ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಗಳಿಸಿದರೆ ಎರಡೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ನ್ಯಾಯ ಒದಗಿಸಿಕೊಡುವ ಮೂಲಕ ರಾಜಧರ್ಮಕ್ಕೆ ತಕ್ಕಂತೆ ನಡೆದುಕೊಳ್ಳುವುದಾಗಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ರಾತ್ರಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಏ.18 ರವರೆಗೆ ಒಟ್ಟಾಗಿ ಕೆಲಸ ಮಾಡುವ ಮೂಲಕ ತಮ್ಮನ್ನು ಆಯ್ಕೆ ಮಾಡಿದರೆ ನಂತರದ ದಿನಗಳಲ್ಲಿ ಈ ಜಿಲ್ಲೆಗೆ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳನ್ನು ದೆಹಲಿ ಮತ್ತು ಬೆಂಗಳೂರು ಮಟ್ಟದಲ್ಲಿ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಜನತಾದಳ ಚಿಹ್ನೆಯಡಿ ಗೆಲುವು ಸಾಧಿಸಿದರೆ ಯಾವ ಪಕ್ಷಕ್ಕೆ ಹೆಚ್ಚು ಕೆಲಸ ಮಾಡಿ ಕೊಡಲಾಗುತ್ತದೆ ಎಂಬ ಗೊಂದಲ ಬೇಡ ಎನ್ನುತ್ತಿದ್ದಂತೆ ಕಾಂಗ್ರೆಸ್ಸಿಗೆ ಸ್ವಲ್ಪ ಹೆಚ್ಚು ಕೆಲಸ ಮಾಡಿಕೊಟ್ಟರೆ ಚಿಂತೆಯಿಲ್ಲವೆಂದು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಹೇಳಿದರು. ಆಗ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಕಾಂಗ್ರೆಸ್ ಮುಖಂಡರೊಬ್ಬರು ಜನತಾದಳ ಚಿಹ್ನೆಯಡಿ ಸ್ಪರ್ಧಿಸುತ್ತಿರುವುದು ದೇಶದಲ್ಲಿಯೆ ಹೊಸ ಪ್ರಯೋಗ. ಇದು
ಒಂದು ದಾಖಲೆಯಾಗಿ ಉಳಿಯಲಿದೆ. ದಳದ ಮುಖಂಡರು ಹೃದಯ ವೈಶಾಲ್ಯದಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ
ಮಾಡಿದ್ದಾರೆಂದು ತಿಳಿಸಿ, ಗೆಲುವಿಗಾಗಿ ಎರಡೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ದುಡಿಯುವಂತೆ ಮನವಿ ಮಾಡಿದರು.
ಈ ರೀತಿ ಸ್ಪರ್ಧೆ ಮಾಡುತ್ತೇನೆಂದು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಇದು ದೇವರ ಸಂಕಲ್ಪವಾಗಿದೆ. ಮೈತ್ರಿ
ಅಭ್ಯರ್ಥಿಯಾಗಿ ತಾವು ಕಣಕ್ಕಿಳಿಯುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ನಡುಕ ಉಂಟಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ತಾವಲ್ಲ ಮೋದಿ ಎಂಬಂತೆ ಬಿಂಬಿಸಿಕೊಳ್ಳುತ್ತಾ ಅವರ ಹೆಸರಿನಲ್ಲಿ ಮತ
ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|ಡಿ.ಎಲ್.ವಿಜಯ್ ಕುಮಾರ್, ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ಭಿನ್ನಾಭಿಪ್ರಾಯ ಬದಿಗಿಟ್ಟು ಮೈತ್ರಿ ಅಭ್ಯರ್ಥಿ ಗೆಲುವಿಗೆ ಮುಖಂಡರು ಕಾರ್ಯಕರ್ತರು ಕೈಜೋಡಿಸಬೇಕು ಎಂದರು.
ಮಾಜಿ ಸಚಿವ ಸಿ.ಆರ್.ಸಗೀರ್ ಅಹಮ್ಮದ್ ಮಾತನಾಡಿ, ಎರಡು ಪಕ್ಷದವರು ಒಂದಾಗಿ ಮತದಾರರ ಮನ ಗೆಲ್ಲಬೇಕಿದೆ
ಎಂದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್ .ದೇವರಾಜ್, ಶಾಸಕ ಟಿ.ಡಿ.ರಾಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿದರು. ಎಸ್. ಎಲ್.ಭೋಜೇಗೌಡ, ಎಂ.ಎಲ್.ಮೂರ್ತಿ, ಎಚ್.ಎಂ.ಸತೀಶ್, ಎ.ಎನ್.ಮಹೇಶ್, ಶಿವಾನಂದಸ್ವಾಮಿ, ಎಚ್.ಬಿ.ಮಂಜೇಗೌಡ, ಡಿ.ಎಲ್.ವಸಂತಕುಮಾರಿ, ಹೂವಪ್ಪ, ಅಕ್ಮಲ್, ಎಪಿಎಂಸಿ ಅಧ್ಯಕ್ಷ ಪ್ರಕಾಶ್, ರೂಬಿನ್ ಮೊಸೆಸ್, ಯುವ ಕಾಂಗ್ರೆಸ್ ಮುಖಂಡರಾದ ಶಿವಕುಮಾರ್, ಆದಿಲ್, ಜನತಾದಳ ಮುಖಂಡರಾದ ಮಂಜಪ್ಪ, ಭೆ„ರೇಗೌಡ ಇದ್ದರು.
