Advertisement

ಹುಸಿ ಬಾಂಬ್‌ ಕರೆ ಎಕ್ಸ್‌ಪರ್ಟ್‌ ಆದಿತ್ಯ

12:26 AM Jan 23, 2020 | Team Udayavani |

ಬೆಂಗಳೂರು: ಎಂಬಿಎ ಮತ್ತು ಎಂಜಿನಿಯರಿಂಗ್‌ ಪದವೀಧರನಾಗಿರುವ ಆದಿತ್ಯರಾವ್‌, 2018ರಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೂ ಹುಸಿ ಬಾಂಬ್‌ ಕರೆ ಮಾಡಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.

Advertisement

2018ರ ಆಗಸ್ಟ್‌ 20ರಂದು ವಿಮಾನ ನಿಲ್ದಾಣದ ವಾಹನ ನಿಲುಗಡೆ ಸ್ಥಳ ಹಾಗೂ ದೇಶೀಯ ಪ್ರಯಾಣದ ವಿಮಾನವೊಂದರಲ್ಲಿ ಬಾಂಬ್‌ ಇದೆ ಎಂದು ಕರೆ ಮಾಡಿದ್ದ. ಅದನ್ನು ಆಧರಿಸಿ ಪೊಲೀಸರು ತೀವ್ರ ಶೋಧ ಹಾಗೂ ತನಿಖೆ ನಡೆಸಿದಾಗ ಹುಸಿ ಬಾಂಬ್‌ ಕರೆ ಎಂದು ಗೊತ್ತಾಗಿತ್ತು. ಆ. 27ರಂದು ಮತ್ತೂಮ್ಮೆ ಎರಡು ಬಾರಿ ಏರ್‌ಪೋರ್ಟ್‌ ಸಿಬ್ಬಂದಿಗೆ ಕರೆ ಮಾಡಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆಯೊಡ್ಡಿದ್ದ.

ಅಷ್ಟೇ ಅಲ್ಲದೆ ರೈಲ್ವೆ ನಿಲ್ದಾಣದಲ್ಲಿಯೂ ಬಾಂಬ್‌ ಇದ್ದು ಸ್ಫೋಟಿಸುವುದಾಗಿ ಬೆದರಿಸಿದ್ದ. ನಗರ ಪೊಲೀಸರು, ವಿಮಾನ ನಿಲ್ದಾಣ ಅಧಿಕಾರಿಗಳು, ಬಾಂಬ್‌ ನಿಷ್ಕ್ರಿಯ ದಳ ಇಡೀ ರಾತ್ರಿ ಶೋಧ ಕಾರ್ಯಚರಣೆ ನಡೆಸಿದಾಗ ಹುಸಿ ಕರೆಗಳು ಎಂದು ಸಾಬೀತಾಗಿತ್ತು. ಹುಸಿ ಬಾಂಬ್‌ ಕರೆಗಳ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಏರ್‌ಪೋರ್ಟ್‌ ಠಾಣೆ ಪೊಲೀಸರು ಆರೋಪಿ ಆದಿತ್ಯರಾವ್‌ನನ್ನು ಬಂಧಿಸಿದ್ದರು.

ಕೆಲಸ ಕೊಡದ್ದಕ್ಕೆ ಹುಸಿ ಬಾಂಬ್‌ ಕರೆ!: ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದ. ಆದರೆ, ನಿಲ್ದಾಣದ ಅಧಿಕಾರಿಗಳು ಈ ರೀತಿಯ ಹುದ್ದೆ ಯಾವುದಿಲ್ಲ ಎಂದು ವಾಪಸ್‌ ಕಳುಹಿಸಿದ್ದರು. ಆಗಲೇ “ನನ್ನಂಥ ಟ್ಯಾಲೆಂಟ್‌ಗೆ ನೀವು ಕೆಲಸ ಕೊಡುವುದಿಲ್ಲ ಎಂದರೇ ಏನು? ನಿಮಗೆಲ್ಲ ಇದೆ’ ಎಂದು ಎಚ್ಚರಿಕೆ ನೀಡಿದ್ದ. ಆದರೆ, ಆತನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೆಲ ದಿನಗಳ ನಂತರ ಹುಸಿ ಬಾಂಬ್‌ ಕರೆ ಮಾಡಿದ್ದಾನೆ.

