Advertisement

ಪಿಎಸ್‌ಐ ಪರೀಕ್ಷೆ ನೇಮಕಾತಿ ಅಕ್ರಮ: ತಂದೆ-ಮಗ ಸೇರಿ ಮೂವರ ಬಂಧನ

12:39 AM May 04, 2022 | Team Udayavani |

ಕಲಬುರಗಿ: ಪಿಎಸ್‌ಐ ಪರೀಕ್ಷೆಯ ಅಕ್ರಮ ಪ್ರಕರಣದಲ್ಲಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಜತೆಗೆ ಈಗ ಮತ್ತೂಂದು ಶಾಲೆಯ ಪರೀಕ್ಷಾ ಕೇಂದ್ರದ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದ್ದು, ತಂದೆ-ಮಗ ಸಹಿತ ಮೂವರನ್ನು ಬಂಧಿಸಲಾಗಿದೆ.

Advertisement

ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂಎಸ್‌ಐ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಸಂಬಂಧ ಅಭ್ಯರ್ಥಿ ಪ್ರಭು ಹಾಗೂ ಈತನ ತಂದೆ ಶರಣಪ್ಪ ಹಾಗೂ ಸಹಾಯ ಮಾಡಿದ ಲೆಕ್ಕ ಪರಿಶೋಧಕ ಚಂದ್ರಕಾಂತ ಕುಲಕರ್ಣಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಕಟ್ಟಡ ನಿರ್ಮಾಣ ಸಾಮಗ್ರಿ ಸರಬರಾಜು ಕೆಲಸ ಮಾಡುತ್ತಿದ್ದ ಶರಣಪ್ಪ, ಕೆಲವು ವರ್ಷಗಳ ಹಿಂದೆ ಲೆಕ್ಕ ಪರಿಶೋಧಕ ಚಂದ್ರಕಾಂತ ಕುಲಕರ್ಣಿಯವರ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದ. ಅದಕ್ಕೆ ಈ ಶರಣಪ್ಪನೇ ಕಟ್ಟಡ ಸಾಮಗ್ರಿ ಪೂರೈಕೆ ಮಾಡಿದ್ದ. “ತನ್ನ ಮಗ ಡಿಗ್ರಿ ಓದಿದ್ದಾನೆ, ಆತನಿಗೆ ಯಾವುದಾದರೂ ಸರಕಾರಿ ಕೆಲಸ ಸಿಗುವಂತೆ ಮಾಡಿ’ ಎಂದು ಕುಲಕರ್ಣಿ ಬಳಿ ಮನವಿ ಮಾಡಿದ್ದರು ಎನ್ನಲಾಗಿದೆ.

ಇತ್ತ ಚಂದ್ರಕಾಂತ ಕುಲಕರ್ಣಿಗೆ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ ಪರಿಚಯವಿದ್ದ ಕಾರಣ ಅವರಿಗೆ ಹೇಳಿ ಡೀಲ್‌ ಮಾಡಿಸಿದ್ದ. ಪರೀಕ್ಷೆಗೂ ಮೊದಲೇ ಮೂವತ್ತು ಲಕ್ಷ ರೂ. ನೀಡಿದ್ದ ಶರಣಪ್ಪ, ತದನಂತರ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಬಂದ ಅನಂತರ ಉಳಿದ ಇಪ್ಪತ್ತು ಲಕ್ಷ ರೂ. ನೀಡಿದ್ದ. ಇದೀಗ ಅಕ್ರಮದಲ್ಲಿ ಭಾಗಿಯಾಗಿ ಕಂಬಿ ಎಣಿಸುವಂತಾಗಿದೆ.

ಪರೀಕ್ಷೆ ಮೊದಲೇ ಡಿವೈಸ್‌: ಪರೀಕ್ಷೆಗೆ ಮೊದಲೇ ಡಿವೈಸ್‌ ಅನ್ನು ಪರೀûಾ ಕೇಂದ್ರದಲ್ಲಿ ಅಭ್ಯರ್ಥಿ ಪ್ರಭು ಇಟ್ಟಿದ್ದನು. ಪರೀಕ್ಷೆ ದಿನ ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗಿ ಅಕ್ರಮ ಎಸಗುವ ಮೂಲಕ ಪೊಲೀಸರು ಮತ್ತು ಪರೀಕ್ಷಾ ಸಿಬಂದಿಗೆ ಯಾಮಾರಿಸಿದ್ದನು.

