Advertisement
ವಾರಾಂತ್ಯ ಹಾಗೂ ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗಳು ಬರುತ್ತಾರೆ. ಆದರೆ, ಸಮರ್ಪಕ ರಸ್ತೆ, ಕುಡಿಯುವ ನೀರು, ತಾತ್ಕಾಲಿಕವಾಗಿ ತಂಗಲು ತಂಗುದಾನ ಮತ್ತಿತರ ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಕಾಡುತ್ತಿವೆ. ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಿರುವ ಮಹಾ ಕುಂಭಮೇಳ ಜರುಗುವ ತ್ರಿವೇಣಿ ಸಂಗಮ (ಮೂರು ನದಿ ಗಳು) ಹರಿಯಲಿದೆ. ತಲಕಾಡಿನಲ್ಲಿ ಪಂಚಲಿಂಗ ದೇವಾಲಯಗಳನ್ನು ಹೊಂದಿದೆ. ತಾಲೂಕಿನಲ್ಲಿ ಜರುಗುವ ಪ್ರಸಿದ್ಧ ಬ್ರಹ್ಮರಥೋತ್ಸವಗಳು, ಭಾರೀ ದನಗಳ ಜಾತ್ರೆ, ವಿಶೇಷ ವರ್ಷಗಳಲ್ಲಿ ಕಂಡುಬರುವ ತಲಕಾಡಿನ ಪಂಚಲಿಂಗ ದರ್ಶನಗಳು ಹಳೇ ಮೈಸೂರು ಭಾಗದಲ್ಲೇ ಖ್ಯಾತಿ ಪಡೆದಿವೆ.
Related Articles
Advertisement
ಮೂಗೂರು ತ್ರಿಪುರ ಸುಂದರಿ: ತಾಲೂಕಿನಲ್ಲಿ ಐತಿಹಾಸಿಕ ಮೂಗೂರು ತ್ರಿಪುರ ಸುಂದರಿ ದೇವಾಲಯವಿದ್ದು, ರಾಜ್ಯಾದ್ಯಂತ ಅಪಾರ ಸಂಖ್ಯೆಯಲ್ಲಿರುವ ಭಕ್ತರು ಇಲ್ಲಿ ನಡೆಯುವ ವಿವಿಧ ಉತ್ಸವ ಗಳಲ್ಲಿ ಪಾಲ್ಗೊಳ್ಳುವರು. ಮೈಸೂರು ಅರಸರು ಈ ದೇಗುಲಕ್ಕೆ ನಡೆದುಕೊಳ್ಳುತ್ತಿದ್ದರು.
ತ್ರಿವೇಣಿ ಸಂಗಮ: ತಿ.ನರಸೀಪುರದ ತಿರುಮಲಕೂಡಲಿನಲ್ಲಿ ಕಾವೇರಿ, ಕಪಿಲಾ, ಸ್ಫಟಿಕ ನದಿಗಳು ಕೂಡುವ ತ್ರಿವೇಣಿ ಸಂಗಮ ಇದೆ. ಅದೃಶ್ಯವಾಗಿ ಹರಿಯುವ ಸ್ಫಟಿಕ ಸರೋವರ ಯಾರ ಕಣ್ಣಿಗೂ ಕಾಣುಸುವುದಿಲ್ಲ. ಈ ಸಂಗಮದ ದಂಡೆಯಲ್ಲಿ ಅಗಸ್ತೇಶ್ವರ, ಭಿಕ್ಷೇಶ್ವರ ಹಾಗೂ ಗುಂಜಾ ನರಸಿಂಹಸ್ವಾಮಿ ದೇವಾಲಯಗಳು ಇವೆ. ಪ್ರತಿ 3 ವರ್ಷಕ್ಕೊಮ್ಮೆ ಮಹಾ ಕುಂಭಮೇಳ ನಡೆಯಲಿದೆ. ದಕ್ಷಿಣ ಭಾರತದಲ್ಲಿ ಜರುಗುವ ಅತಿ ದೊಡ್ಡ ಕುಂಭಮೇಳ ಇದಾಗಿದ್ದು, ಉತ್ತರ ಪ್ರದೇಶದ ವಾರಾಣಸಿ ಮಾದರಿಯಲ್ಲಿ ವೈಭವದ ಗಂಗಾಆರತಿಯನ್ನು ಬೆಳೆಗಲಾಗುತ್ತದೆ. ಈ ವೇಳೆ ಸಾಧು ಸಂತರು ಸೇರಿದಂತೆ ಲಕ್ಷಾಂತರ ಸಂಖ್ಯೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವರು.
