ನಾಯಕ ನಟ ಪೃಥ್ವಿ ಅಂಬಾರ್ “ದೂರದರ್ಶನ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ.
ಸುಂದರ ಗ್ರಾಮ, ಬೆಟ್ಟ, ಗುಡ್ಡ, ಹಸಿರನ್ನು ಹಾಸಿ ಹೊದ್ದಿರುವ, ಏನು ಇಲ್ಲದೇ ಇದ್ರೂ ಎಲ್ಲವೂ ದೊರಕುವ ಸಣ್ಣ ಪೇಟೆ. ನಾಟಕ, ಹರಿಕಥೆ, ಭಜನೆ, ವಾಲಿಬಾಲ್ ಇಷ್ಟೇ ಮನರಂಜನೆ ಎಂದುಕೊಂಡಾಗ ಎಂಟ್ರಿ ಕೊಟ್ಟಿದ್ದೇ ದೂರದರ್ಶನ. ಇಷ್ಟು ಅಂಶಗಳನ್ನು ಒಳಗೊಂಡ ಟೈಟಲ್ ಟೀಸರ್ ನೋಡುಗರನ್ನು ಆಕರ್ಷಿಸುತ್ತಿದೆ.
ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ. ಅಂದಿನ ಕಾಲ ಘಟ್ಟದಲ್ಲಿ ಇದ್ದಂತಹ ಹಲವಾರು ಪ್ರಚಲಿತ ವಿದ್ಯಮಾನಗಳನ್ನು ನೋಡುಗರು ಮೆಲುಕು ಹಾಕುವಂತೆ ನಿರ್ದೇಶಕ ಸುಕೇಶ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ.
ನಾಯಕ ಪೃಥ್ವಿಗೆ ಜೋಡಿಯಾಗಿ ಅಯಾನಾ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.
ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಿನಿಮಾಗೆ ರಾಜೇಶ್ ಭಟ್ ನಿರ್ಮಾಣ ಮಾಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ, ವಾಸುಕಿ ವೈಭವ ಸಂಗೀತ, ಪ್ರದೀಪ್ ಆರ್ ರಾವ್ ಸಂಕಲನ, ನಂದೀಶ್ ಟಿ.ಜಿ. ಸಂಭಾಷಣೆ ಸಿನಿಮಾಕ್ಕಿದೆ.