ಕೊಪ್ಪಳ: ಯಾದಗಿರಿ ಪಿಎಸ್‌ಐ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ನನ್ನ ತಮ್ಮನ ಸಾವಿಗೆ ಕಾರಣರಾದ ಯಾದಗಿರಿಯ ಶಾಸಕ ಹಾಗೂ ಆತನ ಪುತ್ರನನ್ನು ಮೊದಲು ಬಂಧಿಸಿ, ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ನಮ್ಮ ಮನೆಗೆ ಬರಲಿ ಎಂದು ಮೃತ ಪಿಎಸ್‌ಐ ಪರಶುರಾಮ ಅವರ ಸಹೋದರ ಹನುಮಂತಪ್ಪ ಛಲವಾದಿ ಒತ್ತಾಯ ಮಾಡಿದ್ದಾರೆ.
ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಆ.೦7 ರಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭೇಟಿ ನೀಡಲಿದ್ದಾರೆ. ಈ ವೇಳೆ ಮೃತ ಪಿಎಸ್‌ಐ ಹೆತ್ತವರಿಗೆ ಸಾಂತ್ವಾನ ಹೇಳಲಿದ್ದಾರೆ.
ಪಿಎಸ್‌ಐ ಪರಶುರಾಮ ಸಾವಿಗೆ ಯಾದಗಿರಿ ಶಾಸಕ ಹಾಗೂ ಆತನ ಪುತ್ರನೇ ಕಾರಣ. ಅವರ ವಿರುದ್ದ ನಾವು ದೂರು ಕೊಟ್ಟಿದ್ದೇವೆ. ಆದರೆ ಈವರೆಗೂ ಆ ಆರೋಪಿಗಳ ಬಂಧನವಾಗಿಲ್ಲ. ನಮ್ಮ ಮನೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಮುಖ್ಯ ಸಚೇತಕ ಛಲವಾದಿ ನಾರಾಯಣಸ್ವಾಮಿ ಸಾಂತ್ವಾನ ಹೇಳಲು ಬಂದಿದ್ದಾರೆ. ಆ.೦7ಕ್ಕೆ ನಮ್ಮ ಮನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಆಗಮಿಸುವುದಾಗಿ ಮಾಹಿತಿ ಗೊತ್ತಾಗಿದೆ. ಅವರು ಸರ್ಕಾರದ ಭಾಗವಾಗಿ ನಮ್ಮ ಮನೆಗೆ ಆಗಮಿಸುತ್ತಿದ್ದಾರೆ. ನನ್ನ ತಮ್ಮನ ಸಾವಿಗೆ ನ್ಯಾಯ ಸಿಗಬೇಕು. ಸಾವಿಗೆ ಕಾರಣರಾದವನ್ನು ಬಂಧಿಸದೆ ಸಾಂತ್ವಾನ ಹೇಳಲು ಬರುವುದು ಸರಿಯಲ್ಲ. ಮೊದಲು ಆರೋಪಿಗಳ ಬಂಧಿಸಿ ನಂತರ ನಮ್ಮ ಮನೆಗೆ ಬರಲಿ. ಗೃಹ ಸಚಿವರು ನಮ್ಮ ಮನೆಗೆ ಸಾಂತ್ವಾನ ಹೇಳಲು ಬರುತ್ತಿರುವುದಕ್ಕೆ ನಮ್ಮ ವಿರೋಧವೇನು ಇಲ್ಲ. ಸರ್ಕಾರದ ಪ್ರತಿನಿಧಿಯಾಗಿ ಅವರು ಬರುತ್ತಿದ್ದು ಆರೋಪಿಗಳನ್ನು ಐದು ದಿನಗಳಾದರೂ ಬಂಧಿಸಿಲ್ಲ ಎಂದು ಮೃತ ಪಿಎಸ್‌ಐ ಸಹೋದರ ಹನುಮಂತಪ್ಪ ಹೇಳಿದ್ದಾರೆ.
ಛಲವಾದಿ ನಾರಾಯಣ ಸ್ವಾಮಿ ಭೇಟಿ
ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪಿಎಸ್ಐ ಪರಶುರಾಮ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಇದೇ ವೇಳೆ ಪರಶುರಾಮ ಕುಟುಂಬಕ್ಕೆ ತಮ್ಮ ಒಂದು ತಿಂಗಳ ವೇತನದ ಚೆಕ್ ಹಸ್ತಾಂತರ ಮಾಡಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಯಾದಗಿರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಲಿ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದರು.
ಪಿಎಸ್ಐ ಒತ್ತಡ, ಮಾನಸಿಕ ಕಿರುಕುಳದಿಂದ ಮೃತಪಟ್ಟಿದ್ದಾರೆ. ಪರಶುರಾಮ್ ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರ ಕಾರಣ ಎಂದು ಅವರ ಪತ್ನಿ ಮತ್ತು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಲಿಖಿತ ದೂರು ಕೊಟ್ಟಿದ್ದಾರೆ. ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಉಳಿಗಾಲವಿಲ್ಲ. ಈ ಕೂಡಲೇ ತಪ್ಪಿತಸ್ಥರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.