Advertisement

ಪೊಲೀಸರು ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ಅಭ್ಯರ್ಥಿ ಪ್ರಭು, ಹೇಗೆ ಅಕ್ರಮವಾಗಿ ಪರೀಕ್ಷೆ ಬರೆದಿದ್ದೇನೆ ಎನ್ನುವುದನ್ನು ತೋರಿಸಿದ್ದಾನೆ. ಪರೀಕ್ಷಾ ದಿನ ಪೊಲೀಸರು ಮೆಟೆಲ್‌ ಡಿಟೆಕ್ಟರ್‌ ಇಟ್ಟಿದ್ದ ಕಾರಣ ಒಂದು ದಿನ ಮೊದಲೇ ಎಲೆಕ್ಟ್ರಾನಿಕ್‌ ಡಿವೈಸ್‌ ಅನ್ನು ತಂದು ಹೂವಿನ ಕುಂಡದಲ್ಲಿ ಇಟ್ಟಿದ್ದೆ. ಇನ್ನು ಪರೀಕ್ಷಾ ದಿನ ಎಲ್ಲರಿಗಿಂತ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬಂದು ಬಚ್ಚಿಟ್ಟಿದ್ದ ಡಿವೈಸ್‌ ಅನ್ನು ಯಾರಿಗೂ ಅನುಮಾನ ಬಾರದಂತೆ ಟಾಯ್ಲೆಟ್‌ ಬಳಿ ಹೋಗಿ ಬನಿಯನ್‌ನೊಳಗೆ ಇಟ್ಟುಕೊಂಡು ಅನಂತರ ಅಕ್ರಮವಾಗಿ ಪರೀಕ್ಷೆ ಬರೆದಿರುವ ಬಗ್ಗೆ ಪ್ರಭು ಪೊಲೀಸರಿಗೆ ತಿಳಿಸಿದ್ದಾನೆ.

ಎರಡೆರಡು ಸಿಮ್‌ ಬಳಕೆ
ಅಕ್ರಮವಾಗಿ ಪರೀಕ್ಷೆ ಬರೆಯಲು ಕಿಲಾಡಿಗಳು ಒಂದೊಂದು ಡಿವೈಸ್‌ನಲ್ಲಿ ಎರಡು ಸಿಮ್‌ ಹಾಕಿದ್ದರು. ನೆಟ್‌ವರ್ಕ್‌ ಸಮಸ್ಯೆಯಿಂದ ಒಂದು ಸಿಮ್‌ವರ್ಕ್‌ ಆಗದೇ ಇದ್ದಲ್ಲಿ, ಮತ್ತೂಂದು ಸಿಮ್‌ ಬಳಕೆ ಮಾಡುತ್ತಿದ್ದರು. ಬೇರೆ ಬೇರೆ ಕಂಪನಿಯ ಎರಡು ಸಿಮ್‌ ಬಳಸಿದ್ದರು. ಒಟ್ಟಾರೆ ಪಿಎಸ್‌ಐ ಅಕ್ರಮ ಹಗರಣ ಬಗೆದಷ್ಟು ಅಕ್ರಮಗಳು ಬಯಲಿಗೆ ಬರುತ್ತಿವೆ.

ಪಿಎಸ್‌ಐ ನೇಮಕಾತಿ ಅಕ್ರಮ: ನಿವೃತ್ತ ಡಿವೈಎಸ್ಪಿ  ಸಿಐಡಿ ವಶಕ್ಕೆ?
ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ 10 ಮಂದಿ ಆರೋಪಿಗಳ ಪೈಕಿ ನಾಲ್ವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ವಿಚಾರಣೆಗೆ ಬಂದಿದ್ದ ನಿವೃತ್ತ ಡಿವೈಎಸ್ಪಿಯೊಬ್ಬರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪ್ರಕರಣದ 11ನೇ ಆರೋಪಿ ಯಶವಂತಗೌಡ ಸೇರಿ ನಾಲ್ವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದರು. ಇನ್ನು ಉತ್ತರ ಕರ್ನಾಟಕದ ಭಾಗದ ಡಿವೈಎಸ್ಪಿಯಾಗಿ ನಾಲ್ಕು ದಿನಗಳ ಹಿಂದಷ್ಟೇ ನಿವೃತ್ತಿ ಹೊಂದಿರುವ ಡಿವೈಎಸ್ಪಿಯೊಬ್ಬರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದ್ದರು.

ಪೊಲೀಸ್‌ ಆಯಕ್ತರ ಕಚೇರಿಯಲ್ಲೇ ಬಂಧನ
ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾನ್‌ಸ್ಟೆಬಲ್‌ ಗಜೇಂದ್ರನನ್ನು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿಯೇ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ತಲಘಟ್ಟಪುರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಆಗಿರುವ ಗಜೇಂದ್ರ ಇನ್‌ಸರ್ವೀಸ್‌ ಕೋಟದಲ್ಲಿ ಮೊದಲ ರ್‍ಯಾಂಕ್‌ ಪಡೆದುಕೊಂಡಿದ್ದಾನೆ. ದಕ್ಷಿಣ ವಿಭಾಗದ ಸೈಬರ್‌ ಠಾಣೆಗೆ ಹೆಚ್ಚುವರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ. ಈತ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಆರ್‌.ಡಿ.ಪಾಟೀಲ್‌ಗೆ  60 ಲಕ್ಷ ನೀಡಿದ್ದಾನೆ ಎಂದು ಹೇಳಲಾಗಿದೆ. ಕಾನ್‌ಸ್ಟೇಬಲ್‌ ಮಮತೇಶ್‌ಗೌಡಗೆ ಸ್ನೇಹಿತನೊಬ್ಬ ಸಂದೇಶ ಕಳುಹಿಸಿರುವ ವಾಟ್ಸ್‌ಆ್ಯಪ್‌ ಇಮೇಜ್‌ ವೈರಲ್‌ ಆಗಿದೆ. ಮೊಬೈಲ್‌ಗೆ ಕಳುಹಿಸಿರುವ ಸಂದೇಶಗಳ ಸತ್ಯಾಸತ್ಯತೆ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next