Advertisement

ಕೀರ್ತನ –ಸಂಗೀತ ರಸಗ್ರಹಣ

03:13 PM Jul 21, 2017 | |

ಉಡುಪಿಯ ಕನಕ ಅಧ್ಯಯನ ಪೀಠ, ಮಣಿಪಾಲ ವಿಶ್ವವಿದ್ಯಾಲಯ ಮತ್ತು ಉಡುಪಿ – ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಕನಕದಾಸ ಕೀರ್ತನ ಮತ್ತು ಸಂಗೀತ ರಸಗ್ರಹಣ ಶಿಬಿರವು ಎಂ. ಜಿ. ಎಂ. ಕಾಲೇಜು ಆವರಣದ “ಧ್ವನ್ಯಾಲೋಕ’ದಲ್ಲಿ ಇತ್ತೀಚೆಗೆ ನಡೆಯಿತು. ಬೆಂಗಳೂರಿನ ವೃಂದಾ ಆಚಾರ್ಯ ಮತ್ತು ಉಡುಪಿಯ ವೀ.ಅರವಿಂದ ಹೆಬ್ಟಾರರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಇದಲ್ಲದೆ ಆರಂಭದ ದಿನ ಚೆನ್ನೈಯ ಜೆ. ಎ. ಜಯಂತ್‌ ಅವರ ಕೊಳಲು ವಾದನ ಕಛೇರಿಯೂ ಉತ್ತಮವಾಗಿ ನಡೆಯಿತು. 

Advertisement

ಯುವ ಕಲಾವಿದರಲ್ಲಿ ಪ್ರಮುಖರೆಂದು ಗುರುತಿಸಲ್ಪಟ್ಟ ಜಯಂತ್‌ ಅವರು ಕದನ ಕುತೂಹಲ ರಾಗದ ವರ್ಣದೊಂದಿಗೆ ತಮ್ಮ ಕೊಳಲು ವಾದನ ಕಛೇರಿಯನ್ನು ಆರಂಭಿಸಿ ಮುಂದಿನ ಆನಂದ ಭೈರವಿ ರಾಗದ ಮರಿವೇರೆ ಕೃತಿಗೆ ಸೊಗಸಾದ ರಾಗಾಲಾಪನೆಯನ್ನು ನೀಡಿದರು. ವಿಳಂಬ ಕಾಲದಲ್ಲಿ ನಡೆಯುವ ಮರಿವೇರೆ ದಿಕ್ಕೆವರು ಕೃತಿಯ ಸಾಹಿತ್ಯಕ್ಕೆ ಚ್ಯುತಿ ಬಾರದಂತೆ ನುಡಿಸಿದ ಅವರ ಸಾಮರ್ಥ್ಯ ಮೆಚ್ಚುವಂತಹದ್ದು. ಸಾಹಿತ್ಯವನ್ನು ವಾದ್ಯದಲ್ಲಿ ತರುವಂತಹ ಸವಾಲನ್ನು ಸರಿಯಾಗಿ ನಿರ್ವಹಿಸದೇ ಹೋದರೆ ನುಡಿಸಾಣಿಕೆ ರಸಿಕರ ಮನವನ್ನು ತಟ್ಟುವುದಿಲ್ಲ. ಕೊಳಲಿನಲ್ಲಿ ತುತ್ತೂಕಾರದ ಮೂಲಕ, ವೀಣೆಯಲ್ಲಿ ಮೀಟುಗಳ ಮೂಲಕ ತಾನು ನುಡಿಸುವ ಕೃತಿಯನ್ನು ಸ್ಪಷ್ಟಪಡಿಸಬೇಕಾದ ಅನಿವಾರ್ಯತೆ ವಾದಕರಿಗೆ ಇದೆ. ಸ್ವರಗಳ ಮೊರೆಹೊಗದೆ ಸಾಹಿತ್ಯವನ್ನೇ ನುಡಿಸುವ ವಾದನವೇ ಶ್ರೇಷ್ಠವಾದದ್ದು. ಇದನ್ನು ಜಯಂತ್‌ ಅವರ ನುಡಿಸಾಣಿಕೆಯಲ್ಲಿ ಕಾಣಲು ಸಾಧ್ಯವಾಯಿತು. ತಮ್ಮೆಲ್ಲ ಅನುಭವ ಮತ್ತು ಪ್ರತಿಭೆಯನ್ನು ಬಳಸಿಕೊಂಡು ಅವರು ಪ್ರಸ್ತುತಪಡಿಸಿದ ಕಾಂಬೋಧಿ ರಾಗದ ಓ ರಂಗಶಾಯಿ ಎನ್ನುವ ಪ್ರೌಢ ರಚನೆ ರಸಿಕರ ಮುಕ್ತ ಪ್ರಶಂಸೆಗೆ ಪಾತ್ರವಾಯಿತು. ಕಛೇರಿಯ ಉತ್ತರಾರ್ಧದಲ್ಲಿ ದೇವರ ನಾಮಗಳು, ಜಾವಳಿ, ತಿಲ್ಲಾನ ಮನೋಜ್ಞವಾಗಿ ಮೂಡಿಬಂದುವು. ವಯಲಿನ್‌ನಲ್ಲಿ ಬೆಂಗಳೂರಿನ ಅಚ್ಯುತ ರಾವ್‌ ಕಲಾವಿದರನ್ನು ಅನುಸರಿಸಿಕೊಂಡು ಹೋದದ್ದು ಸ್ತುತ್ಯರ್ಹ. ಮೃದಂಗದಲ್ಲಿ ಸಚಿನ್‌ ಪ್ರಕಾಶ್‌ ಮತ್ತು ಖಂಜೀರದಲ್ಲಿ ಬೆಂಗಳೂರಿನ ಸುನಾದ ಆನೂರು ಉತ್ತಮವಾದ ಸಹಕಾರ ನೀಡಿದರು.

