Advertisement

ಸೀರೆಯ ಉಡುಗೆ; ಪ್ರಾಂತೀಯ ಸಾಂಪ್ರದಾಯಿಕ ಉಡುಗೆ

11:20 AM Dec 04, 2020 | Nagendra Trasi |

ಸಾಂಪ್ರದಾಯಿಕತೆ ಹಾಗೂ ಸಂಸ್ಕೃತಿಯ ಪ್ರಭಾವ ಅಳಿಯದೇ ಉಳಿದಿರುವುದು ಹೆಚ್ಚಾಗಿ ಬುಡಕಟ್ಟು ಜನಾಂಗಗಳಲ್ಲಿ. ಇಲ್ಲಿ ಹಲವು ಬುಡಕಟ್ಟು ಜನಾಂಗದ ಮಹಿಳೆಯರ ಸಾಂಪ್ರದಾಯಿಕ ತೊಡುಗೆ ಹಾಗೂ ಪ್ರಾಂತೀಯ ವಸ್ತ್ರವೀಚಿ ವೈಭವದ ಕುರಿತಾಗಿ ತಿಳಿಸಲಾಗಿದೆ.

Advertisement

ಆಂಧ್ರಪ್ರದೇಶದ ಕಪುಲ್ಲು ಜನಾಂಗದ ಮಹಿಳೆಯರು ಎಡದಿಂದ ಬಲಕ್ಕೆ ವಿಶಿಷ್ಟವಾಗಿ ಸೀರೆ ಉಡುತ್ತಾರೆ. ಬೆನ್ನ ಮೇಲೆಯೂ ಪುಟ್ಟ ನೆರಿಗೆಗಳ ವಿನ್ಯಾಸ ಆಕರ್ಷಣೀಯ.

ಪಿಂಕೋಸು- ಮಧುರೈನ ವಿಶಿಷ್ಟ ಸೀರೆಯ ಉಡುಗೆಯ ಸಾಂಪ್ರದಾಯಿಕ ಶೈಲಿ. ಈ ಸೀರೆಯನ್ನು 1.5 ಬಾರಿ ಸೊಂಟದ ಸುತ್ತ ಸುತ್ತಿ, ನೆರಿಗೆಗಳು ಸೀರೆಯ ಹೊರಭಾಗದಲ್ಲಿ ವಿಶೇಷವಾಗಿ ವಿನ್ಯಾಸ ಮಾಡಲ್ಪಡುತ್ತವೆ. ಎಲ್ಲಾ ಬಗೆಯ ಸೀರೆಗಳನ್ನು ಈ ರೀತಿಯಲ್ಲಿ ಉಡಲಾಗುವುದಿಲ್ಲ. ಮಧುರೈ ಮಹಿಳೆಯರು ವಿಶಿಷ್ಟ ಹತ್ತಿಯ ಸೀರೆಗಳನ್ನು ಈ ಸಂಪ್ರದಾಯದ ಆಚರಣೆಗಾಗಿ ಬಳಸುತ್ತಾರೆ.

ಮೋಹಿನಿ ಆಟ್ಟಂ ಕೇರಳ: ಭರತನಾಟ್ಯದಲ್ಲಿ ಸೀರೆ ಉಡುವಂತೆ “ನಿವಿ’ ಬಗೆಯ ಸೀರೆಯನ್ನು ಕೇರಳದಲ್ಲಿ ಮೋಹಿನಿ ಆಟ್ಟಂ ನೃತ್ಯಕ್ಕಾಗಿ ಬಳಸುತ್ತಾರೆ. ಹೆಚ್ಚಾಗಿ ರೇಶಿಮೆಯ ಸೀರೆಗಳೇ ಈ ವಿವಿಧ ಸೀರೆಗಳ ವಿನ್ಯಾಸಕ್ಕೆ ಮೆರುಗು ನೀಡುತ್ತವೆ.

ಪಾರ್ಸಿ ಮಹಿಳೆಯರ “ಗೋಲ್‌’ ಸೀರೆ ಉಡುವ ಸಾಂಪ್ರದಾಯಿಕ ವಿಧಾನ ಇಂದೂ ಮಹತ್ವಪೂರ್ಣ. ಅಕ್ಷಯಕುಮಾರ್‌ ನಟಿಸಿರುವ “ರುಸ್ತುಂ’ ಸಿನೆಮಾವನ್ನು ನೋಡಿದ್ದೀರೇನು? ಈ ಸಿನೆಮಾದಲ್ಲಿ ಇಲಿಯಾನಾ ಡಿಕ್ರೂಸ್‌ ಪಾರ್ಸಿ ಸೀರೆಯನ್ನು ಉಟ್ಟು , ಸೀರೆಯ ಸಾಂಪ್ರದಾಯಿಕತೆಗೆ ಹಾಗೂ ಮೆರುಗಿಗೆ ಜನಪ್ರಿಯತೆ ನೀಡಿದ್ದಾರೆ.

