Advertisement

ಕೈಗಾರಿಕೆಗಳಿಗೆ ಮೂಲಸೌಕರ್ಯ ಒದಗಣೆ ಮೊದಲ ಆದ್ಯತೆಯಾಗಲಿ

11:10 PM Sep 09, 2021 | Team Udayavani |

ರಾಜ್ಯದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ರಾಜ್ಯ ಸರಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ವಿವಿಧ ಖಾಸಗಿ ಕಂಪೆನಿಗಳು ಮತ್ತು ಉದ್ಯಮಿಗಳಿಗೆ ತನ್ನ ಸುಪರ್ದಿಯಲ್ಲಿರುವ ಕೈಗಾರಿಕಾ ಬಡಾವಣೆಗಳಲ್ಲಿ ಜಮೀನುಗಳನ್ನು ಹಂಚಿಕೆ ಮಾಡುತ್ತಾ ಬಂದಿದೆ. ಕೈಗಾರಿಕೆಗಳನ್ನು ಸ್ಥಾಪಿಸಲು ಆಸಕ್ತಿ ತೋರುವ ಉದ್ಯಮಿಗಳಿಗೆ ಈ ಜಮೀನುಗಳನ್ನು ರಿಯಾಯಿತಿ ಬೆಲೆಯಲ್ಲಿ ನೀಡುತ್ತಿದೆ. ಹೀಗೆ ಪಡೆದ ಜಮೀನುಗಳಲ್ಲಿ ನಿರ್ದಿಷ್ಟ ಅವಧಿಯೊಳಗಾಗಿ ಉದ್ದೇಶಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬ ಪೂರ್ವ ಷರತ್ತನ್ನು ಮಂಡಳಿ ವಿಧಿಸುತ್ತದೆಯಾದರೂ ಎಲ್ಲರೂ ಇದನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ಕೈಗಾರಿಕ ಜಮೀನುಗಳು ಪಾಳು ಬೀಳುವಂತಾಗಿದೆಯಲ್ಲದೆ ಜಮೀನಿನ ತಲಾಶೆಯಲ್ಲಿರುವ ಇತರ ಉದ್ಯಮಿಗಳು ಮತ್ತು ಕಂಪೆನಿಗಳಿಗೆ ಈ ಜಮೀನನ್ನು ಹಂಚಿಕೆ ಮಾಡಲು ಕೆಐಎಡಿಬಿಗೆ ಸಾಧ್ಯವಾಗುತ್ತಿಲ್ಲ.

Advertisement

ಈ ಸಮಸ್ಯೆಗೆ ಶಾಶ್ವತ ಪರಿಹಾರ ‌ಕಂಡುಕೊಳ್ಳಲು  ಸರಕಾರ ಮುಂದಾಗಿದೆ. ಕೈಗಾರಿಕೆಗಳ ಸ್ಥಾಪನೆಗಾಗಿ ಕೆಐಎಡಿಬಿಯಿಂದ ಜಮೀನನ್ನು ಪಡೆದು ಕೈಗಾರಿಕೆಗಳ ಸ್ಥಾಪನೆಗೆ ವಿಧಿಸಿದ್ದ ನಿರ್ದಿಷ್ಟ ಅವಧಿ ಮುಗಿದಿದ್ದರೂ ಇನ್ನೂ ಆ ಜಮೀನಿನಲ್ಲಿ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸದೇ ಇದ್ದಲ್ಲಿ ಮತ್ತು ಕೈಗಾರಿಕೆಗಳ ಸ್ಥಾಪನೆಯ ಕಾಮಗಾರಿ ಅರೆಬರೆಯಾಗಿದ್ದಲ್ಲಿ ಇಂಥ ಉದ್ಯಮಿಗಳು ಮತ್ತು ಕಂಪೆನಿಗಳಿಗೆ ನೋಟಿಸ್‌ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಸಂಬಂಧ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ ಪಾಳು ಬಿದ್ದಿ ರುವ ಕೆಐಎಡಿಬಿ ಜಮೀನುಗಳ ವಿವರವಾದ ಮಾಹಿತಿ ಕಲೆ ಹಾಕಲಿದೆ. ಈಗಾಗಲೇ ನೋಟಿಸ್‌ ನೀಡಿಕೆ ಪ್ರಕ್ರಿಯೆಯನ್ನು ಆರಂಭಿಸಿರುವ ಸರಕಾರ ಜಮೀನುಗಳನ್ನು ಪಾಳು ಬಿಟ್ಟಿರುವ ಉದ್ಯಮಿಗಳು ಅಥವಾ ಸಂಬಂಧಿತ ಕಂಪೆನಿಗಳಿಂದ ಈ ಬಗ್ಗೆ ಸ್ಪಷ್ಟನೆ ಕೋರಿದೆ. 15 ದಿನಗಳಲ್ಲಿ ನೋಟಿಸ್‌ಗೆ ಸಮರ್ಪಕ ಉತ್ತರ ನೀಡದೇ ಹೋದಲ್ಲಿ ಈ ಜಮೀನುಗಳನ್ನು ಕೆಐಎಡಿಬಿ ಮತ್ತೂಂದು ನೋಟಿಸ್‌ ನೀಡಿ ವಾಪಸ್‌ ಪಡೆಯಲಿದೆ.

