ಆತ ತನ್ನದೇ ರೆಸ್ಟೋರೆಂಟ್‌ನಲ್ಲಿ ತಾನೇ ಶೆಫ್ ಆಗಿ ಕೆಲಸ ಮಾಡುತ್ತಿರುವ ಹುಡುಗ. ತನ್ನಿಷ್ಟದಂತೆ ತಾನು ಬದುಕಬೇಕು ಎಂಬ ಕಾರಣಕ್ಕೆ ತನ್ನಿಷ್ಟದ ಶೆಫ್ ಕೆಲಸವನ್ನು ಖುಷಿಯಿಂದ ಮಾಡುತ್ತಿರುವ ಆ ಹುಡುಗನಿಗೆ ಹೊಸ ಕೇಕ್ ರೆಸಿಪಿಯೊಂದನ್ನು ಕಂಡು ಹಿಡಿಯುವ ಕನಸು. ಏನೆಲ್ಲ ಪ್ರಯತ್ನ ಮಾಡಿದರೂ ಯಾವ ರೀತಿಯಲ್ಲಿ ಹೊಸ ರೆಸಿಪಿಯನ್ನು ಪ್ರಯತ್ನಿಸಿದರೂ, ಅದರಲ್ಲಿ ಏನೋ ಕೊರತೆ! ತಾನಂದುಕೊಂಡಂತೆ ರೆಸಿಪಿ ಬರುತ್ತಿಲ್ಲ ಎಂಬ ಹುಡುಕಾಟದಲ್ಲಿರುವಾಗಲೇ, ಈ ಹುಡುಗನ ರೆಸ್ಟೋರೆಂಟ್‌ಗೆ “ಜೂನಿ’ ಎಂಬ ಹುಡುಗಿಯೊಬ್ಬಳ ಎಂಟ್ರಿಯಾಗುತ್ತದೆ. ಅವಳ್ಳೋ, ಮೇಲ್ನೋಟಕ್ಕೆ ಸರಳ ಸುಂದರಿಯಾಗಿ ಕಂಡರೂ, ಅಂತರಾಳದಲ್ಲಿ ನೂರಾರು ಭಾವನೆಗಳನ್ನು ಅಡಗಿಸಿಕೊಟ್ಟುಕೊಂಡ ಗುಪ್ತಗಾಮಿನಿ. ಅಲ್ಲಿಯವರೆಗೂ ರೆಸಿಪಿಗಾಗಿ ಹುಡುಕಾಟ ನಡೆಸುತ್ತಿದ್ದ ಹುಡುಗ, ಅಲ್ಲಿಂದ ಹುಡುಗಿಯ ಹಿನ್ನೆಲೆ, ಅವಳ ಕಾಣದ ವ್ಯಕ್ತಿತ್ವ, ಭಾವನೆಗಳ ಹುಡುಕಾಟಕ್ಕೆ ಮುಂದಾಗುತ್ತಾನೆ. ಅಲ್ಲಿಂದ “ಜೂನಿ’ಯ ವರ್ಣರಂಜಿತ ವ್ಯಕ್ತಿತ್ವ ಅನಾವರಣವಾಗುತ್ತಾ ಹೋಗುತ್ತದೆ.
ಇದು ಈ ವಾರ ತೆರೆಗೆ ಬಂದಿರುವ “ಜೂನಿ’ ಸಿನಿಮಾದ ಕಥೆಯ ಸಣ್ಣ ಎಳೆ. ಮೇಲ್ನೋಟಕ್ಕೆ ಕಾಣುವಂತೆ, “ಜೂನಿ’ ಒಂದು ಲವ್‌ಸ್ಟೋರಿ ಸಿನಿಮಾ. ಒಂದು ನವಿರಾದ ಪ್ರೇಮಕಥೆಯ ಜೊತೆಗೆ ಸೈಕಾಲಜಿಕಲ್ ಥ್ರಿಲ್ಲರ್ ಅಂಶಗಳನ್ನು ಇಟ್ಟುಕೊಂಡು “ಜೂನಿ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ವೈಭವ್ ಮಹಾದೇವ.
ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಇದೊಂದು ಅಪರೂಪದ ಪ್ರಯತ್ನ ಎನ್ನಬಹುದು. ಆರಂಭದಿಂದ ಅಂತ್ಯದವರೆಗೂ “ಜೂನಿ’ ಒಂದೇ ವೇಗವನ್ನು ಕಾಪಾಡಿಕೊಂಡಿದ್ದು, ಹೊಸತನದ ನಿರೂಪಣೆ ಒಂದಷ್ಟು ಗಮನ ಸೆಳೆಯುತ್ತದೆ. ಕೆಲ ದೃಶ್ಯಗಳಿಗೆ ಅಲ್ಲಲ್ಲಿ ಕತ್ತರಿ ಪ್ರಯೋಗ ಮಾಡಿದ್ದರೆ, “ಜೂನಿ’ ಕಥೆ ಇನ್ನಷ್ಟು ಶಾರ್ಟ್ ಆ್ಯಂಡ್ ಸ್ವೀಟ್ ಆಗಿ ಮುಗಿಯುವ ಸಾಧ್ಯತೆಗಳಿದ್ದವು.
ಇನ್ನು ನಾಯಕ ಪೃಥ್ವಿ ಅಂಬರ್ ಶೆಫ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ನಾಯಕಿ ರಿಶಿಕಾ ಮೂರು-ನಾಲ್ಕು ವಿಭಿನ್ನ ವ್ಯಕ್ತಿತ್ವಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡ ಹುಡುಗಿ ಯಾಗಿ ತಮ್ಮ ಪಾತ್ರವನ್ನು ಸಮರ್ಥ ವಾಗಿ ನಿಭಾಯಿಸಿ ದ್ದಾರೆ. ಇನ್ನಿತರ ಕಲಾವಿದರು ಪಾತ್ರಕ್ಕೆ ಒಪ್ಪುವಂತೆ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ಸಿನಿಮಾದ ಒಂದೆರಡು ಹಾಡುಗಳು, ಛಾಯಾಗ್ರಹಣ, ಸಂಕಲನ ಕಾರ್ಯ ತಾಂತ್ರಿಕವಾಗಿ ಸಿನಿಮಾವನ್ನು ಸುಂದರವಾಗಿಸಿದೆ.
ಅತಿಯಾದ ಆಡಂಬರವಿಲ್ಲದೆ ಸರಳವಾಗಿ ಒಂದು ಒಳ್ಳೆಯ ಪ್ರಯತ್ನವಾಗಿ ಮೂಡಿ ಬಂದಿರುವ “ಜೂನಿ’ಯನ್ನು ಒಮ್ಮೆ ಥಿಯೇ ಟರ್‌ನಲ್ಲಿ ನೋಡಿಬರಬಹುದು.
ಜಿ.ಎಸ್. ಕಾರ್ತಿಕ ಸುಧನ್