ಶ್ರೀ ರಂಗಪಟ್ಟಣ: ತನ್ನ ಮಗನಿಗೆ ಪಿಎಸ್ಐ ಕೆಲಸ ಕೊಡಿಸುವ ಆಸೆಗೆ ಬಿದ್ದ ರೈತನೊಬ್ಬ 38 ಲಕ್ಷ ರೂ. ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದ ನಿವಾಸಿ ನಿಂಗರಾಜು ಮೋಸ ಹೋದ ರೈತ. ಕೋಲಾರ ಮೂಲದ ಮಂಜುನಾಥ್ ಅಲಿಯಾಸ್ ಅಕ್ಷಯ್ ಎಂಬುವನ ವಿರುದ್ಧ ಮೋಸಹೋದ ರೈತ ನಿಂಗರಾಜು ವಂಚನೆ ಆರೋಪದ ಮೇಲೆ ಮಂಡ್ಯ ಎಸ್ಪಿಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ.
ನಿಂಗರಾಜು ಮಗ ಅರುಣ್ಕುಮಾರ್ ಕಳೆದ ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದ. ಆ ವೇಳೆ ನಿಂಗರಾಜು, ಪರಿಚಯದ ಬಿಜೆಪಿ ಮುಖಂಡರೊಬ್ಬರ ಮೂಲಕ ಈ ವಂಚಕ ಮಂಜುನಾಥ್ ಪರಿಚಯವಾಗಿದ್ದ. ಈ ವೇಳೆ ತಾನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿ.ವೈ.ವಿಜಯೇಂದ್ರ ಆಪ್ತ ಎಂದು ಹೇಳಿಕೊಂಡಿದ್ದ. ಅಲ್ಲದೆ 40 ಲಕ್ಷ ರೂ. ಕೊಟ್ಟರೆ ನಿಮ್ಮ ಮಗನಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಮಂಜುನಾಥ್ ಹೇಳಿದ ಮಾತನ್ನು ನಂಬಿದ ರೈತ ನಿಂಗರಾಜು 38 ಲಕ್ಷ ಕೊಡುವುದಾಗಿ ಒಪ್ಪಿ 30.25 ರೂ. ನೀಡಿದ್ದ. 17 ಲಕ್ಷ ರೂ. ಬ್ಯಾಂಕ್ ಖಾತೆ ಮೂಲಕ ಆರ್ ಟಿಜಿಎಸ್ ಮೂಲಕ ಜಮೆ ಮಾಡಿದ್ದರೆ, ಉಳಿದ 13.25 ಲಕ್ಷ ರೂ. ನಗದು ರೂಪದಲ್ಲಿ ನೀಡಿದ್ದರು. ಮಗ ಪೊಲೀಸ್ ಆಗುವ ಆಸೆಯಿಂದ ಬಡ್ಡಿಗೆ ಸಾಲ ಮಾಡಿ ಹಾಗೂ ತನ್ನ ಒಂದೂವರೆ ಎಕರೆ ಜಮೀನು ಮಾರಿ ನಿಂಗರಾಜು ಮಂಜುನಾಥ್ಗೆ ಹಣ ನೀಡಿದ್ದರು.
ಇದಾದ ಬಳಿಕ ಪಿಎಸ್ಐ ಆಯ್ಕೆ ಪಟ್ಟಿಯಲ್ಲಿ ಮಗನ ಹೆಸರು ಬಾರದಿದ್ದಾಗ ನಿಂಗರಾಜು ಮಂಜುನಾಥ್ನಿಂದ ಹಣ ವಾಪಸ್ ಕೇಳಿದ್ದಾರೆ. ಆದರೆ, ಹಣ ವಾಪಸ್ ಕೊಡದ ವಂಚಕ ಮಂಜುನಾಥ್ ಸಬೂಬು ಹೇಳಿಕೊಂಡು ಬಂದಿದ್ದಾನೆ. ಇತ್ತ ಮಗನಿಗೆ ಕೆಲಸವೂ ಸಿಗದೆ, ಅತ್ತ ಕೊಟ್ಟ ಹಣವೂ ವಾಪಸ್ ಸಿಗದೆ ರೈತ ನಿಂಗರಾಜು ಹಾಗೂ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಕುಟುಂಬ ಬಂದಿದೆ.
ಈಗ ಕಡೆಗೆ ಪೊಲೀಸರಿಗೆ ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಸೇರಿ ಮಂಡ್ಯದ ಎಸ್ಪಿಯವರಿಗೆ ನ್ಯಾಯ ಕೊಡಿಸುವಂತೆ ಎಂದು ದೂರು ನೀಡಿದ್ದಾರೆ. ಆದರೆ ದೂರು ನೀಡಿದರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ನಿಂಗರಾಜು ಕುಟುಂಬ ಕಣ್ಣೀರಿಡುತ್ತಿದೆ. ಪೊಲೀಸರು ದೂರು ದಾಖಲು ಮಾಡಿಕೊಳ್ಳದೆ ಮಂಜನಾಥ್ ಕರೆಸಿ ಮಾತನಾಡುವುದಾಗಿ ಹೇಳುತ್ತಿದ್ದಾರೆ ಎಂದು ನಿಂಗರಾಜು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೆ ಮಗನಿಗೆ ವಾಮಮಾರ್ಗದಲ್ಲಿ ಪೊಲೀಸ್ ಕೆಲಸ ಕೊಡಿಸಲು ರೈತ ಲಕ್ಷಾಂತರ ರೂ. ಕಳೆದುಕೊಂಡು ಇದೀಗ ಕಣ್ಣೀರು ಇಡುತ್ತಾ ಮಾಡಿರುವ ಸಾಲ ಹೇಗೆ ತೀರಿಸುವುದು ಎಂಬ ಚಿಂತೆಗೆ ಸಿಲುಕಿದ್ದಾನೆ.