ಕ್ಷೇತ್ರಕ್ಕೆ ಶೋಭಾ ಕೊಡುಗೆ ಶೂನ್ಯ
ತರೀಕೆರೆ: ಕೋಮುವಾದಿ ಶಕ್ತಿ ರಾಷ್ಟ್ರದಲ್ಲಿ ದೂರವಿಡಲು ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಎಂದು
ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಪಟ್ಟಣದ ತುಂಗಭದ್ರಾ ಶಾಲೆಯ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಎರಡು ಪಕ್ಷದ ಮುಖಂಡರ ಆಶಯದಿಂದ ಸ್ಪರ್ಧಿಸುತ್ತಿದ್ದೇನೆ.
ಕಾಂಗ್ರೆಸ್ ಪಕ್ಷದ ಶಾಸಕನಾಗಿ, ಮಂತ್ರಿಯಾಗಿ ಮತ್ತು ಸಂಸದೀಯ ಕಾರ್ಯದರ್ಶಿಯಾಗಿ ಉಡುಪಿ ಕ್ಷೇತ್ರದಲ್ಲಿ 2000
ಕೋಟಿ ರೂ.ಗಳ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು. ಲೋಕಸಭಾ ಚುನಾವಣೆಯು ಪ್ರಮೋದ್ ಮಧ್ವರಾಜ್ ಮತ್ತು ಬಿಜೆಪಿಯ ಅಭ್ಯರ್ಥಿಯ ಜೊತೆಯಲ್ಲಿಯೇ ಹೊರತು ಪ್ರಧಾನಿ ನರೇಂದ್ರ ಮೋದಿಯ ನಡುವೆಯಲ್ಲ. ಶೋಭಾ ಕರಂದ್ಲಾಜೆ ಸಂಸದೆಯಾಗಿ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎನ್ನುವುದು ಮತದಾರರಿಗೆ ತಿಳಿದಿದೆ. ಕಳೆದ 5 ವರ್ಷಗಳ ಕಾಲ ನಾಪತ್ತೆಯಾಗಿದ್ದ ಸಂಸದರು, ಇದೀಗ ದಿಢೀರ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೇಂದ್ರದಲ್ಲಿ ತಮ್ಮದೇ ಸರಕಾರ ಅಧಿಕಾರದಲ್ಲಿದ್ದರೂ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ ಎಂದರು.
ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮಾತನಾಡಿ, ಪ್ರಮೋದ್ ಮಧ್ವರಾಜ್ ಸ್ಪರ್ಧಿಸಿರುವುದು ಒಳ್ಳೆಯ ಬೆಳವಣಿಗೆ. ಜನತಾದಳದ ಚಿನ್ಹೆಯಡಿಯಲ್ಲಿ ಸರ್ಧಿಸುತ್ತಿದ್ದರು ಸಹ ಮೂಲತಃ ಕಾಂಗ್ರೆಸಿಗರು. ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಅವರ ಗೆಲುವಿಗಾಗಿ ಶ್ರಮಿಸಬೇಕು. ಜಿಲ್ಲೆಯ ಕೆಲವು ನಾಯಕರಿಂದ ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡುವಂತಾಗಿದೆ ಅದನ್ನು ಸರಿಪಡಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|ಡಿ.ಎಲ್.ವಿಜಯಕುಮಾರ್, ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ, ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಗುಳ್ಳದಮನೆ ರಾಮಚಂದ್ರಪ್ಪ, ಜಿ.ಎಚ್.ಶ್ರೀನಿವಾಸ್, ಟಿ.ವಿ.ಶಿವಶಂಕರಪ್ಪ, ಕಾಂಗ್ರೆಸ್ ವೀಕ್ಷಕಿ ಸ್ವಪ್ನಾ ಹರೀಶ್,
ಸಂತೋಷ್ ಹಾಗೂ ಮುಖಂಡರು, ಕಾರ್ಯಕರ್ತರು ಇದ್ದರು.
ಬಿಜೆಪಿ ಕೈಲಿ ಈ ಕ್ಷೇತ್ರ ಸಿಕ್ಕಿ ಜನರು ನಲುಗುವಂತಾಗಿದೆ. ಅವರ ಕಪಿಮುಷ್ಟಿಯಿಂದ ಕ್ಷೇತ್ರವನ್ನು ಪಾರು ಮಾಡಲು ಜೆಡಿಎಸ್ ಮತ್ತು ಕಾಂಗ್ರೆಸ್ಸಿಗೆ ಸುವರ್ಣಾವಕಾಶ ಲಭಿಸಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳೋಣ ಎಸ್.ಎಲ್.ಧರ್ಮೇಗೌಡ, ವಿಧಾನ ಪರಿಷತ್ ಉಪಸಭಾಪತಿ