ಹನೂರು: ರಾಜ್ಯದ ಗಡಿಯಂಚಿನ ಕಂಬಿಗುಡ್ಡ ಮತ್ತು ಅರೆಕಡುವಿನ ದೊಡ್ಡಿ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜ್ಯದ ಗಡಿ ಗ್ರಾಮ ಪಂಚಾಯ್ತಿಯಾದ ಬೈಲೂರು ವ್ಯಾಪ್ತಿಗೆ ಒಳಪಡುವ ಕಂಬಿಗುಡ್ಡ ಮತ್ತು ಅರೆಕಡುವಿನ ದೊಡ್ಡಿ ಗ್ರಾಮಗಳು ಕೊಳ್ಳೇಗಾಲ -ಹಸನೂರು ಘಾಟ್ ಮುಖ್ಯ ರಸ್ತೆಯಿಂದ ಸುಮಾರು5 ಕಿ.ಮೀ ದೂರವಿದೆ. ಗ್ರಾಮ ಪಂಚಾಯ್ತಿ ಕೇಂದ್ರಸ್ಥಾನ ಬೈಲೂರಿನಿಂದ 3 ಕಿ.ಮೀ ಅಂತರವಿದೆ. ಇಲ್ಲಿನ ಗ್ರಾಮಸ್ಥರು ದೈನಂದಿನ ಚಟುವಟಿಕೆಗಳಿಗಾಗಿ ಮತ್ತು ಶಾಲಾ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ನಡೆದುಕೊಂಡೇ ಬರಬೇಕಾದ ಪರಿಸ್ಥಿತಿಯಿದೆ.
ವನ್ಯಜೀವಿಗಳ ಹಾವಳಿ: ಕಂಬಿಗುಡ್ಡ ಮತ್ತು ಅರೆಕಡುವಿನ ದೊಡ್ಡಿ ಗ್ರಾಮಗಳಿಂದ ಸುಮಾರು 20ಕ್ಕೂ ಹೆಚ್ಚು ಗಿರಿಜನ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ನಡುದುಕೊಂಡೇ ಹೋಗಬೇಕಿದೆ. ಈ ಗ್ರಾಮಗಳು ಕರ್ನಾಟಕ ಮತ್ತು ತಮಿಳುನಾಡನ್ನು ಬೇರ್ಪಡಿಸುವ ಗಡಿಗ್ರಾಮಗಳಾಗಿದ್ದು ಸುತ್ತಲೂ ದಟ್ಟ ಅರಣ್ಯದಿಂದ ಕೂಡಿದೆ. ಈ ವಿದ್ಯಾರ್ಥಿಗಳು ಶಾಲೆಗೆ ತೆರಳು ವೇಳೆಹಲವಾರು ಬಾರಿ ಕಾಡುಹಂದಿಗಳು, ಕಾಡಾನೆ ಸೇರಿದಂತೆ ಹಲವಾರು ವನ್ಯಜೀವಿಗಳು ಪ್ರತ್ಯಕ್ಷವಾಗಿವೆ.
ಅಲ್ಲದೆ, ಹಲವಾರು ಬಾರಿ ಜಮೀನುಗಳಿಂದ ಹಂದಿಗಳು ಓಡಾಡುವುದನ್ನು ಕಂಡು ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಸಂಜೆಯಾಗುತ್ತಲೇ ಕಾಯಬೇಕಾದ ಪರಿಸ್ಥಿತಿ: ಈ ಎರಡೂ ಗ್ರಾಮಗಳ ಗ್ರಾಮಸ್ಥರು ಯಾರಾದರೂ ವೈದ್ಯಕೀಯ ತಪಾಸಣೆಗೆ, ಸಂಬಂಧಿಕರ ಮನೆಗಳಿಗೆ, ಇನ್ನಿತರೆ ಕೆಲಸ ಕಾರ್ಯಗಳಿಗೇನಾದರೂ ತೆರಳಿದರೆ ಸಂಜೆಯಾಗುತ್ತಲೇ ಸಂಜೆ ವೇಳೆಗೆ ಆಗಮಿಸುವ ಬಸ್ಸು ಬೈಲೂರು ತಲುಪಿದ ಬಳಿಕ ಆ ಬಸ್ಸಿನಲ್ಲಿ ಬಂದವರನ್ನು ಕರೆದುಕೊಂಡು ಗ್ರಾಮಗಳತ್ತ ತೆರಳಲು ಮತ್ತೂಬ್ಬರು ಕಾಯಬೇಕಾದ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಗ್ರಾಮಸ್ಥರು ವನ್ಯಜೀವಿಗಳ ದಾಳಿಯ ಭೀತಿಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ.
ಈ ಹಿನ್ನೆಲೆ ಬೈಲೂರು ಗ್ರಾಮದವರೆಗೆ ಆಗಮಿಸುವ ಬಸ್ಸನ್ನೇ ಬೆಳಗ್ಗೆ ಒಂದು ಬಾರಿ ಸಂಜೆ ಒಂದು ಬಾರಿ ಕಂಬಿಗುಡ್ಡ ಗ್ರಾಮದವರೆಗೆ ವಿಸ್ತರಿಸಿದಲ್ಲಿ ಈ ಭಾಗದ ಜನರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅರೆಕಡುವಿನದೊಡ್ಡಿ ಮತ್ತು ಕಂಬಿಗುಡ್ಡ ಗ್ರಾಮಗಳ ರಸ್ತೆಯು ಉತ್ತಮ ಸ್ಥಿತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ನಿರ್ಮಾಣವಾಗಿದೆ. ಆದ್ದರಿಂದ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಬೆಳಗ್ಗೆ ಶಾಲಾ ಪ್ರಾರಂಭವಾಗುವ ವೇಳೆಗೆಮತ್ತು ಸಂಜೆಯ ವೇಳೆಗೆ ಒಮ್ಮೆ ಕಂಬಿಗುಡ್ಡದವರೆಗೆ ಬಸ್ ಸೌಲಭ್ಯ ವಿಸ್ತರಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ
. –ಮಾದೇಗೌಡ, ಗ್ರಾಮ ಪಂಚಾಯ್ತಿ ಸದಸ್ಯ