Advertisement

ಪ್ರಜ್ವಲ್‌ ಹೇಳಿಕೆ: ಭಿನ್ನ ರತ್ತ ತಿರುಗಿಸಿದ ಎಚ್‌ಡಿಕೆ

03:10 AM Jul 11, 2017 | Harsha Rao |

ಬೆಂಗಳೂರು: ಜೆಡಿಎಸ್‌ನಲ್ಲಿ ಸೂಟ್‌ಕೇಸ್‌ ಸಂಸ್ಕೃತಿ ಇದೆ ಎಂಬ ಯುವ ಮುಖಂಡ ಪ್ರಜ್ವಲ್‌ ರೇವಣ್ಣ ಹೇಳಿಕೆಯನ್ನು ಭಿನ್ನಮತೀಯರ ಕಡೆಗೆ ತಿರುಗಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, “ಜೆಡಿಎಸ್‌ನಲ್ಲಿ ಸೂಟ್‌ಕೇಸ್‌ ಸಂಸ್ಕೃತಿ ಇದ್ದದ್ದು ಹೌದಾದರೂ ಸೂಟ್‌ ಕೇಸ್‌ ಪಡೆಯುತ್ತಿದ್ದವರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ’ ಎಂದು ಹೇಳಿದ್ದಾರೆ.
ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಆಕ್ರೋಶಗೊಂಡಿರುವ ಶಾಸಕ ಜಮೀರ್‌
ಅಹಮದ್‌, ಕುಮಾರಸ್ವಾಮಿ ಹಿಟ್‌ ಅಂಡ್‌ ರನ್‌ ರಾಜಕಾರಣಿ. ನಮ್ಮನ್ನು ಕೆಣಕಿದರೆ ಸುಮ್ಮರುವುದಿಲ್ಲ. ಎಲ್ಲ ಬಿಚ್ಚಿಡಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಹೀಗಾಗಿ, ಪ್ರಜ್ವಲ್‌ ರೇವಣ್ಣ ಪ್ರಸ್ತಾಪಿಸಿದ “ಸೂಟ್‌ಕೇಸ್‌’ ವಿಷಯ ದೇವೇಗೌಡರ ಕುಟುಂಬದಲ್ಲಿ ವಿಷಯ ತಣ್ಣಗಾದರೂ ಹೊರಗೆ ಸದ್ದು ಮಾಡುತ್ತಿದೆ.

Advertisement

ಎಚ್‌ಡಿಕೆ ಹೇಳಿದ್ದೇನು?: ಸುದ್ದಿಗಾರರ ಜತೆ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ನಲ್ಲಿ ಈ ಹಿಂದೆ ಸೂಟ್‌ಕೇಸ್‌ ಪಡೆಯುತ್ತಿದ್ದದ್ದು ನಿಜ. ಅವರು ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದೂ ಹೌದು. ಆದರೆ, ಅವರೆಲ್ಲ ಈಗಾಗಲೇ ಪಕ್ಷ ಬಿಟ್ಟು ಹೋಗಿದ್ದಾರೆ. ಬಹುಶಃ ಅವರನ್ನು ಕುರಿತು ಪ್ರಜ್ವಲ್‌ ಹೇಳಿರಬಹುದು ಎಂದು ಹೇಳಿದರು.

ಪ್ರಜ್ವಲ್‌ ತಮ್ಮನ್ನು ಕುರಿತಾಗಿ ಆ ಹೇಳಿಕೆ ಕೊಟ್ಟಿಲ್ಲ, ತಮ್ಮ ಹೆಸರನ್ನೂ ಪ್ರಸ್ತಾಪಿಸಿಲ್ಲ. ಆ ವಿಚಾರ ಏನೂ ಅಂತಾನೇ ಗೊತ್ತಿಲ್ಲ. ಹೀಗಾಗಿ, ಅದರ ಬಗ್ಗೆ ಚರ್ಚೆ ಅನವಶ್ಯಕ. ತಮ್ಮನ್ನು ಕ್ಷಮೆ ಕೇಳ್ಳೋಕೆ ಪ್ರಜ್ವಲ್‌ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ಸೂಟ್‌ ಕೇಸ್‌ ಪಡೆಯುತ್ತಿದ್ದವರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ. ಹಿಂದಿನ
ಘಟನೆಗಳನ್ನು ಪ್ರಜ್ವಲ್‌ ಹೇಳಿರಬಹುದು. ಅದು ನಿಜವೂ ಆಗಿತ್ತು ಎಂದು ತಿಳಿಸಿದರು.

ಜಮೀರ್‌, ಬಾಲಕೃಷ್ಣ  ವಾಗ್ಧಾಳಿ
ಕುಮಾರಸ್ವಾಮಿ ಹೇಳಿಕೆ ಪ್ರಕಟವಾದ ಬೆನ್ನಲ್ಲೇ ಸುದ್ದಿಗಾರರ ಜತೆ ಮಾತನಾಡಿದ ಜಮೀರ್‌ ಅಹಮದ್‌, ಕುಮಾರಸ್ವಾಮಿ ಅಡ್ಡಗೋಡೆ ಮೆಲೆ ದೀಪ ಇಟ್ಟಂತೆ ಮಾತನಾಡದೆ ಸೂಟ್‌ ಕೇಸ್‌ ಪಡೆದವರು ಯಾರು ಅಂತ ನೇರವಾಗಿ ಹೇಳಲಿ. 3 ದಿನಗಳ ನಂತರ ನಮ್ಮನ್ನು ಟಾರ್ಗೆಟ್‌ ಮಾಡಿದ್ದಾರೆ. ನಮ್ಮನ್ನು ಕೆಣಕಿದರೆ ನಾವು ಬೀದಿಗೆ ಇಳಿಯಬೇಕಾಗುತ್ತದೆ. ನಮ್ಮ ಪಾಡಿಗೆ ನಮ್ಮನ್ನು ಬಿಡಲಿ. ಸೂಟ್‌ಕೇಸ್‌ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದು ತಿರುಗೇಟು ನೀಡಿದರು.