ಹಿಂದೆಯೂ ಇಂಥ ಪ್ರಕ್ರಿಯೆಗಳು ನಡೆದಿದ್ದವಾದರೂ ನಿರೀಕ್ಷಿತ ಫ‌ಲ ಲಭಿಸಿರಲಿಲ್ಲ. ಕೆಐ ಎಡಿಬಿಯು ಕೇವಲ ಜಮೀನು ಹರಾಜು, ಹಂಚಿಕೆ, ಮಾರಾಟ ಪ್ರಕ್ರಿಯೆಗೆ ಮಾತ್ರವೇ ಆಸಕ್ತಿ ತೋರುತ್ತಿದೆಯೇ ವಿನಾ ಈ ಬಡಾವಣೆಗಳಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು  ಕ್ರಮ ಕೈಗೊಳ್ಳದಿರುವುದರಿಂದ  ಉದ್ಯಮಿಗಳು ಈ ಜಮೀನು ಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಆಸಕ್ತಿ ತೋರದಿರುವ ಹಲವಾರು ನಿದರ್ಶನಗಳು ರಾಜ್ಯದಲ್ಲಿವೆ. ಇಂಥ ಸನ್ನಿವೇಶದಲ್ಲಿ ಸರಕಾರ ಕೇವಲ ಉದ್ಯಮಿಗಳನ್ನು ದೂಷಿಸಿ ಪ್ರಯೋಜನವಿಲ್ಲ. ಹೀಗಾಗಿ ಕೆಐಎಡಿಬಿ ಮೂಲಸೌಕರ್ಯಗಳ ಒದಗಣೆಯತ್ತ ಲಕ್ಷ್ಯ ಹರಿಸುವುದು ಅತ್ಯಗತ್ಯ. ಅಷ್ಟು ಮಾತ್ರವಲ್ಲದೆ ಸದ್ಯ ಉದ್ಯಮಿಗಳು ಆರ್ಥಿಕ ಅಡಚಣೆಯಲ್ಲಿರುವುದರಿಂದ ಸರಕಾರ ಕೈಗಾರಿ ಕೆಗಳ ಸ್ಥಾಪನೆಗೆ ಒಂದಿಷ್ಟು ಕಾಲಾವಕಾಶ ನೀಡುವ ಔದಾರ್ಯ ತೋರಬೇಕಿದೆ. ಪ್ರಸಕ್ತ ಸಾಲಿನ ಮೊದಲ ತ್ತೈಮಾಸಿಕದಲ್ಲಿ ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿರುವುದು ಆಶಾದಾಯಕ ಬೆಳವಣಿಗೆೆ. ಸರಕಾರ ವರ್ಷಾಂತ್ಯದಲ್ಲಿ “ಇನ್ವೆಸ್ಟ್‌ ಕರ್ನಾಟಕ’ ಆಯೋಜಿಸಲು ನಿರ್ಧರಿಸಿದೆ. ಸರಕಾರದ ಈ ಎಲ್ಲ ತೀರ್ಮಾನಗಳು ರಾಜ್ಯವನ್ನು ಕೈಗಾರಿಕಾ ಕ್ಷೇತ್ರದಲ್ಲಿ ಇನ್ನಷ್ಟು ಮುಂಚೂಣಿಗೆ ತರುವಲ್ಲಿ ಸಹಕಾರಿಯಾಗಲಿದೆ. ಇವೆಲ್ಲದರ ಜತೆಯಲ್ಲಿ ಸರಕಾರ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next