ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಮತ್ತೋರ್ವ ಕಿಂಗ್ ಪಿನ್, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ ಮೇಳಕುಂದಿ ಸಿಐಡಿ ಅಧಿಕಾರಿಗಳ ಎದುರು ರವಿವಾರ ಶರಣಾಗಿದ್ದಾನೆ.
ಪ್ರಕರಣದಲ್ಲಿ ಕಳೆದ 21 ದಿನದಿಂದ ನಾಪತ್ತೆಯಾಗಿದ್ದ ಇಂಜಿನಿಯರ್ ಮಂಜುನಾಥ್ ಇಂದು ಸಿಐಡಿ ಕಛೇರಿಗೆ ಆಟೋದಲ್ಲಿ ಆಗಮಿಸಿ ಶರಣಾಗಿದ್ದು, ಪ್ರಕರಣಕ್ಕೆ ಸಂಬಂಧಿದಂತೆ ಈತನಿಂದ ಮಹತ್ವದ ಮಾಹಿತಿ ದೊರಕಲಿದೆ.
‘’ನನಗೆ ಆರೋಗ್ಯ ಸರಿಯಿರಲಿಲ್ಲ. ಹಾಗಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ’’ ಎಂಬುದಾಗಿ ಮಂಜುನಾಥ ಹೇಳಿಕೆ ನೀಡಿದ್ದಾನೆ. ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಆಗಿರುವ ಈತ ಬ್ಲೂಟೂತ್ ಬಳಸಿ ಅಕ್ರಮ ಎಸಗಲಾಗಿರುವ ಆರೋಪ ಎದುರಿಸುತ್ತಿದ್ದಾನೆ. ಈತನ ಮನೆ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದಾಗ ಪಿಎಸ್ಐ ನೇಮಕಾತಿಯ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯ ಪ್ರವೇಶ ಪತ್ರ ಹಾಗೂ ಕೆಲ ಒಎಂಆರ್ ಶೀಟ್ ಗಳು ಪತ್ತೆಯಾಗಿದ್ದವು.
ಇದನ್ನೂ ಓದಿ:ಬಗೆದಷ್ಟು ಆಳಕ್ಕೆ ಹೋಗುತ್ತಿದೆ ದಿವ್ಯಾ ಹಾಗರಗಿ ‘ಕಾಂಗ್ರೆಸ್’ ನಂಟು!
ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶೀನಾಥ್ ಇನ್ನೂ ಪತ್ತೆಯಾಗಿಲ್ಲ. ಈತನ ಬಂಧನಕ್ಕೆ ಸಿಐಡಿ ತನಿಖಾ ತಂಡ ಜಾಲ ಬೀಸಿದೆ.