ಆರಂಭದ ದಿನ ಡಾ| ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ| ಮಹಾಬಲೇಶ್ವರ ರಾವ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಹಿರಿಯ ಕಲಾ ವಿಮರ್ಶಕರಾದ ಎ. ಈಶ್ವರಯ್ಯ ಅಂದು ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಬಿರದಲ್ಲಿ ಮೂರು ಪ್ರಧಾನ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವೃಂದಾ ಆಚಾರ್ಯ ಅವರು ಭಾರತೀಯ ಸಂಗೀತ ಪರಂಪರೆಯ ಒಳ – ಹೊರಗು ಎನ್ನುವ ವಿಷಯದಲ್ಲೂ ಪ್ರೊ| ಬಿ. ಶಿವರಾಮ ಶೆಟ್ಟಿ  ಅವರು ಕನಕದಾಸರು ಮತ್ತು ಭಕ್ತಿ ಪರಂಪರೆ ಎನ್ನುವ ವಿಚಾರವಾಗಿಯೂ ವೀ. ಅರವಿಂದ ಹೆಬ್ಟಾರರು ಕನಕದಾಸರ ಕೀರ್ತನೆಗಳು ಮತ್ತು ಸಂಗೀತ ಎನ್ನುವ ವಿಷಯದಲ್ಲಿ ವಿದ್ವತೂ³ರ್ಣ ಉಪನ್ಯಾಸಗಳನ್ನು ನೀಡಿದರು.

ಶಿಬಿರದಲ್ಲಿ ಒಟ್ಟು 35 ಮಂದಿ ಅಭ್ಯರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಿಬಿರದ ಕಾರ್ಯಕ್ರಮಗಳು ಹಿತವಾಗಿ ಮೂಡಿಬರುವಂತೆ, ಶಿಬಿರಾರ್ಥಿಗಳು ಒಳಗೊಳ್ಳುವಂತೆ ತಮ್ಮ ಶಿಕ್ಷಣದ ವಿಧಾನವನ್ನು ರೂಪಿಸಿಕೊಂಡ ಸಂಪನ್ಮೂಲ ವ್ಯಕ್ತಿಗಳಾದ ವೃಂದಾ ಆಚಾರ್ಯ ಮತ್ತು ವೀ. ಅರವಿಂದ ಹೆಬ್ಟಾರರು ಅಭಿನಂದನಾರ್ಹರು.

Advertisement

ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದ ಕನಕ ಅಧ್ಯಯನ ಪೀಠ, ಉಡುಪಿ, ಮಣಿಪಾಲ ವಿಶ್ವವಿದ್ಯಾಲಯ – ಇದರ ಸಂಯೋಜನಾಧಿಕಾರಿ ಪ್ರೊ| ವರದೇಶ ಹಿರೇಗಂಗೆ, ಸಹ ಸಂಯೋಜನಾಧಿಕಾರಿ ಡಾ| ಅಶೋಕ ಆಳ್ವ ಇವರಿಗೆ ಪ್ರತ್ಯೇಕ ಅಭಿನಂದನೆ ಸಲ್ಲುತ್ತದೆ.

ಜ್ಯೋತಿಷ್ಮತಿ

Advertisement

Udayavani is now on Telegram. Click here to join our channel and stay updated with the latest news.

Next