ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಅಫಜಲಪುರ ಶಾಸಕ ಎಂ.ವೈ.ಪಾಟೀಲ ಅವರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಹಾಗೂ ಸಿಎಆರ್ ಪೊಲೀಸ್ ಕಾನ್ ಸ್ಟೇಬಲ್ ರುದ್ರಗೌಡ ಪಾಟೀಲ ಎಂಬುವವರನ್ನು ಗುರುವಾರ ಬಂಧಿಸಿದ್ದಾರೆ.
ಇದರೊಂದಿಗೆ ಬಂಧಿತರ ಸಂಖ್ಯೆ ಒಂಬತ್ತಕ್ಕೆ ಏರಿದೆ. ಈಗಾಗಲೇ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮೂವರು ಪರೀಕ್ಷಾ ಮೇಲ್ವಿಚಾರಕಿಯರು, ಮೂವರು ಅಭ್ಯರ್ಥಿಗಳು ಹಾಗೂ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿಯನ್ನು ಬಂಧಿಸಿದ್ದಾರೆ.
ಶಾಸಕರೊಂದಿಗೆ ಕಾರಿನಲ್ಲಿ ನಗರದ ರಾಮಮಂದಿರ ಬಳಿ ಹೊರಟಿದ್ದಾಗ ಸಿಐಡಿ ಪೊಲೀಸರು ಗನ್ ಮ್ಯಾನ್ ಹಯ್ಯಾಳಿಯನ್ನು ವಶಕ್ಕೆ ಪಡೆದರು.
ಇದನ್ನೂ ಓದಿ:ಕಿಡ್ನಾಪ್ ಆಗಿದ್ದ ಬೇಕರಿ ಮಾಲೀಕಗೆ ರಕ್ಷಣೆ ಒದಗಿಸಲು ಆಗ್ರಹಿಸಿ ಮನವಿ
ಬಂಧಿತ ಗನ್ ಮ್ಯಾನ್ ಹಯ್ಯಾಳಿ (ಅಯ್ಯಣ್ಣ) ದೇಸಾಯಿ ಪಿಎಸ್ಐ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಥಮ ಸ್ಥಾನದಿಂದ ಆಯ್ಕೆಯಾಗಿದ್ದ ಎಂದು ತಿಳಿದು ಬಂದಿದೆ.
ರಕ್ಷಿಸುವ ಪ್ರಶ್ನೆಯಿಲ್ಲ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಸಿಐಡಿ ಪೊಲೀಸರು ಇಂದು ಕಾಂಗ್ರೆಸ್ ಶಾಸಕ ರೊಬ್ಬರ, ಗನ್ ಮ್ಯಾನ್ ಒಬ್ಬರನ್ನು ಬಂಧಿಸಿದ್ದಾರೆ. ಸಿಐಡಿ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದು, ಅಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ತಪ್ಪಿತಸ್ಥರನ್ನು ಬಂಧಿಸಿ, ಕಾನೂನಿನ ಕ್ರಮಕ್ಕೆ ಒಳಪಡಿಸಲಾಗುವುದು ಎಂದಿದ್ದಾರೆ.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ, ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ, ನ್ಯಾಯ ಒದಗಿಸಲು, ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ತನಿಖೆಯು ನಿಷ್ಪಕ್ಷಪಾತವಾಗಿ, ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದವರು, ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ ಎಂದು ಹೇಳಿದ್ದಾರೆ.