ಕೋಲಾರ: ಜಿಲ್ಲೆಯನ್ನು ಬರ ಕಾಡುತ್ತಿದೆ, ಜನ, ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಒದಗಿಸಲು ಅನುದಾನದ ಕೊರತೆಯಿಲ್ಲ, ಜಿಪುಣತನ ಮಾಡದೇ ಪೂರೈಕೆ ಮಾಡಬೇಕು ಎಂದು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಂಬಂಧ ಹಮ್ಮಿಕೊಂಡಿದ್ದ ಬರ ನಿರ್ವಹಣೆ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದೆ. ಕುಡಿಯುವ ನೀರು ಸಂಬಂಧ ದೂರು ಬಂದ 24 ಗಂಟೆಗಳಲ್ಲಿ ಕ್ರಮವಹಿಸಬೇಕು. ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಅದನ್ನು ಬಳಕೆ ಮಾಡಿಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಸಲಹೆ ನೀಡಿದರು.
ಟ್ಯಾಂಕರ್ ನೀರು ಪೂರೈಕೆ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ 113 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 74 ಹಳ್ಳಿಗೆ ಟ್ಯಾಂಕರ್ ಮೂಲಕ ಪ್ರತಿ ದಿನ 198 ಹಾಗೂ 39 ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದವರಿಗೆ 15 ದಿನಕ್ಕೊಮ್ಮೆ ಬಿಲ್ ಪಾವತಿ ಮಾಡಲಾಗುತ್ತಿದೆ. ಹೊಸದಾಗಿ ಕೊಳವೆಬಾವಿ ಕೊರೆಸಲು ನೀರಿನ ಇಳುವರಿ ದೊರೆಯುತ್ತಿಲ್ಲ. ಇದರಿಂದ ಆದ್ಯತೆ ಮೇರೆಗೆ ಕೊರೆಸಲಾಗುತ್ತಿದೆ ಎಂದು ವಿವರಿಸಿದರು.
15 ದಿನಕ್ಕೊಮ್ಮೆ ಪಾವತಿಸಿ: 2018ರ ಅಕ್ಟೋಬರ್ ತಿಂಗಳಿಂದ 379 ಕೊಳವೆಬಾವಿ ಕೊರೆಸಿದ್ದು, ಆ ಪೈಕಿ 262 ಸಫಲವಾಗಿದೆ. ಅದೇ ರೀತಿ 20198ರ ಮಾರ್ಚ್‌ನಿಂದ 213 ಕೊಳವೆಬಾವಿ ಕೊರೆಸಿದ್ದು, ಆ ಪೈಕಿ 136ರಲ್ಲಿ ನೀರು ಲಭ್ಯವಾಗಿದ್ದು, 102 ಚಾಲ್ತಿಯಲಿವೆ ಎಂದು ಮಾಹಿತಿ ನೀಡಿದರು. ಹಿಂದೆ ಖಾಸಗಿ ಟ್ಯಾಂಕರ್‌ಗಳವರು ಸಕಾಲಕ್ಕೆ ಬಿಲ್ ನೀಡದೇ, ಒಂದೇ ಬಾರಿ ಕೋಟ್ಯಂತರ ರೂ. ಪಾವತಿ ಮಾಡಲಾಗಿದೆ. ಇದಕ್ಕೆ ಅವಕಾಶ ನೀಡದೆ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಪಾವತಿ ಮಾಡಬೇಕು ಎಂದು ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.
ಸಕಾಲಕ್ಕೆ ಬಿಲ್ ನೀಡದ ಹಿನ್ನೆಲೆಯಲ್ಲಿ ಬೋಗಸ್ ಬಿಲ್ ನೀಡಲು ಅವಕಾಶ ನೀಡದಂತಾಗುತ್ತದೆ. ನೀರು ಸೋರಿಕೆ ಮಾಡಿಯೂ ಬಿಲ್ ನೀಡುತ್ತಾರೆ. ಈ ಬಾರಿ 15 ದಿನದೊಳಗೆ ಬಿಲ್ ನೀಡದಿದ್ದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
70 ಕೋಟಿ ರೂ.: ಜಿಪಂ ಸಿಇಒ ಜಿ.ಜಗದೀಶ್ ಮಾತನಾಡಿ, ನರೇಗಾ ಯೋಜನೆಯಡಿ ಈ ಬಾರಿ 22 ಲಕ್ಷ ಮಾನವ ದಿನ ಗುರಿ ಹೊಂದಲಾಗಿತ್ತು. ಆದರೆ, ಅದು ನಿರೀಕ್ಷೆಗೂ ಮೀರಿ 40 ಲಕ್ಷ ಆಗಿದ್ದು, 70 ಕೋಟಿ ರೂ. ಹಂಚಿಕೆಯಾಗಿದೆ ಎಂದು ತಿಳಿಸಿದರು.
ಬರದ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ರೈತರಿಗೆ ಕೆಲಸ ನೀಡಲು ಕೆರೆಗಳಲ್ಲಿ ಹೂಳು ತೆಗೆಯುವ ಯೋಜನೆ ಹಾಕಿಕೊಂಡಿದ್ದು, ಪ್ರತಿ ದಿನ ಕೆಲಸ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ರೇಷ್ಮೆ ಇಲಾಖೆ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದ ಸಚಿವರು, ಇತರ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ ಎಂದರು.
ಅಂತರ್ಜಲಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ 1000 ಚೆಕ್ ಡ್ಯಾಂ ನಿರ್ಮಾಣದ ಗುರಿ ಹೊಂದಿದ್ದು, ಆದರಲ್ಲಿ 300 ಪೂರ್ಣಗೊಂಡಿದೆ. 400 ಪ್ರಗತಿಯಲಿದೆ ಎಂದರು.
ಎಡೀಸಿ ಪುಷ್ಪಲತಾ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.