Advertisement

ಸೀರಿಯಲ್‌ ನಂಬರ್‌ನಿಂದಲೂ ಪಿಎಸ್‌ಐ ಅಕ್ರಮ!  ಡಿವೈಎಸ್‌ಪಿ, ಎಸ್‌ಐ  ಸೂತ್ರಧಾರರು

07:43 AM May 05, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕೇವಲ ಬ್ಲೂಟೂತ್‌, ಒಎಂಆರ್‌ ಹಾಗೂ ಕಾರ್ಬನ್‌ ಶೀಟ್‌ ಅವ್ಯವಹಾರ ಮಾತ್ರವಲ್ಲದೆ, “ಸೀರಿಯಲ್‌ ಸೆಟ್ಟಿಂಗ್‌’ ಅಥವಾ “ಸೀರಿಯಲ್‌ ನಂಬರ್‌’ ಮೂಲಕವೂ ಅಕ್ರಮ ನಡೆಸಿದ್ದರು ಎಂಬುದು ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ.

Advertisement

ನೇಮಕಾತಿ ವಿಭಾಗದಲ್ಲಿದ್ದ ಡಿವೈಎಸ್ಪಿ ಹಾಗೂ ಉತ್ತರ ಕರ್ನಾಟಕದಲ್ಲಿದ್ದ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರು ಇದರ ಪ್ರಮುಖ ಸೂತ್ರಧಾರರು ಎನ್ನಲಾಗಿದೆ. ಹಿಂದೆ ನಡೆದ ಪಿಎಸ್‌ಐ ಪರೀಕ್ಷೆಗಳ ಅಕ್ರಮಗಳಲ್ಲೂ ಇದೇ ಮಾದರಿಯಲ್ಲಿ ವಂಚನೆ ನಡೆದಿದೆ ಎಂದು ಹೇಳಲಾಗಿದೆ.

ಪಿಎಸ್‌ಐ ಪರೀಕ್ಷೆಗೆ ಅರ್ಜಿ ಸಲ್ಲಿಸಿ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳ ಪೈಕಿ ಹೆಚ್ಚು ಕಲಿತಿರುವ ಮಧ್ಯಮ ವರ್ಗ ಅಥವಾ ಬಡ ವರ್ಗದವರು ಹಾಗೂ  ಹೆಚ್ಚು ಅಂಕ ಗಳಿಸುವಂಥ ವಿಶ್ವಾಸ ಹೊಂದಿದವರು ಅಥವಾ ಇಂಥ ಅಕ್ರಮ ನಡೆಸಲೆಂದೇ

ಕೆಲವು ಬುದ್ಧಿವಂತ ಅಭ್ಯರ್ಥಿಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸುತ್ತಿದ್ದರು. ಅನಂತರ ಅವರಿಗೆ, ತಾವು ಸೂಚಿಸಿದ ಅಭ್ಯರ್ಥಿಗೆ ಪರೀಕ್ಷೆಯಲ್ಲಿ ನಕಲು (ಕಾಪಿ) ಮಾಡಲು ಅವಕಾಶ

ಕೊಟ್ಟರೆ ಇಂತಿಷ್ಟು (1-2 ಲಕ್ಷ ರೂ.) ಹಣ ಕೊಡುತ್ತೇವೆ  ಎಂದು ಆಮಿಷವೊಡ್ಡುತ್ತಿದ್ದರು. ಇದಕ್ಕೆ ಕೆಲವರು ಸಹಕಾರ ನೀಡುತ್ತಿದ್ದರು. ಅಂತಹ ಪ್ರತಿಭಾವಂತರು ಬರೆಯುವ  ಕೊಠಡಿಯಲ್ಲೇ ಹಣಕ್ಕೆ ಡೀಲ್‌ ಆದ ಅಭ್ಯರ್ಥಿಗಳಿಗೂ ಅವಕಾಶ ನೀಡಿ, ಉತ್ತರ ಕಾಪಿ ಮಾಡಿಸಲಾಗುತ್ತಿತ್ತು.

