ಬೀದರ: ಇಂದಿನ ಶಿಕ್ಷಣ ನೌಕರಿಗೆ ಮಾತ್ರ ಸೀಮಿತವಾಗಿದೆ. ಆದರೆ, ಶಿಕ್ಷಣದ ಮೂಲ ಗುರಿ ಮಕ್ಕಳಿಗೆ ಸಂಸ್ಕಾರ, ಒಳ್ಳೆಯದ್ದು-ಕೆಟ್ಟದ್ದು ಯಾವುದು ಎಂಬ ತಿಳುವಳಿಕೆ ಮೂಡಿಸುವುದಾಗಿರಬೇಕು. ಆದ್ದರಿಂದಲೇ ಪ್ರಧಾನಿ ಮೋದಿಯವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ಮಕ್ಕಳಿಗೆ ಉತ್ತಮ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಮಂಗಳವಾರ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರದಿಂದ ಸ್ವಾಮಿ ವಿವೇಕಾನಂದರ ಜಯಂತಿ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಯುವ ಸಪ್ತಾಹ’ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲಿ ವೀರ ಸನ್ಯಾಸಿ ಎಂದು ವಿವೇಕಾನಂದರನ್ನು ಬಿಟ್ಟರೆ ಬೇರೆ ಯಾರನ್ನು ಗುರುತಿಸುವುದಿಲ್ಲ. ಅಂದು ಚಿಕಾಗೋ ಭಾಷಣದಿಂದ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ಯುವಕರು ಸದೃಢ ಸಮಾಜವನ್ನು ನಿರ್ಮಿಸಲು ಅವರ ಆದರ್ಶ, ಬರಹಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಆಶ್ರಮದ ಸ್ವಾಮಿ ಜ್ಯೋತಿರ್ಮಯಾನಂದ ಮಾತನಾಡಿ, ವಿವೇಕಾನಂದರು ಬಹುಮುಖ ಪ್ರತಿಭೆ, ಉನ್ನತ ವ್ಯಕ್ತಿತ್ವ ಹೊಂದಿದ್ದರು. ಮಾನವನ ಹಿತಕ್ಕಾಗಿ ವಿವೇಕರು ಮಾಡಿದ ಕಾರ್ಯ ಅದ್ಭುತವಾಗಿತ್ತು. ದೇವ ಭಕ್ತನಾಗುವುದಕ್ಕಿಂತ ಮಾನವ ಭಕ್ತನಾಗಿ ಬದುಕಿ. ಇನ್ನೊಬ್ಬರಿಗಾಗಿ ಹೃದಯ ಮಿಡಿಯುವ ವ್ಯಕ್ತಿಯೇ ನಿಜವಾದ ನಾಯಕನಾಗುತ್ತಾನೆ. ಅಂತಹ ಧೀರ ನಾಯಕತ್ವ ಸ್ವಾಮಿ ವಿವೇಕಾನಂದರಲ್ಲಿತ್ತು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ| ಆರ್.ರಾಮಚಂದ್ರನ್ ಮಾತನಾಡಿ, ದೀಪ ಯಾವ ದಿಕ್ಕಿನಿಂದ ಬೆಳಗಿಸಿದರೂ ಅದು ಮೇಲ್ಭಾಗಕ್ಕೆ ಮಾತ್ರ ಉರಿಯುವಂತೆ ನಮಗೆ ನಾಲ್ಕು ದಿಕ್ಕಿನಿಂದ ಎಷ್ಟೇ ಅಡೆತಡೆಗಳು ಬಂದರೂ ನಮ್ಮ ಗುರಿ ಉನ್ನತ ಮಟ್ಟದ್ದಾಗಿರಬೇಕು. ಯುವಕರು ತಮ್ಮೊಳಗೆ ಅಡಗಿದ್ದ ಸೂಪ್ತ ಶಕ್ತಿಯನ್ನು ಜಾಗೃತಿ ಮಾಡಿಕೊಂಡು ಗುರಿ ತಲುಪಲು ಪ್ರಯತ್ನಿಸಬೇಕು. ಕಠಿಣ ಪರಿಶ್ರಮ, ಸಮಯಪ್ರಜ್ಞೆ, ಸತತ ಪ್ರಯತ್ನವೇ ಗುರಿ ಮುಟ್ಟಲು ಮೆಟ್ಟಿಲುಗಳಾಗಿವೆ. ಉತ್ತಮವಾದ ಕನಸು ಕಾಣಬೇಕು. ಆ ಕನಸಿನ ಬೆನ್ನೇರಿ ಸಾಧನೆ ಮಾಡಲು ಶ್ರಮಿಸಬೇಕು ಎಂದರು.
ಬುಡಾ ಅಧ್ಯಕ್ಷ ಬಾಬು ವಾಲಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಅಪರ ಡಿಸಿ ರುದ್ರೇಶ್ ಗಾಳಿ, ಯುವ ಸಮನ್ವಯಾ ಧಿಕಾರಿ ಮಯೂರಕುಮಾರ ಗೊರ್ಮೆ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಕರ್ನಲ್ ಶರಣಪ್ಪ ಸಿಕೇಂಪುರ, ವೈಜಿನಾಥ ಮಾನ್ಪಡೆ, ಶಿವಯ್ನಾ ಸ್ವಾಮಿ, ಡಾ| ಪ್ರಭುಲಿಂಗ ಬಿರಾದಾರ, ಓಂಪ್ರಕಾಶ ರೊಟ್ಟೆ, ಡಾ| ಪಿ. ವಿಠಲರೆಡ್ಡಿ ಮತ್ತಿತರರು ಇದ್ದರು.
ಇದೇ ವೇಳೆ ಸಮಾಜ ಸೇವೆ ಹಿನ್ನಲೆ ನಾಗೇಶ ಪಾಟೀಲ ಮತ್ತು ವಿವೇಕ ವಾಲಿ ಅವರನ್ನು ಸನ್ಮಾನಿಸಲಾಯಿತು. ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ ನಾಡಿಗೇರ್ ಸ್ವಾಗತಿಸಿದರು. ವಿರೂಪಾಕ್ಷ ಗಾದಗಿ ವಂದಿಸಿದರು.