Advertisement

ಪಿಎಸ್ಐ ಪರೀಕ್ಷೆ ಅಕ್ರಮ: ಕೊನೆಗೂ ಸಿಐಡಿ ಬಲೆಗೆ ಬಿದ್ದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ

12:13 AM Apr 30, 2022 | Team Udayavani |

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಕೊನೆಗೂ ಬಂಧಿಸಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಹಾಗರಗಿಯನ್ನು ಸಿಐಡಿ ತಂಡ ಬಂಧಿಸಿದೆ.

Advertisement

ದಿವ್ಯಾ ಹಾಗರಗಿ ಒಡೆತನಕ್ಕೆ ಸೇರಿದ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಮೂಲಕ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ಕಳೆದ ಏ. 9 ರಂದು ಎಫ್ ಐಆರ್ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ದಿವ್ಯಾಳನ್ನು ಕೊನೆಗೂ ಬಂಧಿಸಲಾಗಿದೆ.

ಕಳೆದ ಎರಡುವರೆ ವಾರಗಳಿಂದ ನಾಪತ್ತೆಯಾಗಿದ್ದ ದಿವ್ಯಾ ಬಂಧನ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.‌ ಸಿಐಡಿ ಡಿಜಿಪಿ ಪಿ.ಎಸ್.‌ಸಂಧು ಕಲಬುರಗಿಗೆ ಆಗಮಿಸಿ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು.  ಪುಣೆಯ ಹೊಟೇಲೊಂದರದಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಸಿಐಡಿ ತಂಡ ದಾಳಿ ನಡೆಸಿ ಬಂಧಿಸಿದೆ.

ದಿವ್ಯಾಗೆ ಆಶ್ರಯ ನೀಡಿದ್ದ ಸೊಲ್ಲಾಪುರ ಉದ್ಯಮಿ ಸುರೇಶ ಹಾಗೂ ಜ್ಞಾನಜ್ಯೋತಿ ಶಾಲೆಯ ಮುಖ್ಯೋಧ್ಯಾಪಕ ಕಾಶೀನಾಥ್,  ಮೇಲ್ವಿಚಾರಕರಾದ ಅರ್ಚನಾ, ಸುನಂದಾ ಹಾಗೂ ಅಕ್ರಮವಾಗಿ ಪರೀಕ್ಷೆ ಬರೆದ ಶಾಂತಾಬಾಯಿಯನ್ನು ಸೇರಿ ಆರು ಜನರನ್ನು ಬಂಧಿಸಲಾಗಿದೆ. ಗುರುವಾರದವರೆಗೂ 17 ಆರೋಪಿಗಳನ್ನು ಬಂಧಿಸಲಾಗಿತ್ತು ಈಗ ಆರು ಆರೋಪಿಗಳನ್ಬು ಬಂಧಿಸುವುದರ ಮೂಲಕ ಸಂಖ್ಯೆ 23ಕ್ಕೆ ಏರಿದಂತಾಗಿದೆ.

ಇದನ್ನೂ ಓದಿ:ವಿಧಾನಸಭೆ ಚುನಾವಣೆ: ಅಲ್ಲಿನವರು ಇಲ್ಲಿಗೆ, ಇಲ್ಲಿನವರು ಅಲ್ಲಿಗೆ…

Advertisement

ದಿವ್ಯಾ ಹಾಗರಗಿ ಬಂಧನ ವಿಳಂಬ ರಾಜಕೀಯವಾಗಿಯೂ ದೊಡ್ಡ ಚರ್ಚೆಯಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಷಾನೇಂದ್ರ ಪ್ರಕರಣದಲ್ಲಿ ಯಾರು ಎಷ್ಟೇ ದೊಡ್ಡವರಿರಲಿ ರಕ್ಣಿಸುವ ಪ್ರಶ್ನೆಯೇ ಇಲ್ಲ ಎಂದು ಪದೇ- ಪದೇ ಹೇಳಿದ್ದರೂ ಜತೆಗೆ ದಿವ್ಯಾ ಹಾಗರಗಿ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಹೇಳಿದ್ದರೂ ಬಂಧನವಾಗಿರಲಿಲ್ಲ.‌ ಬಿಜೆಪಿ ನಾಯಕರು ಹಾಗೂ ಸಚಿವರು, ಶಾಸಕರು ಬಂಧನವಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಕೊನೆಗೂ ಈಗ ಬಂಧನವಾಗಿರುವುದರಿಂದ ಈಗ ಪ್ರಕರಣದಲ್ಲಿ ಯಾರ್ಯಾರ ಹೆಸರು ಹೊರ ಬರುತ್ತದೆ ಎಂಬುದೇ ಕುತೂಹಲಕಾರಿಯಾಗಿದೆ.

11 ದಿನಗಳ ಕಾಲ ಸಿಐಡಿ ಕಸ್ಟಡಿಗೆ
ದಿವ್ಯಾ ಹಾಗರಗಿ, ಸುರೇಶ ಕಾಟಗಾಂವ್‌, ಕಾಳಿದಾಸ, ಜ್ಞಾನಜ್ಯೋತಿ ಶಾಲೆ ಮೇಲ್ವಿಚಾರಕ ರಾದ ಅರ್ಚನಾ, ಸುನೀತಾ ಹಾಗೂ ಚಾಲಕ ಸದ್ದಾಂ ಹಾಗೂ ನಗರಸಭೆ ಎಫ್ಡಿಸಿ ಜ್ಯೋತಿ ಪಾಟೀಲ ಸೇರಿದಂತೆ 7 ಮಂದಿಗೆ ಮೂರನೇ ಜೆಂಎಫ್ಸಿ ನ್ಯಾಯಾಲಯ 11 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ.

