Advertisement

ಪಿಎಸ್‌ಐ ಅಕ್ರಮ: ಮತ್ತೊಬ್ಬ ಮಧ್ಯವರ್ತಿ ವಶ:  ಸಿಐಡಿ ವಿಶೇಷ ತನಿಖಾ ತಂಡದ ಕಾರ್ಯಾಚರಣೆ 

01:40 AM Jul 13, 2022 | Team Udayavani |

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮತ್ತೂಬ್ಬ ಮಧ್ಯವರ್ತಿ, ಶಿರಸಿ ಮೂಲದ ಗಣಪತಿ ಭಟ್‌ ಎಂಬಾತನನ್ನು ಸಿಐಡಿ ವಿಶೇಷ ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

Advertisement

ಈ ಗಣಪತಿ ಭಟ್‌ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ಎಂಬ ಮಾತುಗಳು ಕೇಳಿ ಬಂದಿದ್ದವಾದರೂ ಸಿಐಡಿ ವಶಕ್ಕೆ ಪಡೆದಿರುವ ಗಣಪತಿ ಭಟ್‌ಗೂ ಸಚಿವರಿಗೂ ಯಾವುದೇ ಸಂಬಂಧವಿಲ್ಲ. ಆತ ಗೃಹ ಸಚಿವರ ಆಪ್ತ ಸಹಾಯಕನಲ್ಲ ಎಂದು ಸಚಿವರ ಕಚೇರಿ ಸ್ಪಷ್ಟಪಡಿಸಿದೆ.

ಈ ಮಧ್ಯೆ ಗಣಪತಿ ಭಟ್‌ ಯಾರು ಎಂಬ ಬಗ್ಗೆ ತನಿಖೆ ನಡೆಯಬೇಕು. ಹಗರಣ ನಡೆದ ಸಂದರ್ಭದ ಗೃಹ ಸಚಿವರ ಕಚೇರಿ, ನಿವಾಸದ ಸಿಸಿ ಟಿವಿ ದೃಶ್ಯಾವಳಿ ಬಹಿರಂಗಪಡಿಸಬೇಕು ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

ಕಾರವಾರದ ಶಿರಸಿ ಮೂಲದ ಗಣಪತಿ ಭಟ್‌ ಮಧ್ಯವರ್ತಿಯಾಗಿದ್ದು, ಈ ಹಿಂದೆಯೂ ಸಾಕಷ್ಟು ಮಂದಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ. ಪಿಎಸ್‌ಐ ಅಕ್ರಮ ನೇಮಕದಲ್ಲೂ ಭಾಗಿಯಾಗಿದ್ದು, ಮೂವರು ಅಭ್ಯರ್ಥಿಗಳಿಂದ ಹಣ ಪಡೆದು ಡಿವೈಎಸ್ಪಿ ಶಾಂತಕುಮಾರ್‌ನನ್ನು ಭೇಟಿಯಾಗಿ ಅಕ್ರಮ ವ್ಯವಹಾರ ಕುದುರಿಸಿದ್ದಾನೆ. ಈ ಹಿಂದೆ ಒಎಂಆರ್‌ ಶೀಟ್‌ ತಿದ್ದುಪಡಿ ಆರೋಪದಲ್ಲಿ ವಿಚಾರಣೆ ನಡೆಸಿದಾಗ ಕೆಲವು ಅಭ್ಯರ್ಥಿಗಳು ಗಣಪತಿ ಭಟ್‌ ಬಗ್ಗೆ ಹೇಳಿಕೆ ನೀಡಿದ್ದರು. ಹೀಗಾಗಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಗಣಪತಿ ಭಟ್ಟ ಯಾರು?
ಗಣಪತಿ ಭಟ್‌ ನೆಲೆಮಾವು ಸಾಮಾಜಿಕ ಕಾರ್ಯಕರ್ತರಾಗಿದ್ದು, ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದರು. ಕಳೆದ ಅವಧಿಯಲ್ಲಿ ಅಣಲೆಬೈಲ್‌ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದು ಸಂಘದ ಅಧ್ಯಕ್ಷರಾಗಿದ್ದರು.

Advertisement

ನ್ಯಾ|ಮೂ| ಮುಂದೆ ಪೌಲ್‌ ಸ್ವಇಚ್ಛಾ ಹೇಳಿಕೆ?
ಪೊಲೀಸ್‌ ಕಸ್ಟಡಿಯಲ್ಲಿರುವ ಎಡಿಜಿಪಿ ಅಮೃತ್‌ ಪೌಲ್‌ ನ್ಯಾಯಾಧೀಶರ ಎದುರು ಸ್ವಇಚ್ಛಾ ಹೇಳಿಕೆ ದಾಖಲಿಸಲು ಒಲವು ತೋರಿದ್ದು, ತನಿಖಾಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಕಾನೂನು ಪ್ರಕಾರ ತನಿಖಾಧಿಕಾರಿಗಳು ಆರೋಪಿ ಅಥವಾ ಸಂತ್ರಸ್ತರ ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಮನವಿ ಮಾಡಬೇಕಿದೆ. ಅಮೃತ್‌ಪೌಲ್‌ ನೇರವಾಗಿ ತಾನೇ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸುತ್ತೇನೆ. ಅಕ್ರಮ ನೇಮಕಾತಿಗೆ ತನಗೆ ಯಾರು ಒತ್ತಾಯಿಸಿದರು, ತಾನು ಯಾರಿಗೆಲ್ಲ ಕೋಟ್ಯಂತರ ರೂ. ನೀಡಿದ್ದೇನೆ,

ಯಾವ ಸಚಿವರು, ಶಾಸಕರು ತಮ್ಮ ಅಭ್ಯರ್ಥಿಗಳಿಗೆ ಹುದ್ದೆ ಕೊಡಿಸುವಂತೆ ಬೇಡಿಕೆ ಮಂಡಿಸಿದ್ದರು ಎಂಬ ಬಗ್ಗೆ ಹೇಳಿಕೆ ನೀಡುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಈ ಮಧ್ಯೆ ಅಮೃತ್‌ ಪೌಲ್‌ ಪೊಲೀಸ್‌ ಕಸ್ಟಡಿ ಜು. 13ಕ್ಕೆ ಮುಕ್ತಾಯವಾಗಲಿದ್ದು, ಬುಧವಾರ ಸಂಜೆ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಿಚಾರಣೆಗೆ ಪಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next