊತ್ತಿದ್ದ ಡಿವೈಎಸ್ಪಿ ಶಾಂತಕುಮಾರ್‌ ಮತ್ತು ಮತ್ತೊಬ್ಬ ಡಿವೈಎಸ್ಪಿ ಕಣ್ಣಂಚಿನಲ್ಲೇ ಒಎಂಆರ್‌ ಶೀಟ್‌ಗಳ ತಿದ್ದುಪಡಿ ಆಗಿದೆ ಎಂಬುದು  ಬೆಳಕಿಗೆ ಬಂದಿದೆ. ಆದರೆ ತನಿಖಾ ತಂಡ ಇಬ್ಬರು ಡಿವೈಎಸ್ಪಿ ಸಹಿತ ಮೂವರು  ಅಧಿಕಾರಿಗಳ ವಿಚಾರಣೆಗೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.

Advertisement

ರಾಜ್ಯದ 92 ಕೇಂದ್ರಗಳಲ್ಲಿ ಪರೀಕ್ಷೆ ಮುಗಿದ ಬಳಿಕ ಎಲ್ಲ ಒಎಂಆರ್‌ ಶೀಟ್‌ಗಳು ಬೆಂಗಳೂರಿನ ಸಿಐಡಿ ಕೇಂದ್ರದ ಸ್ಟ್ರಾಂಗ್‌ ಕೊಠಡಿಯಲ್ಲಿ ಇಡಲಾಗಿತ್ತು. ಅದರ ಭದ್ರತೆ ಹೊಣೆ ಶಾಂತಕುಮಾರ್‌ ಸಹಿತ ಇಬ್ಬರು ಡಿವೈಎಸ್ಪಿಗಳದ್ದಾಗಿತ್ತು.

ಮತ್ತೊಂದೆಡೆ ಕಲಬುರಗಿ, ದಾವಣಗೆರೆ, ಹಾಸನ, ಬೆಳಗಾವಿ ಕೇಂದ್ರಗಳಲ್ಲಿ ಬ್ಲೂಟೂತ್‌ ಮೂಲಕ ಪರೀಕ್ಷೆ ಅಕ್ರಮ ನಡೆಸಲಾಗಿತ್ತು. ಆದರೆ ಬೆಂಗಳೂರಿನ 40 ಕೇಂದ್ರಗಳ ಪೈಕಿ 24ರಲ್ಲಿ  ಪರೀûಾ ಅಕ್ರಮ ನಡೆದಿದೆ. ಈ ಪೈಕಿ 8 ಕೇಂದ್ರಗಳ ಅಭ್ಯರ್ಥಿಗಳಲ್ಲಿ 130ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ತೇರ್ಗಡೆ ಹೊಂದಲು 60-70 ಲಕ್ಷ ರೂ. ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಹೊಸ ಒಎಂಆರ್‌ ಶೀಟ್‌ ಸೇರ್ಪಡೆ
ಆರ್‌.ಡಿ. ಪಾಟೀಲ್‌ ಮತ್ತು ಮಂಜುನಾಥ್‌ ಮೇಳಕುಂದಿ ಹಾಗೂ ದಿವ್ಯಾ ಹಾಗರಗಿ ಕಡೆಯ ಈ ಅಭ್ಯರ್ಥಿಗಳು ಕೇವಲ 20-30 ಅಂಕಗಳಿಗಷ್ಟೇ ಪರೀಕ್ಷೆ ಬರೆದಿದ್ದರು. ಹೀಗಾಗಿ ಅವರ ಒಎಂಆರ್‌ ಶೀಟ್‌ ತಿದ್ದುಪಡಿ ಮಾಡಲು ಇಬ್ಬರು ಡಿವೈಎಸ್ಪಿಗಳೇ ಸ್ಟ್ರಾಂಗ್‌ ಕೊಠಡಿಯ ಬೀಗವನ್ನು ತೆರೆದು ಕೆಲವು ಅಭ್ಯರ್ಥಿಗಳು ಮತ್ತು ಮಧ್ಯವರ್ತಿಗಳು ಹಾಗೂ ಕೋಚಿಂಗ್‌ ಸೆಂಟರ್‌ನ ಶಿಕ್ಷಕರು ಸ್ವಲ್ಪ ಹೊತ್ತು ಕುಳಿತು ತಿದ್ದುಪಡಿ ಮಾಡಲು ಅವಕಾಶ ನೀಡಿದ್ದಾರೆ ಎಂದು ಹೇಳಲಾಗಿದೆ.

ಮತ್ತೊಂದೆಡೆ 20-30 ಅಂಕಗಳನ್ನು ಬರೆದಿದ್ದ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನೇ ಬದಲಿಸಿ ಅದೇ ರೋಲ್‌ ನಂಬರ್‌ನ ಹೊಸ ಒಎಂಆರ್‌ ಶೀಟ್‌ ಇಡಲಾಗಿದೆ. ಈ ಪ್ರಕ್ರಿಯೆ ಸುಮಾರು ನಾಲ್ಕೈದು ದಿನಗಳು ನಡೆದಿವೆ ಎಂದು ಹೇಳಲಾಗಿದೆ. ಮತ್ತೂಂದೆಡೆ ಈ ಎಲ್ಲ ಅಕ್ರಮಕ್ಕೆ ಸೂತ್ರದಾರ ಒಬ್ಬ ಹಿರಿಯ ಐಪಿಎಸ್‌ ಅಧಿಕಾರಿ ಎಂದು ಮೂಲಗಳು ತಿಳಿಸಿವೆ.

Advertisement

ಪೌಲ್‌,  ಶಾಂತಕುಮಾರ್‌ ವಿಚಾರಣೆ ಯಾಕಿಲ್ಲ?
ಅಕ್ರಮ ಪೊಲೀಸ್‌ ಇಲಾಖೆ ಸುತ್ತಲೇ ಗಿರಕಿ ಹೊಡೆಯುತ್ತಿದ್ದರೂ ಇದುವರೆಗೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್‌ಪೌಲ್‌ ಮತ್ತು ಡಿವೈಎಸ್ಪಿ ಶಾಂತಕುಮಾರ್‌ ಅವರನ್ನು ವಿಚಾರಣೆ ನಡೆಸಿಲ್ಲ. ಕನಿಷ್ಠ ನೋಟಿಸ್‌ ಕೂಡ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದ ಈ ಇಬ್ಬರು ಅಧಿಕಾರಿಗಳ ವಿಚಾರಣೆಗೆ ಸಿಐಡಿ  ಹಿಂದೇಟು ಹಾಕಿ ಪ್ರಕರಣವನ್ನೇ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.  ಇವರಿಬ್ಬರ ವಿರುದ್ಧದ ಆರೋಪವನ್ನು ತಳ್ಳಿ ಹಾಕಲು ಸರಕಾರವೇ ಪರೋಕ್ಷವಾಗಿ  ಸೂಚನೆ ನೀಡಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next