ಏನೇನಾಯ್ತು?
ಜ.19 ನೇಮಕಾತಿಯ ತಾತ್ಕಾಲಿಕ ಪಟ್ಟಿ ಪ್ರಕಟ
ಎ. 7 ಸಿಐಡಿ ತನಿಖೆಗೆ ಆದೇಶ
ಎ. 9 ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿ ಚೌಕ್‌ ಠಾಣೆಯಲ್ಲಿ ಎಫ್ಐಆರ್‌.
ಎ.9 ಪರೀಕ್ಷೆ ಅಭ್ಯರ್ಥಿ ವೀರೇಶನ ಬಂಧನ
ಎ.11 ಆರೋಪಿ ದಿವ್ಯಾ ಹಾಗರಗಿ ನಾಪತ್ತೆ
ಎ.17 ದಿವ್ಯಾ ಮನೆ ಮೇಲೆ ಸಿಐಡಿ ದಾಳಿ, ಪತಿ ರಾಜೇಶ ಹಾಗರಗಿ ಸೇರಿ 8 ಜನರ ಸೆರೆ.
ಎ.20 ಅಫ‌ಜಲಪುರ ಶಾಸಕ ಎಂ.ವೈ. ಪಾಟೀಲ್‌ ಗನ್‌ಮ್ಯಾನ್‌ ಬಂಧನ
ಎ.22 ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಾಂತೇಶ ಪಾಟೀಲ್‌ ಬಂಧನ
ಎ.23 ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ್‌ ಸೆರೆ
ಎ.26 ನ್ಯಾಯಾಲಯದಿಂದ ಬಂಧನ ವಾರಂಟ್‌
ಎ.27 ಆರ್‌ಟಿಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ವಿಚಾರಣೆ
ಎ.28 ಶಹಾಬಾದ ನಗರಸಭೆ ಎಫ್ಡಿಸಿ ಜ್ಯೋತಿ ಪಾಟೀಲ್‌ ಬಂಧನ
ಎ.29 ದಿವ್ಯಾ ಹಾಗರಗಿ ಬಂಧನ

18 ದಿನ ಇದ್ದದ್ದು ಎಲ್ಲಿ?
ದಿವ್ಯಾ ಹಾಗರಗಿ ಹಾಗೂ ಸಂಗಡಿಗರು ಅಕ್ರಮ ಪ್ರಕರಣ ಬಯಲಾಗುತ್ತಿದ್ದಂತೆ ಜಿಲ್ಲೆಯ ಅಫ‌ಜಲಪುರ ತಾಲೂಕಿನ ಮುಖಾಂತರ ಸೊಲ್ಲಾಪುರಕ್ಕೆ ಹೋಗಿದ್ದರು. ಅಲ್ಲಿಂದ ರಾಜಸ್ಥಾನ, ಗುಜರಾತ್‌ಗೆ ತೆರಳಿ ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದರು. ಅಲ್ಲದೇ ಅಲ್ಲಲ್ಲಿ ವಾಸ್ತವ್ಯ ಮಾಡುತ್ತ ಪೊಲೀಸರ ಕಣ್ತಪ್ಪಿಸಿದ್ದರು. ಸುರಕ್ಷಿತ ಜಾಗ ಅರಸಿ ಪುಣೆಗೆ ಬಂದಾಗ ಉದ್ಯಮಿ ಸುರೇಶ ಕಾಟಗಾಂವ್‌ ಆಶ್ರಯ ಕಲ್ಪಿಸಿದ್ದರು. ದಿವ್ಯಾಗೆ ಉದ್ಯಮಿ ಸುರೇಶ ಕಾಟೆಗಾಂವ್‌ ಮೊದಲು ಅಷ್ಟೊಂದು ಪರಿಚಯವಿರಲಿಲ್ಲ. ಹೀಗಾಗಿ ದಿವ್ಯಾಗೆ ಆಶ್ರಯ ನೀಡಲು ಸುರೇಶ್‌ಗೆ ಹೇಳಿದ್ದು ಯಾರು ಎಂಬುದು ತಿಳಿಯಬೇಕಿದೆ.

ಎಂಜಿನಿಯರ್‌ ಇನ್ನೂ ನಾಪತ್ತೆ
ಪಿಎಸ್‌ಐ ಅಲ್ಲದೇ ಲೋಕೋಪಯೋಗಿ, ಎಫ್ಡಿಸಿ ಮತ್ತಿತರ ಪರೀಕ್ಷೆಗಳಲ್ಲೂ ಅಕ್ರಮ ಎಸಗಿರುವ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ಹಾಗೂ ಜ್ಞಾನಜ್ಯೋತಿ ಶಾಲೆ ಪ್ರಾಚಾರ್ಯ ಕಾಶೀನಾಥ ಇನ್ನೂ ಪತ್ತೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next