ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆ ಮುಂದುವರೆಸಿರುವ ಸಿಐಡಿ ಪೊಲೀಸರು ಅಫಜಲಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ್ ಸೊನ್ನ ಎಂಬುವರನ್ನು ಬಂಧಿಸಲಾಗಿದೆ.
ನಿನ್ನೆಯಷ್ಟೇ ಅಫಜಲಪುರ ಶಾಸಕ ಗನ್ ಮ್ಯಾನ್ ಬಂಧಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಇಬ್ಬರನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 13ಕ್ಕೇರಿದೆ.
ಅಫಜಲಪುರದಲ್ಲಿ ಮಹಾಂತೇಶ್ ಪಾಟೀಲ್ ಬಂಧಿಸಿ ಸಿಐಡಿ ಅಧಿಕಾರಿಗಳು ನಗರಕ್ಕೆ ಕರೆ ತಂದು ವಿಚಾರಣೆ ಕೈಗೊಂಡಿದ್ದಾರೆ. ಬಂಧನಕ್ಕೆ ಸಹಕರಿಸಿದ ಮಹಾಂತೇಶ್ ಪಾಟೀಲ್ ಕುತ್ತಿಗೆ ಪಟ್ಟಿ ಹಿಡಿದು ಸಿಐಡ ಅಧಿಕಾರಿಗಳು ಎಳೆದುಕೊಂಡ ಹೋದ ಪ್ರಸಂಗ ನಡೆಯಿತು.
ಬಂಧನದ ವೇಳೆ ಹೈಡ್ರಾಮಾ: ಸಿಐಡಿ ಅಧಿಕಾರಿಗಳ ಬಂಧನಕ್ಕೆ ಮಹಾಂತೇಶ್ ಪಾಟೀಲ್ ಬೆಂಬಲಿಗರು ಅಡ್ಡಿಪಡಿಸಿದ ಪ್ರಸಂಗವೂ ನಡೆದಿದೆ. ಏ. 23 ರಂದು ಅಫಜಲಪುರದಲ್ಲಿ ಮಹಾಂತೇಶ ಪಾಟೀಲ್ ಹಾಗೂ ಸಹೋದರ ಆರ್. ಡಿ.ಪಾಟೀಲ 101 ಉಚಿತ ವಿವಾಹ ಮಹೋತ್ಸವ ಆಯೋಜಿಸಿದ್ದರು. ಅದರ ಸಿದ್ದತೆಯನ್ನು ಅವಲೋಕಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಅವಾಜ್ ಹಾಕಿದ ಸಹೋದರ: ಮಹಾಂತೇಶನನ್ನು ಬಂಧಿಸಿ ಕರೆ ತರುವ ವೇಳೆ ಮಹಾಂತೇಶನ ಸಹೋದರ ಆರ್.ಡಿ ಪಾಟೀಲ್ ಸಿಐಡಿ ಅಧಿಕಾರಿಗಳಿಗೆ ಅವಾಜ್ ಹಾಕಿದ್ದಾನೆ ಎನ್ನಲಾಗಿದೆ. ಅಜ್ಞಾತ ಸ್ಥಳದಿಂದ ಆರ್.ಡಿ ಪಾಟೀಲ್ ಅವಾಜ್ ಹಾಕಿದ್ದಾನೆ. “ನನ್ನ ಸಹೋದರನನ್ನ ಯಾಕೆ ಬಂಧಿಸಿದ್ದಿರಿ ನಿನ್ನನ್ನು ನೋಡಿಕೊಳ್ಳತ್ತೆನೆ” ಎಂದು ಆರ್.ಡಿ ಪಾಟೀಲ್ ಅವಾಜ್ ಹಾಕಿದ್ದಾನೆ.
ಇದನ್ನೂ ಓದಿ:ಭಯೋತ್ಪಾದಕರು ಬಾಲ ಬಿಚ್ಚಿದರೆ ಬುಲ್ಡೋಜರ್ ಹರಿಸಲಾಗುತ್ತದೆ: ಸಿ.ಟಿ.ರವಿ
ಖರ್ಗೆ ಆಪ್ತ: ಬಂಧಿತ ಮಹಾಂತೇಶ ಪಾಟೀಲ್ ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಆಪ್ತನಾಗಿದ್ದು, ಈ ಬಂಧನ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿದೆ.
ದಿವ್ಯಾ ಬಂಧನದ ಬಗ್ಗೆ ಸಿಎಂ ಪುನರುಚ್ಚಾರ: ಪರೀಕ್ಷೆ ಅಕ್ರಮ ತನಿಖೆಗೆ ವಹಿಸಿದ್ದೇ ಸರ್ಕಾರ. ಹೀಗಾಗಿ ಯಾರನ್ನೂ ರಕ್ಷಿಸುವ ಅವಶ್ಯಕತೆ ಇಲ್ಲ. ಕಳೆದ ವಾರದಿಂದ ನಾಪತ್ತೆಯಾಗಿರುವ ದಿವ್ಯಾ ಹಾಗರಗಿಯನ್ನು ಖಂಡಿತ ಪೊಲೀಸರು ಬಂಧಿಸುತ್ತಾರೆ. ಇದರಲ್ಲಿ ಅನುಮಾನವೇ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ.
ದಿವ್ಯ ಹಾಗರಗಿಯನ್ನು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಹಾಗೂ ಸಮಿತಿಯ ಸದಸ್ಯ ಸ್ಥಾನದಿಂದ ಪದಚ್ಯುತಗೊಳಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.