ಐಎಎಂ ರಾಮಸ್ವಾಮಿ, ವಿಜಯ್‌ಮಲ್ಯ, ರಾಜೀವ್‌ ಚಂದ್ರಶೇಖರ್‌, ಕುಪೇಂದ್ರರೆಡ್ಡಿ ಹೇಗೆ ರಾಜ್ಯಸಭೆ ಸದಸ್ಯರಾದರು, ಬಿ.ಎಂ.ಫಾರೂಕ್‌ ರಾಜ್ಯಸಭೆ ಚುನಾವಣೆಗೆ ಹೇಗೆ ಬಂದ್ರು? ನಾರಾಯಣಸ್ವಾಮಿ, ಶರವಣ ಹೇಗೆ ವಿಧಾನಪರಿಷತ್‌ ಸದಸ್ಯರಾದರು ಎಂಬುದೂ ಸೇರಿ ಸೂಟ್‌ಕೇಸ್‌ ಸಂಸ್ಕೃತಿ ಬಗ್ಗೆ ಸಿಬಿಐಗೆ ಪತ್ರ ಬರೆಯಲು ಸಿದ್ಧನಿದ್ದೇನೆ. ಕುಮಾರಸ್ವಾಮಿಯೂ ಬರೆಯಲಿ. ಇದರ ಬಗ್ಗೆ ತನಿಖೆಯಾಗಲಿ ಎಂದು ಸವಾಲು ಹಾಕಿದರು. “ನಿಮ್ಮ ಮನೆ ವಿಚಾರ ನೀವು ಸರಿಪಡಿಸಿಕೊಳ್ಳಿ. ನಿಮ್ಮ ಕುಟುಂಬದ ಸಮಸ್ಯೆ ಮರೆಮಾಚಲು ನಮ್ಮ ಮೇಲೆ ಗೂಬೆ ಕೂರಿಸಲು ಬರಬೇಡಿ’ ಎಂದು ಕುಮಾರಸ್ವಾಮಿಗೆ ತಾಕೀತು ಮಾಡಿದ ಜಮೀರ್‌, “ಪ್ರಜ್ವಲ್‌ ರಾಜಕೀಯದಲ್ಲಿ ದೇವೇಗೌಡರ ವಾರಸುದಾರನಾಗಿ ಬೆಳೆಯುತ್ತಿದ್ದಾರೆ ಎಂದು ಆತನನ್ನೇ ಬೆಳೆಯಲು ಬಿಡುತ್ತಿಲ್ಲ. ಇನ್ನು ನಮ್ಮನ್ನು ಬಿಡುತ್ತಾರಾ’ ಎಂದು ಪ್ರಶ್ನಿಸಿದರು. ಶಾಸಕರ ಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮಾಗಡಿ ಶಾಸಕ ಬಾಲಕೃಷ್ಣ, ಕುಮಾರಸ್ವಾಮಿ ಹೇಳಿಕೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದರು. ಎಲ್ಲ ಪಕ್ಷಗಳಲ್ಲೂ ಸೂಟ್‌ಕೇಸ್‌ ರಾಜಕೀಯ ಇದೆ. ಹಿಂದೆಯೂ ಕೆಲವರು ಪಕ್ಷಕ್ಕೆ ಸಹಾಯ ಮಾಡಿದ್ದಾರೆ. ಎಚ್‌.ಡಿ.ದೇವೇಗೌಡರು ಪ್ರಜ್ವಲ್‌ ಹೇಳಿಕೆ ಖಂಡಿಸಿದರು. ಅವರು ನಮ್ಮ ಹೆಸರು ಪ್ರಸ್ತಾಪಿಸಲಿಲ್ಲ.

Advertisement

ಆದರೆ, ಕುಮಾರಸ್ವಾಮಿ ನಮ್ಮ ಹೆಸರು ಪ್ರಸ್ತಾಪಿಸಿದ್ದಾರೆ. ಆ ಬಗ್ಗೆ ಯಾವುದೇ ಚರ್ಚೆಗೆ ನಾವು ಸಿದ್ಧ ಎಂದು ಹೇಳಿದರು.
ನಾವು ಕಾಂಗ್ರೆಸ್‌ ಪಕ್ಷದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ. ಒಂದೊಮ್ಮೆ ಟಿಕೆಟ್‌ ಸಿಗದಿದ್ದರೆ ಪಕ್ಷೇತರರಾಗಿಯೂ ಸ್ಪರ್ಧಿಸಲು ಸಿದ್ಧ. ಆದರೆ, ಜೆಡಿಎಸ್‌ಗಂತೂ ವಾಪಸ್‌ ಹೋಗುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next