Advertisement

ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿ

11:41 AM Jun 19, 2018 | |

ಸಾಗರ/ಶಿವಮೊಗ್ಗ: ಪ್ರಸಿದ್ಧ ಪ್ರವಾಸಿ ತಾಣ ಜೋಗದಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಹಾಗೂ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಲೋಕೇಶ್‌, ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಸೋಮವಾರ ಜೋಗ ಜಲಪಾತ ತಾಣಕ್ಕೆ ಭೇಟಿ ನೀಡಿದ ಅವರು ಜೋಗ ನಿರ್ವಹಣಾ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ ಪ್ರವಾಸಿಗರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.

ಪ್ರವಾಸಿಗರ ವಾಹನಗಳಿಗೆ ಈಗಾಗಲೇ ಸೂಕ್ತ ತಂಗುದಾಣ ನಿರ್ಮಿಸಲಾಗಿದೆ. ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳು ಪ್ರತ್ಯೇಕ ಸ್ಥಳಗಳಲ್ಲಿ ಪಾರ್ಕಿಂಗ್‌ ಮಾಡುವಂತೆ ನೋಡಿಕೊಳ್ಳಬೇಕು. ಈ ಸ್ಥಳವನ್ನು ಸಮರ್ಪಕವಾಗಿ
ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು. ಜೋಗ ಪರಿಸರವನ್ನು ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತಗೊಳಿಸಲು ಹಲವು ಬಾರಿ ಸೂಚನೆ ನೀಡಲಾಗಿದೆ.

ಆದರೂ ಪ್ರವಾಸಿಗರು ಪ್ಲಾಸ್ಟಿಕ್‌ ತ್ಯಾಜ್ಯ ಹಾಕುತ್ತಿರುವುದು ಕಂಡು ಬಂದಿದೆ. ಜೋಗ ಸುತ್ತಮುತ್ತಲಿನ ಪ್ರದೇಶದಲ್ಲಿ,
ಶೌಚಾಲಯ ಬಳಿ, ತೂಗು ಸೇತುವೆ ಬಳಿ, ಪ್ರವಾಸಿಗರ ಪಾದಚಾರಿ ಮಾರ್ಗ, ಜೋಗ ವೀಕ್ಷಣಾಲಯದ ರಸ್ತೆಯ
ಅಕ್ಕಪಕ್ಕದಲ್ಲಿರುವ ಅನುಪಯುಕ್ತ ತ್ಯಾಜ್ಯಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಪ್ಲಾಸ್ಟಿಕ್‌ ಸೇರಿದಂತೆ ಪರಿಸರಕ್ಕೆ
ಹಾನಿಕಾರಕ ವಸ್ತುಗಳನ್ನು ಎಸೆಯದಂತೆ ಪ್ರವಾಸಿಗರಿಗೆ ನಿರಂತರ ಸೂಚನೆ ನೀಡಲು ವ್ಯವಸ್ಥೆ ಮಾಡಬೇಕು.
ಇದನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಉಪವಿಭಾಗಾಧಿಕಾರಿಗೆ ತಿಳಿಸಿದರು.

ಪ್ರಸ್ತುತ ಮೂರು ತಿಂಗಳ ಅವಧಿಯಲ್ಲಿ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ನಿಗಾ ವಹಿಸಬೇಕು. ಯಾವುದೇ ಅವಘಡ ಸಂಭವಿಸಿದಂತೆ ಮುನ್ನಚ್ಚರಿಕೆ ಹಾಗೂ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದರು. 

Advertisement

ಪ್ರವಾಸಿಗರಿಗೆ ಜಿಲ್ಲೆಯ ಇತರ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಜೋಗ್‌ ಪ್ರದೇಶದಲ್ಲಿ
ಅಳವಡಿಸಬೇಕು. ಜೋಗ್‌ನ ಕೆಳಭಾಗಕ್ಕೆ ತೆರಳಲು ಇರುವ ಮೆಟ್ಟಿಲುಗಳನ್ನು ಸ್ವಚ್ಚವಾಗಿಡುವಂತೆ ಪ್ರವಾಸೋದ್ಯಮ
ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು. 

ಜೋಗ್‌ಗೆ ಸೇರುವ ರಸ್ತೆಯ ಮಾರ್ಗ ಮಧ್ಯದಲ್ಲಿ ಮಳೆಗೆ ಗುಡ್ಡದ ಮಣ್ಣು ಕುಸಿದು ಬಿದ್ದು, ಕೆಲವು ಮರ ಸಹ ಬಿದ್ದಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಣ್ಣು ಕುಸಿತ ಸಾಧ್ಯತೆ ಇದೆ. ಈಗಾಗಲೇ ಬಿದ್ದ ಮಣ್ಣು ಹಾಗೂ ಮರಗಳನ್ನು ತೆರವುಗೊಳಿಸಬೇಕು ಹಾಗೂ ಬೀಳುವ ಸಾಧ್ಯತೆ ಇರುವ ಮರಗಳನ್ನು ಸಹ ತೆಗೆಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಾಗರ ಉಪವಿಭಾಗಾಧಿಕಾರಿ ನಾಗರಾಜ ಸಿಂಗ್ರೇರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮದ್ಯಪಾನ ಹಾಗೂ ಧೂಮಪಾನ ವಿರುದ್ಧ ಎಚ್ಚರಿಕೆ ಹಾಗೂ ಪ್ಲಾಸ್ಟಿಕ್‌ ಮುಕ್ತ ವಲಯದ ಕುರಿತು ಸೂಕ್ತ ಪ್ರಚಾರ ಫಲಕ ಅಳವಡಿಸಬೇಕು. ಪ್ರವಾಸಿಗರು ತಿಂಡಿ ತಿನಿಸುಗಳನ್ನು ಎಲ್ಲಿಂದರಲ್ಲಿ ಎಸೆದು ಪರಿಸರ ಹಾಳುಗೆಡವದಂತೆ ನೋಡಿಕೊಳ್ಳಬೇಕು.
 ಡಾ| ಎಂ.ಲೋಕೇಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next