Advertisement

ಪಿಎಸ್‌ಐ ಅಕ್ರಮ ಪ್ರಕರಣ: ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ಗೆ

01:07 AM May 07, 2022 | Team Udayavani |

ಕಲಬುರಗಿ: ರಾಜ್ಯದಲ್ಲಿ ಭಾರಿ ಸದ್ದು ಮಾಡಿರುವ ಪಿಎಸ್‌ಐ ಅಕ್ರಮ ಪ್ರಕರಣದ ತ್ವರಿತ ನ್ಯಾಯ ವಿಲೇವಾರಿಗೆ ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ಗೆ ವಹಿಸಲು ಶೀಘ್ರವೇ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಪ್ರಕರಣವನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಸಿಐಡಿ ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕಿಲ್ಲ. ಯಾರನ್ನೂ ಶಿಕ್ಷೆಯಿಂದ ತಪ್ಪಿಸುವ ಹರಕತ್ತು ಸರಕಾರಕ್ಕಿಲ್ಲ. ಆದರೂ ವಿರೋಧ ಪಕ್ಷಗಳು ಆರೋಪ ಮಾಡುವುದು ಸರಿಯಲ್ಲ ಎಂದರು.

ಗೂಂಡಾ ಕಾಯ್ದೆ?
ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಹಲವು ಕಾಯ್ದೆಗಳ ತಿದ್ದುಪಡಿ ಮಾಡಲು ಉನ್ನತ ಅಧಿಕಾರಿಗಳ ತಂಡದ ಜತೆ ಸಮಾಲೋಚನೆ ನಡೆದಿದೆ. ಗೂಂಡಾ ಕಾಯ್ದೆ ಅಡಿಯಲ್ಲೂ ಶಿಕ್ಷೆ ಪ್ರಮಾಣ ನಿಗದಿಗೆ ಮುಂದಾಲೋಚನೆ ನಡೆದಿದೆ ಎಂದು ತಿಳಿಸಿದರು.

ಸರಕಾರ ಬಿದ್ದರೂ ಪರವಾಗಿಲ್ಲ
ರಾಜ್ಯ ಸರಕಾರ ಬಿದ್ದು ಹೋದರೂ ಪರವಾಗಿಲ್ಲ. ನಮ್ಮ ಸರಕಾರದಲ್ಲಿ ಪಿಎಸ್‌ಐ ಅಕ್ರಮದ ಕಿಂಗ್‌ಪಿನ್‌ ಯಾರು ಅಂತಾ ಬಯಲು ಮಾಡಿ ಎಂದು ಮೊದಲು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ ಆರಗ, ಬರೀ ಹಿಟ್‌ ಆ್ಯಂಡ್‌ ರನ್‌ ಮಾಡಬಾರದು. ಕಿಂಗ್‌ಪಿನ್‌ ಯಾರು ಎಂದು ಹೇಳಿ. ದಾಖಲೆಗಳಿದ್ದರೆ ನಮಗೆ ಕೊಡಿ, ನಾವು ತನಿಖೆ ನಡೆಸುತ್ತೇವೆ. ಇದರಿಂದ ಸರಕಾರ ಬಿದ್ದರೂ ಪರವಾಗಿಲ್ಲ. ಯಾರೇ ಆರೋಪಿಗಳಿದ್ದರೂ ಕ್ರಮಕ್ಕೆ ಸಿದ್ಧ ಎಂದರು.

ತನಿಖೆಗೆ ಬೆನ್ನು ತೋರಿದ ಪ್ರಿಯಾಂಕ್‌!
ಮಾಜಿ ಸಚಿವರೂ ಆಗಿದ್ದ ಪ್ರಿಯಾಂಕ್‌ ಖರ್ಗೆ ತನಿಖೆಗೆ ಬೆನ್ನು ತೋರಿಸಿ ಓಡಿದ್ದಾರೆ. ಅವರ ಇಬ್ಬರು ಆಪ್ತರೇ ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್‌. ಅವರನ್ನು ತಮ್ಮ ಪಕ್ಷದಲ್ಲಿಯೇ ಇಟ್ಟುಕೊಂಡು ನಮ್ಮ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ನಿಮ್ಮ ಬಳಿಯಲ್ಲಿ ಅಕ್ರಮ ಸಾಬೀತು ಮಾಡುವ ದಾಖಲೆಗಳು ಇದ್ದರೆ ಸರಕಾರಕ್ಕೆ ಕೊಡಿ. ಅದರಂತೆಯೇ ತನಿಖೆ ಮಾಡಿಸೋಣ. ಅದರೊಂದಿಗೆ ತನಿಖೆಗೆ ಸಹಕಾರ ಕೊಡಿ. ಆದು ಬಿಟ್ಟು ಸುಖಾ ಸುಮ್ಮನೆ ಬಿಜೆಪಿ ವಿರುದ್ಧ, ಸರಕಾರದ ವಿರುದ್ಧ ಆರೋಪ ಮಾಡಿ ಕಾಲಹರಣ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next