Advertisement

ಇದಕ್ಕೆ ತಕ್ಕಂತೆ “ಸೀರಿಯಲ್‌ ಸೆಟ್ಟಿಂಗ್‌’ ಅನ್ನು ಡಿವೈಎಸ್ಪಿ ಮಾಡುತ್ತಿದ್ದರು. ಈ ಮೂಲಕ ನಕಲು ಮಾಡಿ ಅಭ್ಯರ್ಥಿಗಳನ್ನು ಪಾಸ್‌ ಮಾಡಿಸುತ್ತಿದ್ದರು. ಜತೆಗೆ ಪರೀಕ್ಷೆ ಕೊಠಡಿಯ ಮೇಲ್ವಿಚಾರಕರಿಗೂ  ಹಣ ನೀಡಿ ನಕಲು ಮಾಡುವಾಗ ಮೌನವಾಗಿರುವಂತೆ ಸೂಚಿಸುತ್ತಿದ್ದರು ಎನ್ನಲಾಗಿದೆ.

ಪಿಎಸ್‌ಐ, ಡಿವೈಎಸ್ಪಿ ಖಾತೆಗೆ ಲಕ್ಷ ಲಕ್ಷ ರೂ.!
ಉತ್ತರ ಕರ್ನಾಟಕದ  ಠಾಣೆಯ ಎಸ್‌ಐ ಒಬ್ಬರು, ಪರೀಕ್ಷೆ ಪಾಸ್‌ ಮಾಡಿಸುವಂತೆ ತನ್ನಲ್ಲಿಗೆ ಬರುವ ಅಭ್ಯರ್ಥಿಗಳಿಂದ 40-50 ಲಕ್ಷ ರೂ.ಗೆ ಬೇಡಿಕೆ ಇರಿಸಿ, ಮುಂಗಡವಾಗಿ 20 ಲಕ್ಷ ರೂ. ಪಡೆದುಕೊಳ್ಳುತ್ತಿದ್ದರು. ಅನಂತರ ಪ್ರತಿಭಾವಂತ ಅಭ್ಯರ್ಥಿಗಳಿಗೆ 2 ಲಕ್ಷ ರೂ. ನೀಡಿ, ಪರೀಕ್ಷೆಯಲ್ಲಿ ನಕಲು ಮಾಡಿಸುತ್ತಿದ್ದರು.  ಕೀ ಉತ್ತರ ಬಿಡುಗಡೆಯಾಗಿ ಗರಿಷ್ಠ ಅಂಕ ಬರುತ್ತಿದ್ದಂತೆ ಅಭ್ಯರ್ಥಿಗಳಿಂದ ಬಾಕಿ ಹಣ ವಸೂಲು ಮಾಡುತ್ತಿದ್ದರು. ಈ ಹಿಂದೆ ಎರಡು ಬಾರಿ ನಡೆದ ಪಿಎಸ್‌ಐ ನೇಮಕಾತಿಯಲ್ಲೂ ಇದೇ ರೀತಿಯ ಅಕ್ರಮವನ್ನು ಇವರಿಬ್ಬರು ನಡೆಸಿದ್ದಾರೆ ಎನ್ನಲಾಗಿದೆ.

ಈ ಬಾರಿ ಇಬ್ಬರು ಆಯ್ಕೆ?
ಡಿವೈಎಸ್ಪಿ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಈ ಬಾರಿ ಸೀರಿಯಲ್‌ ಸೆಟ್ಟಿಂಗ್‌ ಮೂಲಕ ಇಬ್ಬರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಪ್ರಿಯಾಂಕ್‌ ಖರ್ಗೆ, ಆಪ್ತ ಸಹಾಯಕನಿಗೆ ನೋಟಿಸ್‌
ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆಗೆ ಸಿಐಡಿ ಪೊಲೀಸರು ಮೂರನೇ ಬಾರಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಹಿಂದಿನ ಎರಡು  ನೋಟಿಸ್‌ಗಳಿಗೆ ನೀವು ನೀಡಿದ್ದ ಲಿಖಿತ ರೂಪದ ಉತ್ತರ  ಸಮಂಜಸವಾಗಿರಲಿಲ್ಲ. ಹೀಗಾಗಿ ಕಲಬುರಗಿಯಲ್ಲಿ  ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್ಪಿಂಗ್‌ ಮತ್ತು  ಇತರ ಸಾಕ್ಷ್ಯಗಳನ್ನು ನೀಡಲು ತಿಳಿಸಲಾಗಿದೆ. ಜತೆಗೆ ಅವರ ಆಪ್ತ ಸಹಾಯಕರೊಬ್ಬರಿಗೂ  ನೋಟಿಸ್‌ ನೀಡಲಾಗಿದೆ.

- ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next