ಪ್ರವಾಸೋದ್ಯಮಕ್ಕೆ ತುರ್ತು ಆಗಬೇಕಿರುವುದು ಏನು?: ದೇಗುಲಗಳ ತೊಟ್ಟಿಲು ಎಂದು ಕರೆಯಲ್ಪಡುವ ಈ ತಾಲೂಕಿನಲ್ಲಿ ಇಷ್ಟೆಲ್ಲ ವಿಶಿಷ್ಟ್ಯತೆಗಳಿದ್ದರೂ ಪ್ರವಾಸಿಗಳು ತಂಗಲು ಸೂಕ್ತ ವಸತಿ, ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಪ್ರಚಾರದ ಕೊರತೆಯಿಂದ ಇಲ್ಲಿನ ಪುಣ್ಯಕ್ಷೇತ್ರಗಳು, ತಾಣಗಳು ಹಳೇ ಮೈಸೂರು ಭಾಗಕ್ಕೆ ಸೀಮಿತವಾಗಿವೆ. ಪಂಚಲಿಂಗ ದರ್ಶನ, ಮಹಾ ಕುಂಭಮೇಳಕ್ಕೆ ಅಷ್ಟಾಗಿ ಪ್ರಚಾರವೇ ಸಿಗುತ್ತಿಲ್ಲ. ತ್ರಿವೇಣಿ ಸಂಗಮ, ಕಾವೇರಿ ತಟದಲ್ಲಿ ಮಕ್ಕಳಿಗೆ ಆಕರ್ಷಕ ಉದ್ಯಾನ, ಬೋಟಿಂಗ್ ವ್ಯವಸ್ಥೆ ಸೇರಿದಂತೆ ಮನರಂಜನೆ ಸಿಗುವಂತೆ ಮಾಡಬೇಕಿದೆ. ರಾಜ್ಯ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಚಿತ್ರನಟರು ಸೇರಿದಂತೆ ಸೆಲೆಬ್ರಿಟಿಗಳನ್ನು ರಾಯಭಾರಿಯನ್ನಾಗಿ ಮಾಡಿಕೊಂಡು ರಾಜ್ಯಾದ್ಯಂತ ಪ್ರಚಾರ ಸಿಗುವಂತೆ ಮಾಡಿ ಪ್ರವಾಸಿಗಳನ್ನು ಕೈಬೀಸಿ ಕರೆಯುವಂತೆ ಶಾಶ್ವತ ಅಭಿವೃದ್ಧಿ ಯೋಜನೆ ರೂಪಿಸಬೇಕಿದೆ.
ಸಚಿವರು ಗಮನ ಹರಿಸಲಿ: ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಡಾ| ಎಚ್.ಸಿ. ಮಹದೇವಪ್ಪ ಅವರು ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೂ ಆಗಿದ್ದಾರೆ. ಜತೆಗೆ ಸಿಎಂ ಅವರ ತವರು ಜಿಲ್ಲೆ ಕೂಡ ಆಗಿದೆ. ಈಗಾಗಲೇ ಮೂರ್‍ನಾಲ್ಕು ಬಾರಿ ಸಚಿವರೂ ಆಗಿದ್ದಾರೆ. ಪ್ರಸ್ತುತ ಸಮಾಜ ಕಲ್ಯಾಣ ಸಚಿವರಾಗಿರುವ ಮಹದೇವಪ್ಪ ಅವರು, ತಮ್ಮ ತವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮಂಜೂರು ಮಾಡಿಸಿ ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಿದೆ. ಪ್ರವಾಸಿ ತಾಣವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಸಮಗ್ರ ಯೋಜನೆ ರೂಪಿಸಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಪ್ರಾಚೀನ ಸ್ಮಾರಕ: ತಿ.ನರಸೀಪುರ ತಾಲೂಕು ಕೇಂದ್ರದಿಂದ 7 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಪ್ರಾಚೀನ ಸ್ಮಾರಕವಾಗಿರುವ ಸೋಮನಾಥಪುರ ಚನ್ನಕೇಶವ ದೇವಾಲಯ ಇದೆ. ಐತಿಹಾಸಿಕ ಹಲವು ವಿಶಿಷ್ಟತೆಯನ್ನು ಹೊಂದಿರುವ ಈ ದೇವಾಲಯವನ್ನು ಆಕರ್ಷಕವಾಗಿ ನಿರ್ಮಿಸಿದ್ದು, ಇಲ್ಲಿನ ಕಲಾಕೃತಿಗಳು ನೋಡುಗರ ಮನಸೂರೆಗೊಳ್ಳುತ್ತವೆ. ಈ ಪ್ರಾಚೀನ ದೇಗುಲವನ್ನು ಯೂನೆಸ್ಕೋ ಪಟ್ಟಿಗೆ ಸೇರಿಸಲು ರಾಜ್ಯದಿಂದ ಶಿಫಾರಸು ಕೂಡ ಮಾಡಲಾಗಿದೆ.
– ಎಸ್.ಬಿ.ಪ್ರಕಾಶ್