ಹುಬ್ಬಳ್ಳಿ: ಜನರು ಶಾಂತಿ, ನೆಮ್ಮದಿ, ಅಭಿವೃದ್ಧಿ ಬಯಸುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿಚಾರವಾಗಿ ಮಹಾರಾಷ್ಟ್ರದ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಮತ್ತು ಮಹಾರಾಷ್ಟ್ರಗಡಿವಿವಾದ ಬಗೆಹರಿದ ವಿಷಯ. ಅದನ್ನು ಮುಂದಿಟ್ಟುಕೊಂಡು ಕೆಲವರು ಪ್ರಚೋದನಾಕಾರಿ ಹೇಳಿಕೆ ನೀಡುತ್ತ, ಜನರ ನೆಮ್ಮದಿ ಕದಡುವುದು ಸಮಂಜಸವಲ್ಲ. ಈ ಬಾರಿ ಅಲ್ಲಿಯ ರಾಜಕಾರಣಿಗಳೇ ನಮ್ಮವರನ್ನು ಪ್ರಚೋದಿಸಿದ್ದಾರೆ. ಅವರು ಬಸ್ಸಿಗೆ ಮಸಿ ಬಳಿದರೆಂದು ನಾವು ಬಳಿಯುವುದು, ನಾವು ಮಸಿ ಬಳಿದೆವೆಂದು ಅವರು ಬಳಿಯುವುದು. ಇವೆಲ್ಲ ಅರ್ಥಹೀನ ಸಂಗತಿ ಎಂದರು.
ದೇಶ ಒಂದು, ನಾವೆಲ್ಲರೂ ಒಂದು ಎನ್ನುವ ಮನೋಭಾವದಿಂದ ಬದುಕಬೇಕು. ಯಾರೇ ಆಗಲಿ ತಕ್ಷಣ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಎರಡೂ ರಾಜ್ಯದವರು ಪರಸ್ಪರ ಹೊಂದಾಣಿಕೆಯಿಂದ ನೆಲೆಕಂಡುಕೊಂಡು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಅಲ್ಲಿಯ ಹಳ್ಳಿ ಮಂದಿ ಇಲ್ಲಿ ಬರಲ್ಲ, ಇಲ್ಲಿಯವರು ಅಲ್ಲಿಗೆ ಹೋಗಲ್ಲ. ರಾಜಕೀಯವಾಗಿ ಇಂತಹ ಹೇಳಿಕೆಗಳಿಂದ ಸಹ ಜನ ಬೇಸತ್ತಿದ್ದಾರೆ ಎಂದರು.