ಅದೇ ವರ್ಷ ರೈಲ್ವೆ ಅಧಿಕಾರಿಗಳ ಜತೆಗೆ ಪ್ರಯಾಣದ ವೇಳೆ ಉಂಟಾಗಿದ್ದ ಗಲಾಟೆಗೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್‌ ಕರೆ ಮಾಡಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಈ ಮಧ್ಯೆ ಪೇಯಿಂಗ್‌ ಗೆಸ್ಟ್‌(ಪಿಜಿ) ಬಾಡಿಗೆ ಶುಲ್ಕ ಮತ್ತು ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾಸವತಿಸಲು ಹಣವಿಲ್ಲದೇ ಕಳ್ಳತನಕ್ಕೆ ಇಳಿದಿದ್ದ ಆದಿತ್ಯ, ಕೆಲಸಕ್ಕಿದ್ದ ಕಂಪನಿ ಹಾಗೂ ತಾನು ನೆಲೆಸಿದ್ದ ಪೇಯಿಂಗ್‌ ಗೆಸ್ಟ್‌ನಲ್ಲಿ ಸ್ನೇಹಿತರ ಲ್ಯಾಪ್‌ಟಾಪ್‌ ಕಳವು ಮಾಡಿದ್ದ. ಈ ಕುರಿತು ಜಯನಗರ ಮತ್ತು ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿತ್ತು.

Advertisement

ವಿವಿಧೆಡೆ ನೌಕರಿ – ಬಂಧನ: ಎಂಬಿಎ ಪದವೀಧರನಾಗಿರುವ ಆದಿತ್ಯರಾವ್‌ ಅವಿವಾಹಿತವಾಗಿದ್ದು, ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾನೆ. ಈ ಹಿಂದೆ ಮಂಗಳೂರಿನಲ್ಲಿ ಕಾಲೇಜೊಂದರ ಸೆಕ್ಯೂರಿಟಿ ಗಾರ್ಡ್‌ ಆಗಿ ಕೂಡ ಕೆಲಸ ಮಾಡಿದ್ದ. ಜತೆಗೆ ಈಶಾನ್ಯ ವಿಭಾಗದ ಠಾಣೆಯೊಂದರಲ್ಲಿ ಮನೆಕಳ್ಳತನ ಆರೋಪ ಪ್ರಕರಣದಲ್ಲಿ ಬಂಧಿತನಾಗಿದ್ದ. ನಂತರ ಬಿಡುಗಡೆಯಾಗಿದ್ದ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು. ಅಲ್ಲದೆ, ಎಂ.ಜಿ.ರಸ್ತೆಯಲ್ಲಿರುವ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಚೇರಿ ವಾತಾವರಣ ಸರಿಯಿಲ್ಲ ಎಂದು ಮೇಲಾಧಿಕಾರಿಗಳ ಜತೆ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದ. ಚಿಕ್ಕಬಳ್ಳಾಪುರ ಪೊಲೀಸರು ಈತನನ್ನು ಪ್ರಕರಣವೊಂದರಲ್ಲಿ ಬಂಧಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಕನಸು ಈಡೇರದ್ದಕ್ಕೆ ಹುಸಿ ಕರೆಗಳು: ಆದಿತ್ಯರಾವ್‌ ಬ್ಯಾಂಕ್‌, ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಯಾಗಿದ್ದರೂ ಆತನಿಗೆ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಭದ್ರತಾ ಸಿಬ್ಬಂದಿಯಾಗಿಯಾದರೂ ಕೆಲಸ ಮಾಡಬೇಕೆಂಬ ಕನಸು ಹೊತ್ತಿದ್ದ. ಹೀಗಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದ. ಅಲ್ಲಿ ಸಿಗಲಿಲ್ಲ. ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಕೆಲಸ ಸಿಗುತ್ತದೆಯೇ? ಇಲ್ವವೇ? ಎಂದು ಆತಂಕದಿಂದಲೇ ಬಾಂಬ್‌ ಇಟ್ಟು ಎಚ್ಚರಿಕೆ ನೀಡಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next