ಕೊಪ್ಪಳ: ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಮೃತ ಮಗನ ಕುಟುಂಬಕ್ಕೆ ನ್ಯಾಯ ಸಿಗಲಿ. ನನ್ನ ಮಗನ ಸಾವಿಗೆ ಕಾರಣವಾದ ವ್ಯಕ್ತಿಗಳನ್ನು ಕೂಡಲೇ ಬಂಧಿಸಲಿ. ಆ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ ಎಂದು ಮೃತಪಟ್ಟ ಯಾದಗಿರಿ ಪಿಎಸ್ಐ ಪರಶುರಾಮ ಅವರ ತಂದೆ ಜನಕಮುನಿ ಹೇಳಿದರು.
ಕಾರಟಗಿ ತಾಲೂಕಿನ ಸೋಮನಾಳದಲ್ಲಿ ರವಿವಾರ (ಆ 04) ಮಾತನಾಡಿದ ಅವರು, ನನ್ನ ಮಗ ಪರುಶುರಾಮ ಜೊತೆ ನಾನು ಯಾದಗಿರಿಯಲ್ಲೇ ಇದ್ದೆ. ಆತನು ಸಾವನ್ನಪ್ಪುವ ಮೊದಲು ನನಗೆ ಚಿತ್ರಾನ್ನ ಮಾಡಿಕೊಟ್ಡಿದ್ದ. ಇಬ್ಬರು ಕೂಡಿಯೇ ಊಟ ಮಾಡಿದ್ದೆವು. ಅಂದು ಮನೆಗೆ ಬಂದ ವೇಳೆ ಆತನ ಮುಖದಲ್ಲಿ ಸಪ್ಪಗಿದ್ದ. ನಾನು ಆತನ ಮುಖ ನೋಡಿ ಕೇಳಿದೆ. ಆತನು ನನಗೆ ಏನೂ ಹೇಳಲಿಲ್ಲ. ಎಲ್ಲವೂ ತನ್ನ ತಾಯಿಯ ಮುಂದೆ ಹೇಳಿಕೊಳ್ಳುತ್ತಿದ್ದ ಎಂದರು.
ಊಟ ಮಾಡಿ ಮಲಗುವೆ ಎಂದು ಹೇಳಿ ರೂಮಿನಲ್ಲಿ ಮಲಗಿದ. ನಾನು ಮಗ ಮಲಗಿದ್ದಾನೆ ಎಂದು ಸುಮ್ಮನೆ ಇದ್ದೆ. ತುಂಬ ಗಂಟೆ ಆದರೂ ಆತನು ಏಳಲಿಲ್ಲ. ಮನೆಯಿಂದ ತಾಯಿ ಕರೆ ಮಾಡಿ ಮಗನನ್ನು ಎಬ್ಬಿಸು ಎಂದಳು. ಮಗ ಮಲಗಿದ್ದಾನೆ ಯಾಕೆ ತೊಂದರೆ ಮಾಡಬೇಕು ಎಂದು ನನ್ನ ಪತ್ನಿಗೆ ಹೇಳಿದೆ. ಮಲಗಿ ತುಂಬಾ ಹೊತ್ತಾಯಿತು ಸಾಕು ಎಬ್ಬಿಸು ಎಂದಳು. ಆಗ ನಾನು ರೂಮಿಗೆ ಹೋಗಿ ಮಗನನ್ನ ಎಬ್ಬಿಸಲು ಯತ್ನಿಸಿದೆ. ಮಗ ಮೇಲೆ ಏಳಲೇ ಇಲ್ಲ, ಆತನ ಬಾಯಿಯಿಂದ ನಾಲ್ಕು ಹನಿ ರಕ್ತ ಬಿದ್ದಿತ್ತು. ನನಗೆ ಧೈರ್ಯ ಬರಲಿಲ್ಲ ಕೈ ಕಾಲು ಮುಟ್ಟಿ ನೋಡಿದೆ ಆದರೂ ಹೇಳಲಿಲ್ಲ. ತಕ್ಷಣ ಅಕ್ಕ ಪಕ್ಕದ ರೂಮಿನವರಿಗೆ ನನ್ನ ಮಗ ಮೇಲೇಳುತ್ತಿಲ್ಲ ಎಂದು ಹೇಳಿದೆ. ಅವರೂ ಸಹ ನನ್ನ ಮಗನ ಎಬ್ಬಿಸಲು ಪ್ರಯತ್ನ ಮಾಡಿದರು. ತಕ್ಷಣ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳಿದೆವು. ಆಗ ಆತನು ಮೃತಪಟ್ಟಿದ್ದಾನೆ ಎಂದು ಹೇಳಿದರು ಎಂದು ಅಳಲು ತೋಡಿಕೊಂಡರು.
ನನಗೆ ವರ್ಗಾವಣೆ ವಿಚಾರ ಏನೂ ಹೇಳಿರಲಿಲ್ಲ. ಹಣದ ವಿಚಾರವನ್ನೂ ನನಗೆ ಏನೂ ಹೇಳಿಲ್ಲ. ಎಲ್ಲವನ್ನು ತನ್ನ ತಾಯಿಯ ಜೊತೆಗೆ ಮಾತನಾಡುತ್ತಿದ್ದ. ನನ್ನ ಮಗ ಕೂಲಿ ಕೆಲಸ ಮಾಡಿ ಕಷ್ಟಪಟ್ಟು ಸರ್ಕಾರಿ ನೌಕರಿ ಸೇರಿದ್ದ. ಮಗನನ್ನು ಕಳೆದುಕೊಂಡ ನಮಗೆ ದಿಕ್ಕು ತೋಚದಂತೆ ಆಗಿದೆ. ಮಗನ ಸಾವು ನಮ್ಮ ಕುಟುಂಬಕ್ಕೆ ಸಹಿಸಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.
ಹಣ ಎಲ್ಲಿಂದ ತರಲಿ ಎಂದಿದ್ದ…
ನನ್ನ ಮಗ ಸಾಯುವ ಎರಡು ದಿನ ಮೊದಲು ನಾನು ಜೊತೆಯಲ್ಲೇ ಇದ್ದೆ. ನನ್ನ ಮಗ ತುಂಬ ಕಷ್ಟಪಟ್ಟು ನೌಕರಿ ಸೇರಿದ್ದ. ನಾನು ನಮ್ಮೂರಿಗೆ ಹೋಗುವೆ ಎಂದಿದ್ದೆ. ಆಗ ಆತನು ನನ್ನ ವರ್ಗಾವಣೆ ಆಗುತ್ತಿದೆ ಎಂದು ಹೇಳಿದ್ದ. ನನ್ನ ಮಗ ವರ್ಗಾವಣೆಗೆ ಹಣ ವಿಚಾರ ಮಾತಾಡಿದ್ದ.ಅಷ್ಟೊಂದು ಹಣ ನಾನು ಏಲ್ಲಿಂದ ತರಲಿ ಎಂದಿದ್ದ. ನಿಮ್ಮ ಅಣ್ಣಂದಿರನ್ನು ಕೇಳಪ್ಪಾ ಎಂದು ಮಗನಿಗೆ ಹೇಳಿದ್ದೆ ಪರಶುರಾಮ ತಾಯಿ ಹಿರೇಗಂಗಮ್ಮ ಹೇಳಿದರು.