ಮೈಸೂರು: ಕುಡುಕನೊಬ್ಬ ಅರಮನೆಗೆ ಬಾಂಬ್ ಇಡಲಾಗಿದೆ ಎಂದು ಕೂಗಿಕೊಂಡಿದ್ದರಿಂದ ಅರಮನೆ ಆವರಣದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಜರುಗಿತು. ಅರಮನೆಯ ಟಿಕೆಟ್ ಕೌಂಟರ್‌ನ ಬಳಿ ಮಂಗಳವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ಪ್ರವಾಸಿಗರು ಅರಮನೆ ವೀಕ್ಷಣೆಗೆ ಟಿಕೆಟ್ ಖರೀದಿಸಲು ಸರದಿಯಲ್ಲಿ ನಿಂತಿದ್ದರು.
ಉಗ್ರರ ಭೀತಿ ಹಿನ್ನೆಲೆಯಲ್ಲಿ ಪ್ರತಿನಿತ್ಯವು ಎಲ್ಲರನ್ನೂ ಭದ್ರತಾ ತಪಾಸಣೆ ನಂತರ ಅರಮನೆ ಒಳಬಿಡಲಾಗುತ್ತದೆ. ಹೀಗಾಗಿ ಪೊಲೀಸರು ಜನರನ್ನು ತಪಾಸಣೆ ಮಾಡುತ್ತಿದ್ದುದನ್ನು ವ್ಯಕ್ತಿಯೊಬ್ಬ, ಅರಮನೆಗೆ ಬಾಂಬ್ ಇಡಲಾಗಿದೆ ಎಂದು ಕೂಗಿಕೊಂಡಿದ್ದಾನೆ.
ಇದರಿಂದ ಆತಂಕಕ್ಕೆ ಒಳಗಾದ ಪ್ರವಾಸಿಗರು ಅರಮನೆ ಒಳ ಪ್ರವೇಶಿಸದೆ ಹೊರಗೆ ಬಂದು ನಿಂತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಅರಮನೆ ಆವರಣದಲ್ಲಿ ಶೋಧ ಕಾರ್ಯ ನಡೆಸಿದರು.
ಅರಮನೆ ಆವರಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕೂಗಿದ ವ್ಯಕ್ತಿಯನ್ನು ಮಹದೇವಪ್ಪ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ದೇವರಾಜ ಠಾಣೆ ಪೊಲೀಸರು, ಆತ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ವ್ಯಕ್ತಿಯೊಬ್ಬ ಅರಮನೆಗೆ ಬಾಂಬ್ ಇಡಲಾಗಿದೆ ಎಂದು ಕೂಗಿಕೊಂಡ ಎಂಬ ಕಾರಣಕ್ಕೆ ತಪಾಸಣಾ ಕಾರ್ಯ ನಡೆಸಿದ್ದಲ್ಲ , ಉಗ್ರರ ಭೀತಿಯ ಹಿನ್ನೆಲೆಯಲ್ಲಿ ನಿತ್ಯವೂ ಅರಮನೆ ಆವರಣದಲ್ಲಿ ಶೋಧ ಕಾರ್ಯ ನಡೆಯುತ್ತಿರುತ್ತದೆ ಎಂದು ಅರಮನೆ ಭದ್ರತಾ ವಿಭಾಗದ ಎಸಿಪಿ ಶೈಲೇಂದ್ರ ತಿಳಿಸಿದ್ದಾರೆ.
ಬಾಂಬ್ ಇದೆ ಎಂಬ ಸಂಶಯದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಅರಮನೆಯಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.