Advertisement

“ನೀವಿ’ ಬಗೆಯ ಸೀರೆ ಉಡುವಂತೆ, ಪಾರ್ಸಿ ಮಹಿಳೆಯರು ಸೀರೆ ಉಡುತ್ತಾರೆ. ಆದರೆ ಸೆರಗನ್ನು “ಗಾರಾ’ ಎಂದು ಕರೆಯುತ್ತಾ ಬೆನ್ನಿನ ಭಾಗದಿಂದ ಸುತ್ತಿ ಉಡುತ್ತಾರೆ. ಬಲಭಾಗದ ಮೂಲಕ ಸಡಿಲವಾಗಿ ಆಕರ್ಷಕವಾಗಿ ಕಾಣುವಂತೆ ನೆರಿಗೆಗಳು ವಿನ್ಯಾಸಗೊಳ್ಳುತ್ತವೆ. ಸಾಮಾನ್ಯವಾಗಿ ಶಿಫಾನ್‌, ಕ್ರೇಪ್‌ ಹಾಗೂ ಜಾರ್ಜೆಟ್‌ ಬಗೆಯ ಸೀರೆ ಪಾರ್ಸಿ ಜನರಿಗೆ ಅಚ್ಚುಮೆಚ್ಚು.

ಮದಿಸರು: ತಮಿಳು ನಾಡಿನ ಮಹಿಳೆಯರ ಸಾಂಪ್ರದಾಯಿಕ ತೊಡುಗೆ. ಅಯ್ಯರ್‌ ಹಾಗೂ ಅಯ್ಯಂಗಾರ್‌ ಮಹಿಳೆಯರು ವಿಶೇಷವಾಗಿ ಮದುವೆ-ಮುಂಜಿ ಮುಂತಾದ ಸಂದರ್ಭಗಳಲ್ಲಿ ಈ ರೀತಿಯಲ್ಲೇ ಸೀರೆ ಉಡುತ್ತಾರೆ.ಮದಿಸಾರ್‌ ಎಂಬ ಬಟ್ಟೆಯಿಂದ ತಯಾರಿಸಿದ ಸೀರೆಯ ಬಳಕೆ ಅಧಿಕ.

ಸರಗುಜಾ: ಛತ್ತೀಸ್‌ಗಡದ ಮಹಿಳೆಯರು ನವೀನ ವಿಧಾನದಲ್ಲಿ ಸರಗುಜಾ ಎಂಬ ಸೀರೆಯ ಶೈಲಿಯನ್ನು ಸಾಂಪ್ರದಾಯಿಕವಾಗಿ ತೊಡುತ್ತಾರೆ.

ಔರಾನ್‌ ಜನಾಂಗದ, ನೃತ್ಯಕ್ಕಾಗಿ ಮಹಿಳೆಯರು 5.3 ಯಾರ್ಡ್‌ ಉದ್ದದ ಈ ಸೀರೆಯನ್ನು ವಿಶೇಷ ರೀತಿಯಲ್ಲಿ ಉಡುತ್ತಾರೆ. ಚಾಂದೇರಿ ಸಿಲ್ಕ್ ಸೀರೆ ಈ ಬಗೆಯ ಸಾಂಪ್ರದಾಯಿಕ ಸೀರೆಯ ವೈವಿಧ್ಯವನ್ನು ಅಧಿಕಗೊಳಿಸುತ್ತದೆ. ನಮಗೆ ನವೀನ ವಿಧದಲ್ಲಿ ಸೀರೆ ಉಡಬೇಕೆಂದರೆ ಛತ್ತೀಸ್‌ಗಢದ ಈ ಸಾಂಪ್ರದಾಯಿಕ ಸೀರೆ ಆಯ್ದುಕೊಳ್ಳಬಹುದು.

ನಂಬೂದಿರಿ ಮಹಿಳೆಯರು ಕೇರಳದಲ್ಲಿ ವಿಶಿಷ್ಟ ರೀತಿಯಲ್ಲಿ ಮುಂಡುಂ ಮತ್ತು ನೆರಿಯಾತ್ತಮ್‌ ಎಂಬ ಎರಡು ಭಾಗಗಳ ವಸ್ತ್ರಗಳೊಂದಿಗೆ ಸಾಂಪ್ರದಾಯಿಕವಾಗಿ ಸೀರೆ ಉಡುತ್ತಾರೆ. ಜಾರ್ಖಂಡ್‌ನ‌ ಮಹಿಳೆಯರು ಸಂತಲ್‌ ವಿಧಾನದಲ್ಲಿ ಸಾಂಪ್ರದಾಯಿಕವಾಗಿ ಸೀರೆ ಉಡುತ್ತಾರೆ.

ಬೂತೆಯಾರ ಎಂಬ ಕರ್ನಾಟಕದ ಬುಡಕಟ್ಟು ಜನಾಂಗದವರು 8 ಯಾರ್ಡ್‌ ಉದ್ದದ ಸೀರೆಯನ್ನು ವಿಶೇಷ ರೀತಿಯಲ್ಲಿ ಉಡುತ್ತಾರೆ. ಕೆಳಗಿನ ಭಾಗದಲ್ಲಿ ಸೀರೆಗೆ “ಮೊಳಕಟ್ಟು’ ಎಂದು ಗಂಟುಹಾಕಿರುತ್ತಾರೆ. ಹೀಗೆ ಭಾರತೀಯ ನಾರಿಯರ ವಸ್ತ್ರವೀಚಿ ವೈಭವ ಪಾರಂಪರಿಕ ಮಹತ್ವವನ್ನು ಸಾರಿ ಹೇಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next